ಇದೇ ಮೊದಲ ಬಾರಿ ಜುಲೈ 16, 17ಕ್ಕೆ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಹೂಡಿಕೆ ಸಮಾವೇಶ
- ಇದೇ ಮೊದಲ ಬಾರಿ ಜು.16, 17ಕ್ಕೆ ರಾಜ್ಯ ಮಟ್ಟದ ಹೂಡಿಕೆ ಸಮಾವೇಶ
- ಬಂಡವಾಳ ಹೂಡಬನ್ನಿ - ಹುಬ್ಬಳ್ಳಿಯಲ್ಲಿ ಆಯೋಜನೆ
- ಸಿಎಂ ಬೊಮ್ಮಾಯಿಯಿಂದ ಸಮಾವೇಶ ಉದ್ಘಾಟನೆ
ಬೆಂಗಳೂರು (ಜು.14): ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಜಿಲ್ಲಾ ಮಟ್ಟದ ಮತ್ತು ಕೈಗಾರಿಕಾ ಸಂಘಗಳ ರಾಜ್ಯಮಟ್ಟದ ಸಮ್ಮೇಳನ ಹಾಗೂ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಜುಲೈ 16 ಮತ್ತು 17ರಂದು ಹುಬ್ಬಳ್ಳಿಯ ಡೆನಿಸನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಸಿಎ ಐ.ಎಸ್.ಪ್ರಸಾದ್ ಅವರು, ಭಾರತವನ್ನು 2025ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ ದೇಶವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಪ್ರಧಾನಿ ನರೇಂದ್ರಮೋದಿ ಹೊಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ರಾಜ್ಯವನ್ನು 1.5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ ರಾಜ್ಯವನ್ನಾಗಿ ಮಾಡಿ ದೇಶದಲ್ಲಿಯೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಪಣತೊಟ್ಟಿದ್ದಾರೆ. ಅದಕ್ಕೆ ಎಫ್‌ಕೆಸಿಸಿಐ ಕೈಜೋಡಿಸಿದೆ. ನವ ಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ಎಂಬ ಹೊಸ ಘೋಷಣೆ ಯೊಂದಿಗೆ ನಾವೆಲ್ಲ ಕೈಜೋಡಿಸಿದ್ದೇವೆ ಎಂದರು.
ಪ್ರಸಕ್ತ ಸಮ್ಮೇಳನದಲ್ಲಿ ಈ ಮಹತ್ವದ ಗುರಿಗಳನ್ನು ಸಾಧಿಸಲು ಮತ್ತು ಕರ್ನಾಟಕದಿಂದ ಎಲ್ಲಾ ಕ್ಷೇತ್ರಗಳಿಂದ ಅತಿ ಹೆಚ್ಚಿನ ಕೊಡುಗೆಯನ್ನು ನೀಡಲು ಶಕ್ಯವಾಗುವಂತೆ ಹಾಗೂ ಎಲ್ಲ ಜಿಲ್ಲೆಗಳ ಕೈಗಾರಿಕಾ, ವಾಣಿಜ್ಯ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸದಸ್ಯರಿಗೆ ಉಪಯುಕ್ತವಾಗುವಂತಹ ಉಪನ್ಯಾಸ, ಚರ್ಚಾಗೋಷ್ಠಿ ಭಾಷಣಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಬೊಮ್ಮಾಯಿ ಅವರು ಸಮ್ಮೇಳನ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕಾ ಸಚಿವ ಡಾ. ಮುರುಗೇಶ್ ನಿರಾಣಿ, ಇಂಧನ ಸಚಿವ ಸುನಿಲ್ ಕುಮಾರ್, ಅಮೆಜಾನ್ ಕಂಪನಿ ಪಬ್ಲಿಕ್ ಪಾಲಿಸಿ ಮುಖ್ಯಸ್ಥ ಉದಯ ಮೆಹತಾ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಏನು ಇರಲಿದೆ?: ಸಮ್ಮೇಳನದಲ್ಲಿ ರಾಜ್ಯದ ಕೈಗಾರಿಕಾ ನೀತಿ ಹಾಗೂ ವಿವಿಧ ಇಲಾಖೆಗಳ ನೀತಿ, ಇನ್‌ವೆಸ್ಟ್ ಕರ್ನಾಟಕ ಯೋಜನೆ ಹಾಗೂ ಕರ್ನಾಟಕದಲ್ಲಿ ಹೊಸ ಬಂಡವಾಳ ಹೂಡಿಕೆ ಸಾಧ್ಯತೆ, ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಕ್ಷೇತ್ರದ ಬಂಡವಾಳ ಹೂಡಿಕೆ ಸಾಧ್ಯತೆಗಳು ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ, ಕೈಗಾರಿಕಾ ಗುಣಮಟ್ಟದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಜುಲೈ 17ರಂದು ಬೆಳಗ್ಗೆ 9ಕ್ಕೆ ಗದಗದ ಶ್ರೀ ಶಿವಾನಂದ ಬೃಹನ್ಮಠದ ಶಿವಾನಂದ ಮಹಾ ಸ್ವಾಮೀಜಿ ಅವರು, ಆಧ್ಯಾತ್ಮಿಕತೆ ಕುರಿತು ಉಪನ್ಯಾಸ ನೀಡುವರು. ಅಮೆಜಾನ್ ಕಂಪನಿಯ ಹಿರಿಯ ಅಧಿಕಾರಿಗಳು ಇ-ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳ ಕುರಿತು ಮಾತನಾಡುವರು. ಭಾರತೀಯ ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಕೆ.ಉಲ್ಲಾಸ್ ಕಾಮತ್ ಕ್ಲಸ್ಟರ್ ಆಧಾರಿತ ಉದ್ದಿಮೆಗಳ ಬಗ್ಗೆ ಮತ್ತು ಹೊಸ ಬಂಡವಾಳ ಹೂಡಿಕೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಅಮೆಜಾನ್‌ನೊಂದಿಗೆ ಒಪ್ಪಂದ: ಎಫ್‌ಕೆಸಿಸಿ ಐ ಸಂಸ್ಥೆಯು ಇ-ಕಾಮರ್ಸ್ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಅಮೆಜಾನ್ ಕಂಪನಿಯೊಂದಿಗೆ ರಾಜ್ಯದಲ್ಲಿ ಇ-ಕಾಮರ್ಸ್ ಅಭಿವೃದ್ಧಿಗಾಗಿ ಒಂದು ಒಪ್ಪಂದವನ್ನು ಮಾಡಿಕೊಂಡಿದೆ. ಅದರ ಅನ್ವಯ ರಾಜ್ಯದಲ್ಲಿ ಯುವಕರಿಗೆ ಇ-ಕಾಮರ್ಸ್ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಇರುವ ಅವಕಾಶಗಳು ಮತ್ತು ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ತರಬೇತಿಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.