ಒಂದು ಟ್ವೀಟ್ ಮಾಡಿ 8800 ಕೋಟಿ ರು. ಕಳೆದುಕೊಂಡ ಮಸ್ಕ್!
ಒಂದು ಟ್ವೀಟ್ ಮಾಡಿ 8800 ಕೋಟಿ ರು. ಕಳೆದುಕೊಂಡ ಮಸ್ಕ್!| ಹಣದ ಜೊತೆ ನಂ. 1 ಶ್ರೀಮಂತನ ಪಟ್ಟವೂ ಹೋಯ್ತು
ವಾಷಿಂಗ್ಟನ್(Pe.೨೪): ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿದ್ದ ಅಮೆರಿಕದ ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್, ಸೋಮವಾರ ತಾವೇ ಮಾಡಿದ ಒಂದು ಟ್ವೀಟ್‌ನಿಂದ ಭರ್ಜರಿ 8800 ಕೋಟಿ ರು. ಕಳೆದುಕೊಂಡಿದ್ದಾರೆ. ಅಲ್ಲದೆ ವಿಶ್ವದ ನಂ.1 ಶ್ರೀಮಂತ ಎಂಬ ಪಟ್ಟವೂ ಅವರ ಕೈತಪ್ಪಿದೆ.
ಇದಕ್ಕೆಲ್ಲಾ ಕಾರಣವಾಗಿದ್ದು ಮಸ್ಕ್ ಮಾಡಿದ್ದ ಟ್ವೀಟ್. ಕೆಲ ದಿನಗಳ ಹಿಂದೆ ಮಸ್ಕ್ ಅವರು ತಾವು ಅಂದಾಜು 1.5 ಶತಕೋಟಿ ಡಾಲರ್ (ಅಂದಾಜು 11000 ಕೋಟಿ ರು.) ಮೌಲ್ಯದ ಡಿಜಿಟಲ್ ಕರೆನ್ಸಿ ಬಿಟ್ ಕಾಯಿನ್ ಖರೀದಿಸಿದ್ದಾಗಿ ಘೋಷಿಸಿದ್ದರು. ಅಲ್ಲದೆ ಕಂಪನಿ ವಾಹನ ಖರೀದಿ ಮಾಡುವವರಿಗೆ ಬಿಟ್‌ಕಾಯಿನ್ ಮೂಲಕವೇ ಖರೀದಿ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಅವರ ಈ ಘೋಷಣೆ ಬೆನ್ನಲ್ಲೇ ಬಿಟ್‌ಕಾಯಿನ್ ಮೌಲ್ಯ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿತ್ತು
ಅದರ ಬೆನ್ನಲ್ಲೇ ಸೋಮವಾರ ಟ್ವೀಟ್ ಮಾಡಿದ್ದ ಮಸ್ಕ್, ಬಿಟ್‌ಕಾಯಿನ್ ಮತ್ತು ಮತ್ತೊಂದು ಡಿಜಿಟಲ್ ಕರೆನ್ಸಿಯಾದ ಎಥರ್‌ನ ಮೌಲ್ಯ ಸ್ವಲ್ಪ ದುಬಾರಿ ಎಂದಿದ್ದರು. ಅದರ ಬೆನ್ನಲ್ಲೇ ಬಿಟ್‌ಕಾಯಿನ್ ಮೌಲ್ಯ ಇಳಿಕೆ ಕಂಡಿದೆ. ಜೊತೆಗೆ ಟೆಸ್ಲಾ ಕಂಪನಿಯ ಷೇರು ಮೌಲ್ಯ ಕೂಡಾ ಶೇ.8.6ರಷ್ಟು ಕುಸಿತ ಕಂಡಿತು. ಹೀಗಾಗಿ ಒಂದೇ ದಿನದಲ್ಲಿ ಮಸ್ಕ್ ಅವರ ಆಸ್ತಿ ಮೌಲ್ಯ ಅಂದಾಜು 8800 ಕೋಟಿ ರು.ನಷ್ಟು ಇಳಿದಿದೆ. ಸದ್ಯ ವಿಶ್ವ ನಂ.2 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಮಸ್ಕ್ ಆಸ್ತಿ 13.50 ಲಕ್ಷ ಕೋಟಿ ರು.ನಷ್ಟಿದೆ.