ಅಕ್ಟೋಬರ್ 1ರಿಂದ ಮತ್ತೆ ಗ್ರಾಹಕರಿಗೆ ತಟ್ಟಲಿದೆ ವಿದ್ಯುತ್ ಹೊರೆ
ರಾಜ್ಯದ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ತತ್ತರಿಸೋ ಜನ ನಾಳೆಯಿಂದ ಹೆಚ್ಚುವರಿ ಶುಲ್ಕ ಕಟ್ಟಬೇಕಾದ ಸ್ಥಿತಿ ಬಂದಿದೆ. ಬೆಲೆ ಏರಿಕೆ ಬಿಸಿ ನಡುವೆ ಕೆಇಆರ್ಸಿ ಅಕ್ಟೋಬರ್ 1 ರಿಂದ ಅಂದರೆ ನಾಳೆಯಿಂದ ಪ್ರತಿ ಯೂನಿಟ್ ಮೇಲೆ 23 ಪೈಸೆಯಿಂದ 43 ಪೈಸೆವರಿಗೆ ಏರಿಕೆ ಮಾಡಿ ಈಗಾಗಲೇ ಆದೇಶಿಸಿದೆ.
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಸೆ.30); ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗಕ್ಕೇರುತ್ತಿದೆ. ಜನಸಾಮಾನ್ಯರಂತೂ ಜೀವನ ಮಾಡೋಕೆ ಸಾಧ್ಯವಾಗ್ತಿಲ್ಲ. ಇದೀಗ ರಾಜ್ಯದ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ತತ್ತರಿಸೋ ಜನ ನಾಳೆಯಿಂದ ಹೆಚ್ಚುವರಿ ಶುಲ್ಕ ಕಟ್ಟಬೇಕಾದ ಸ್ಥಿತಿ ಬಂದಿದೆ. ಬೆಲೆ ಏರಿಕೆ ಬಿಸಿ ನಡುವೆ ಕೆಇಆರ್ಸಿ ಅಕ್ಟೋಬರ್ 1 ರಿಂದ ಅಂದರೆ ನಾಳೆಯಿಂದ ಪ್ರತಿ ಯೂನಿಟ್ ಮೇಲೆ 23 ಪೈಸೆಯಿಂದ 43 ಪೈಸೆವರಿಗೆ ಏರಿಕೆ ಮಾಡಿ ಈಗಾಗಲೇ ಆದೇಶಿಸಿದೆ. ಇದು ನಾಳೆಯಿಂದ ಅನ್ವಯವಾಗ್ತಿದೆ. ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ಮುಂದಿನ ಮೇ ಅಂತ್ಯದವರೆಗೆ ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್ ದರಕ್ಕೆ 24 ಪೈಸೆಯಿಂದ ರಿಂದ 43ಪೈಸೆವರೆಗೆ ಹೆಚ್ಚುವರಿ ದರವನ್ನು ಇಂಧನ ಹೊಂದಾಣಿಕೆ ವೆಚ್ಚ ಶುಲ್ಕ ರೂಪದಲ್ಲಿ ಸಂಗ್ರಹಿಸಲು ಅವಕಾಶ ಕಲ್ಪಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.
2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಲಿದ್ದಲು ಖರೀದಿ ದರ ಏರಿಕೆಯಿಂದಾಗಿ ಎಸ್ಕಾಂಗಳಿಗೆ ಆರ್ಥಿಕ ಹೊರೆ ಬಿದ್ದಿದೆ. ಇದನ್ನು ಸರಿದೂಗಿಸಲು ಇಂಧನ ಹೊಂದಾಣಿಕೆ ವೆಚ್ಚ ಶುಲ್ಕ ಆರು- ಏಳು ತಿಂಗಳ ಅವಧಿಗೆ ಪ್ರತಿ ಯೂನಿಟ್ ವಿದ್ಯುತ್ ದರದ ಮೇಲೆ ಹೆಚ್ಚುವರಿ ದರ ವಿಧಿಸಲು ಕೆಇಆರ್‌ಸಿ ಅವಕಾಶ ನೀಡಿದೆ. ಈ ಸಂಬಂಧ ಎಸ್ಕಾಂಗಳು ನಾನಾ ಪ್ರಮಾಣದಲ್ಲಿ ಎಫ್‌ಎಸಿ ಶುಲ್ಕ ಸಂಗ್ರಹಕ್ಕಾಗಿ ಅನುಮತಿ ಕೋರಿ ಆಯೋಗಕ್ಕೆ ಪ್ರಸ್ತಾಪ ಸಲ್ಲಿಸಿದ್ದವು. ಅದರಂತೆ ಪ್ರತಿ ಯೂನಿಟ್ ದರ ಮೇಲೆ ಬೆಸ್ಕಾಂ ವ್ಯಾಪ್ತಿಯಲ್ಲಿ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕಾಂ 35 ಪೈಸೆ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಪರಿಷ್ಕರಣೆ ಮಾಡಲಾಗಿದೆ.
ಜನರಿಗೆ ಸಿಕ್ಕಪಟ್ಟೆ ವಿದ್ಯುತ್ ದರ ಏರಿಕೆ ಮಾಡಿ ವಿದ್ಯುತ್ ಸರಬರಾಜು ಕಂಪನಿಗಳು ಫುಲ್ ಸೈಲೆಂಟ್ ಆಗಿವೆ. ಕಳೆದ ಮೂರು ತಿಂಗಳ ಹಿಂದೆ ವಿದ್ಯುತ್ ದರ ಪರಿಷ್ಕರಣೆ ಆಗಿದ್ರೂ ಮತ್ತೆ ನಷ್ಟದ ನೆಪವೊಡ್ಡಿ ನಾಳೆಯಿಂದ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗ್ತಿದೆ. ಇತ್ತ ಮೂರು ತಿಂಗಳಿಗೊಮ್ಮೆ ವಿದ್ಯುತ್ ನಿಗಮ ಬರೆ ಹಾಕ್ತಿರೋದಕ್ಕೆ ವಿರೋಧ ಕೇಳಿ ಬರ್ತಿದೆ.
ವಿದ್ಯುತ್ ದರ ಏರಿಕೆ ಶಾಕ್: ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ
ಈ ಆರ್ಥಿಕ ವರ್ಷದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುವ ಜತೆಗೆ ಕಲ್ಲಿದ್ದಲು ದರವೂ ಏರಿಕೆಯಾಗಿದೆ. ಹೀಗಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ..ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಕಂಪನಿಗಳು ನಷ್ಟದಲ್ಲಿ ಇವೆ. ಹೀಗಾಗಿ ಆರ್ಥಿಕವಾಗಿ ನಷ್ಟದಲ್ಲಿರುವ ಎಸ್ಕಾಂಗಳು ತಾತ್ಕಾಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಲಾಗಿದೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದೆ. ಆದ್ರೆ ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದ್ದಂತೂ ನಿಜ.
ಕಲಾಪ ಮುಗಿಯುತ್ತಿದ್ದಂತೆ ವಿದ್ಯುತ್ ದರ ಏರಿಕೆ: ಎಚ್‌ಡಿಕೆ ಕಿಡಿ
ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗ್ತಿದ್ದ ಸರ್ಕಾರ ಇದೀಗ ಮತ್ತೆ ಜುಲೈ ಹಾಗೂ ಅಕ್ಟೋಬರ್ 1 ರಿಂದಲೂ ದರ ಪರಿಷ್ಕರಣೆ ಮಾಡಿರೋದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ದುಬಾರಿ ದುನಿಯಾದಲ್ಲಿ ಜೀವನ ಮಾಡೋದು ಕಷ್ಟ ಅನ್ನುತ್ತಿದ್ದ ಜನಸಾಮಾನ್ಯರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ.