Asianet Suvarna News Asianet Suvarna News

ಭಾರತದ ಆರ್ಥಿಕತೆ ಸ್ಥಿರತೆಯತ್ತ, ಮೂಡೀಸ್‌ ಭವಿಷ್ಯ

* ನೆಗೆಟಿವ್‌ನಿಂದ ಮೇಲೇ​ಳ​ಲಿದೆ ಆರ್ಥಿ​ಕ​ತೆ

* ಭಾರತದ ಆರ್ಥಿಕತೆ ಸ್ಥಿರತೆಯತ್ತ: ಮೂಡೀಸ್‌ ಭವಿಷ್ಯ

* 2021-22ರಲ್ಲಿ ಜಿಡಿಪಿ ಶೇ.9.3ಕ್ಕೆ ಜಿಗಿತದ ಅಂದಾ​ಜು

* 2019ರಲ್ಲಿ ಋುಣಾತ್ಮಕ ಆರ್ಥಿಕತೆ ಎಂದು ಗುರುತಿಸಿದ್ದ ಸಂಸ್ಥೆ

Economy Healing Moody Revises India Rating Outlook From Negative to Stable pod
Author
Bangalore, First Published Oct 6, 2021, 8:55 AM IST

ನವದೆಹಲಿ(ಅ.06): ಏಷ್ಯಾದ(Asia) 3ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿರುವ ಭಾರತವು ಇದೇ ಆರ್ಥಿಕ ವರ್ಷದಲ್ಲಿ(Financial Year) ಕೊರೋನಾ ಪೂರ್ವಾವಧಿಗಿಂತಲೂ ಹೆಚ್ಚು ಅಭಿವೃದ್ಧಿ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್ಸ್‌ ಏಜೆನ್ಸಿಯಾದ ಮೂಡೀಸ್‌(Moody's) ಅಂದಾಜಿಸಿದೆ. ಅಲ್ಲದೆ ಸುಧಾರಣೆ ಕಾಣುತ್ತಿರುವ ಭಾರತದ ಆರ್ಥಿಕತೆಯು(Indian Economy) ಋುಣಾತ್ಮಕತೆಯಿಂದ ಸ್ಥಿರತೆಯತ್ತ ದಾಪುಗಾಲು ಹಾಕಿದೆ. ಭಾರತದ ಜಿಡಿಪಿಯು ಶೇ.6ರಷ್ಟುಅಭಿವೃದ್ಧಿ ಕಾಣಲಿದೆ ಎಂದು ಅದು ಭವಿಷ್ಯ ನುಡಿದಿದೆ.

2021-2022ನೇ ಆರ್ಥಿಕ ವರ್ಷದಲ್ಲಿ ಭಾರತದ ಅಭಿವೃದ್ಧಿ ದರವು ಶೇ.9.3ರೊಂದಿಗೆ ಕೊರೋನಾ ಪೂರ್ವದ 2019ನೇ ವರ್ಷದ ಅಭಿವೃದ್ಧಿ ದರವನ್ನು ಮೀರಿಸಲಿದೆ. ಆ ಬಳಿಕ ಮುಂದಿನ ಹಣಕಾಸು ವರ್ಷದಲ್ಲಿ ಮತ್ತೆ ಶೇ.7.9ಕ್ಕೆ ತಲುಪಲಿದೆ ಎಂದು ಮೂಡೀಸ್‌ ಅಂದಾಜಿಸಿದೆ.

ಆದಾಗ್ಯೂ, ಭಾರತದ ಶ್ರೇಷ್ಠತೆಯ ರೇಟಿಂಗ್‌ ಅನ್ನು ಕಡಿಮೆ ಹೂಡಿಕೆಯನ್ನು ಹೊಂದಿದ ಬಿಎಎ-3 ಎಂದು ಗುರುತಿಸಲಾಗಿದೆ. 2019ರಲ್ಲಿ ಭಾರತದ ಆರ್ಥಿಕತೆಯನ್ನು ಋುಣಾತ್ಮಕ ಎಂದು ಗುರುತಿಸಲಾಗಿತ್ತು. ಆದರೆ ಇದೀಗ ಆರ್ಥಿಕತೆ ಮತ್ತು ಹಣಕಾಸು ಸಂಸ್ಥೆಗಳಿಗೆ ನಷ್ಟವಾಗುವ ಸಾಧ್ಯತೆ ಕ್ಷೀಣಿಸಿರುವುದರ ಹಿನ್ನೆಲೆಯಲ್ಲಿ ಇದೀಗ ಭಾರತದ ಆರ್ಥಿಕತೆಯನ್ನು ಋುಣಾತ್ಮಕತೆಯಿಂದ ಸ್ಥಿರತೆಗೆ ಮೇಲ್ದರ್ಜೆಗೇರಿಸಲಾಗಿದೆ.

ಚೇತ​ರಿ​ಕೆಗೆ ಕಾರಣ ಏನು?:

ಚುರುಕು ಕೋವಿಡ್‌ ಲಸಿಕೆ ಅಭಿಯಾನದ ಮುಖಾಂತರ ದೇಶವನ್ನು ಕೊರೋನಾ ವೈರಸ್‌ನಿಂದ ಬಚಾವ್‌ ಮಾಡಿರುವುದು. ಕೋವಿಡ್‌ ನಿಯಂತ್ರಣಕ್ಕೆ ಕೆಲವೇ ಕೆಲವು ಕ್ಷೇತ್ರಗಳ ಮೇಲೆ ನಿರ್ಬಂಧ ವಿಧಿಸಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿರುವುದು ಭಾರತದ ರೇಟಿಂಗ್‌ ಅನ್ನು ಮೇಲ್ದರ್ಜೆಗೆ ಏರಿಸಲು ಕಾರಣವಾಗಿದೆ ಎಂದು ಮೂಡೀಸ್‌ ತನ್ನ ವರದಿಯಲ್ಲಿ ತಿಳಿಸಿದೆ.

ಕೊರೋನಾ ಅವಧಿಯಲ್ಲಿ ಕಾರ್ಮಿಕರ ಕಾನೂನು, ಕೃಷಿ ವಲಯಕ್ಕೆ ಉತ್ತೇಜನ, ಮೂಲಸೌಕರ್ಯಗಳ ಮೇಲಿನ ಹೂಡಿಕೆ ಹೆಚ್ಚಳ, ಉತ್ಪಾದನಾ ವಲಯಕ್ಕೆ ಹೆಚ್ಚಿನ ಹೂಡಿಕೆ, ಹಣಕಾಸು ವಲಯದ ಬಲವರ್ಧನೆ ಸೇರಿದಂತೆ ಕೇಂದ್ರ ಸರ್ಕಾರ ಇನ್ನಿತರ ಸುಧಾರಣೆ ಕ್ರಮ ಕೈಗೊಂಡಿದೆ. ಈ ಎಲ್ಲಾ ಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ, ಭಾರತದ ಆರ್ಥಿಕತೆಯು ನಿರೀಕ್ಷೆಗಿಂತಲೂ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಮೂಡೀಸ್‌ ಹೇಳಿದೆ.

ಆದರೆ 2019ರಲ್ಲಿ ಜಿಡಿಪಿಯ ಶೇ.74ರಷ್ಟಿದ್ದ ಭಾರತ ಸರ್ಕಾರದ ಒಟ್ಟಾರೆ ಸಾಲದ ಮೌಲ್ಯವು 2020ರಲ್ಲಿ ಜಿಡಿಪಿಯ ಶೇ.89ರಷ್ಟಿತ್ತು ಎಂದು ಕಳವಳ ವ್ಯಕ್ತಪಡಿಸಿದೆ.

Follow Us:
Download App:
  • android
  • ios