ನವದೆಹಲಿ[ಸೆ.13]: ಪ್ರಸಿದ್ಧ ತನಿಖಾ ಸಂಸ್ಥೆಯಾದ ವಿಕಿಲೀಕ್ಸ್‌ ಸ್ವಿಸ್‌ ಬ್ಯಾಂಕ್‌ನಲ್ಲಿ ಹಣ ಕೂಡಿಟ್ಟ ಕಾಳಧನಿಕ ಭಾರತೀಯರ ಹೆಸರನ್ನು ಪಟ್ಟಿಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ವಿಕಿಲೀಕ್ಸ್‌ 30 ಕಾಳಧನಿಕರ ಹೆಸರನ್ನು ಒಳಗೊಂಡ ಮೊದಲ ಪಟ್ಟಿ ಬಿಡುಗಡೆ ಮಾಡಿದೆ ಎಂದು ಬರೆದು ಅಸಾಸುದ್ದೀನ್‌ ಓವೈಸಿ, ಯು.ಟಿ ಖಾದರ್‌, ಸಿದ್ದರಾಮಯ್ಯ, ಮಮತಾ ಬ್ಯಾನರ್ಜಿ, ಅಖಿಲೇಶ್‌ ಯಾದವ್‌, ಸೋನಿಯಾ ಗಾಂಧಿ, ಚಿದಂಬರಂ, ಡಿ.ಕೆ ಶಿವಕುಮಾರ್‌, ಅಹ್ಮದ್‌ ಪಟೇಲ್‌, ಮಾಯಾವತಿ ಮತ್ತು ರಾಹುಲ್‌ ಗಾಂಧಿ ಸೇರಿ ಹಲವರ ಹೆಸರುಗಳನ್ನು ಒಳಗೊಂಡ ಪಟ್ಟಿ ನೀಡಲಾಗಿದೆ. ಇದರೊಂದಿಗೆ, ‘ಸ್ವಿಸ್‌ ಬ್ಯಾಂಕ್ನಲ್ಲಿ ಭಾರತದ ಸುಮಾರು 2000 ಕಾಳ ಧನಿಕರು ಹಣವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ. ಈ ಹಣ ವಾಪಸ್ಸಾದರೆ ಭಾರತ ಮುಂದಿನ 100 ವರ್ಷ ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವಾಗಲಿದೆ. ನೀವು ನಿಜಕ್ಕೂ ಭಾರತೀಯರಾಗಿದ್ದರೆ ಈ ಸಂದೇಶವನ್ನು ಫಾರ್ವರ್ಡ್‌ ಮಾಡಿ ಎಂದು ಹೇಳಲಾಗುತ್ತಿದೆ.

ಆದರೆ ನಿಜಕ್ಕೂ ವಿಕಿಲೀಕ್ಸ್‌ ಕಾಳಧನಿಕರ ಪಟ್ಟಿಮಾಡಿದೆಯೇ ಎಂದು ಪರಿಶೀಲಿಸಿದಾಗ ಇದೇ ಸಂದೇಶ 2011ರಿಂದಲೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ. ಆದರೆ ಕೆಲವು ಪಟ್ಟಿಗಳಲ್ಲಿ ಬಿಜೆಪಿಗರ ಹೆಸರು ಮತ್ತೆ ಕೆಲ ಪಟ್ಟಿಗಳಲ್ಲಿ ಕಾಂಗ್ರೆಸಿಗರ ಹೆಸರಿವೆ. ವಾಸ್ತವವಾಗಿ ಸ್ವಿಸ್‌ ಬ್ಯಾಂಕ್‌ ಕಾಳಧನಿಕರ ಬಗ್ಗೆ ಇತ್ತೀಚೆಗೆ ವಿಕಿಲೀಕ್ಸ್‌ ವರದಿ ಮಾಡಿಲ್ಲ. ಇನ್ನು ಹಳೆಯ ಸುದ್ದಿ ಬಗ್ಗೆ 2011ರಲ್ಲಿಯೇ ವಿಕಿಲೀಕ್ಸ್‌ ಸ್ಪಷ್ಟನೆ ನೀಡಿ ಇದು ನಕಲಿ ಪಟ್ಟಿ ಎಂದಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಫ್ಕಾಕ್ಟ್ ಚೆಕ್ ಮಾಡಿಕೊಳ್ಳಿ..