ಇಡೀ ವಿಶ್ವಕ್ಕೆ ಟ್ರಂಪ್ ತೆರಿಗೆ ಶಾಕ್ : ಸ್ಟೀಲ್ ಮತ್ತು ಅಲ್ಯುಮಿನಿಯಂ ಮೇಲಿನ ಆಮದು ತೆರಿಗೆ ಹೆಚ್ಚಳ
ಅಮೆರಿಕ ಅಧ್ಯಕ್ಷ ಟ್ರಂಪ್ ವಿದೇಶಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದು, ಇದು ಜಾಗತಿಕ ತೆರಿಗೆ ಯುದ್ಧಕ್ಕೆ ಕಾರಣವಾಗಿದೆ. ಈ ಕ್ರಮದಿಂದ ಭಾರತದ ರಫ್ತಿಗೆ ಆತಂಕ ಎದುರಾಗಿದ್ದು, ವಿಶ್ವದ ಶ್ರೀಮಂತರಿಗೆ ಭಾರಿ ನಷ್ಟವಾಗಿದೆ.

ವಾಷಿಂಗ್ಟನ್ (ಮಾ.13): ಅಧಿಕಾರಕ್ಕೆ ಬಂದ ಬಳಿಕ ವಿದೇಶಿ ವಸ್ತುಗಳ ಮೇಲೆ ಭಾರಿ ತೆರಿಗೆ ಘೋಷಣೆ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಸ್ಟೀಲ್ ಮತ್ತು ಅಲ್ಯುಮಿನಿಯಂ ಮೇಲಿನ ಆಮದು ತೆರಿಗೆಯನ್ನು ಶೇ.25ರಷ್ಟು ಹೆಚ್ಚಿಸುವ ಮೂಲಕ ಅಧಿಕೃತವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರಿಗೆ ಯುದ್ಧದ ಕಿಡಿಹಚ್ಚಿದ್ದಾರೆ. ಬುಧವಾರದಿಂದಲೇ ಹೆಚ್ಚಳ ಜಾರಿಗೆ ಬಂದಿದೆ. ಯಾವುದೇ ತೆರಿಗೆ ವಿನಾಯ್ತಿ ಇಲ್ಲದೆ ಈ ತೆರಿಗೆಯನ್ನು ಜಾರಿಗೆ ತರಲಾಗಿದ್ದು, ಕುಸಿಯುತ್ತಿರುವ ಅಮೆರಿಕದ ಆರ್ಥಿಕತೆಯ ವೇಗವನ್ನು ಈ ತೆರಿಗೆಯಿಂದ ಸಂಗ್ರಹಿಸಿದ ಹಣದಿಂದ ಮೇಲೆತ್ತಲು ಸಾಧ್ಯವಾಗಲಿದೆ. ತೆರಿಗೆ ಹಣದಿಂದ ದೇಶೀ ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ ಸಿಗಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಕೆನಡಾ, ಮೆಕ್ಸಿಕೋ ಮತ್ತು ಚೀನಾ ಮೇಲೆ ಪ್ರತ್ಯೇಕ ತೆರಿಗೆ ಹೇರಿರುವ ಅವರು, ಬ್ರೆಜಿಲ್, ದಕ್ಷಿಣ ಕೊರಿಯಾ ಮತ್ತು ಯುರೋಪಿಯನ್ ಯೂನಿಯನ್‌ನಿಂದ ಆಮದು ಮಾಡುವ ವಸ್ತುಗಳ ಮೇಲೂ ಏ.2ರಿಂದ ತೆರಿಗೆ ವಿಧಿಸಲು ಮುಂದಾಗಿದ್ದಾರೆ.
ಬ್ಯುಸಿನೆಸ್ ರೌಂಡ್‌ಟೇಬಲ್‌ನಲ್ಲಿ ಸಿಇಒಗಳನ್ನುದ್ದೇಶಿಸಿ ಮಾತನಾಡಿದ ಟ್ರಂಪ್ ಅವರು, ಈ ರೀತಿಯ ತೆರಿಗೆಯಿಂದ ಅಮೆರಿಕದ ಫ್ಯಾಕ್ಟರಿಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ. ಅನೇಕ ಕಂಪನಿಗಳು ಅಮೆರಿಕದಲ್ಲೇ ಉತ್ಪಾದನೆ ಆರಂಭಿಸಲಿವೆ ಎಂದು ಹೇಳಿದ್ದಾರೆ. ಒಂದು ವೇಳೆ ಕಂಪನಿಗಳು ನಮ್ಮ ದೇಶದಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿಸಿದರೆ ಅದು ನಮ್ಮ ಪಾಲಿಗೆ ಬಹುದೊಡ್ಡ ಗೆಲುವಾಗಲಿದೆ. ತೆರಿಗೆ ಹೆಚ್ಚಳದಿಂದ ದೇಶಕ್ಕೆ ಹೆಚ್ಚಿನ ಹಣ ಹರಿದು ಬರಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕಕ್ಕೆ ಅತಿದೊಡ್ಡ ಸ್ಟೀಲ್ ಮತ್ತು ಅಲ್ಯುಮಿನಿಯಂ ಪೂರೈಕೆದಾರ ದೇಶ ಕೆನಡಾವಾಗಿದ್ದು, ಅಲ್ಲಿಂದ ಆಮದು ಮಾಡಿಕೊಳ್ಳುವ ಅಲ್ಯುಮಿನಿಯಂ ಮತ್ತು ಸ್ಟೀಲ್ ಮೇಲಿನ ಆಮದು ಸುಂಕವನ್ನು ಶೇ.50ರಷ್ಟು ಹೆಚ್ಚಿಸುವುದಾಗಿ ಈ ಹಿಂದೆ ಟ್ರಂಪ್ ಹೇಳಿದ್ದರು. ಆದರೆ, ಕೆನಡಾದ ಒಂಟಾರಿಯೋದಿಂದ ಅಮೆರಿಕದ ನ್ಯೂಯಾರ್ಕ್, ಮಿಚಿಗನ್ ಮತ್ತಿತರ ಪ್ರದೇಶಗಳಿಗೆ ಪೂರೈಕೆಯಾಗುತ್ತಿರುವ ವಿದ್ಯುತ್ ಮೇಲೆ ಹೆಚ್ಚುವರಿ ಕರ ವಿಧಿಸುವ ಬೆದರಿಕೆ ಹಿನ್ನೆಲೆಯಲ್ಲಿ ಶೇ.25ರಷ್ಟು ತೆರಿಗೆ ಹೇರಲು ನಿರ್ಧರಿಸಲಾಗಿದೆ.
ಅಮೆರಿಕದ ಮೇಲೆ ಪ್ರತಿ ತೆರಿಗೆ ಹೇರಲು ಯುರೋಪ್ ನಿರ್ಧಾರ
ಬ್ರಸೆಲ್ಸ್: ಸ್ಟೀಲ್ ಮತ್ತು ಅಲ್ಯುಮಿನಿಯಂ ಮೇಲಿನ ತೆರಿಗೆ ಹೆಚ್ಚಿಸುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ, ಪ್ರತಿ ತೆರಿಗೆ ಹೇರಲು ಯುರೋಪ್ ಯೂನಿಯನ್ ಸಿದ್ಧವಾಗಿವೆ. ಅಮೆರಿಕದಿಂದ ಆಮದಾಗುವ ಕೈಗಾರಿಕೆ ಮತ್ತು ಕೃಷಿ ಉತ್ಪನ್ನಗಳ ಮೇಲೆ ಪ್ರತಿ ತೆರಿಗೆ ಹೇರುವುದಾಗಿ ಯುರೋಪಿಯನ್ ಯೂನಿಯನ್ ಘೋಷಿಸಿದೆ. ಏ.1ರಿಂದಲೇ ಈ ತೆರಿಗೆ ಜಾರಿಗೆ ಬರಲಿದೆ. ಅಮೆರಿಕವು 2.44ಲಕ್ಷ ಕೋಟಿ ತೆರಿಗೆ ಹೇರುವ ನಿರ್ಧಾರ ಪ್ರಕಟಿಸಿದ್ದು, ಯುರೋಪಿಯನ್ ಆಯೋಗ ಕೂಡ ಅಷ್ಟೇ ಪ್ರಮಾಣದ ಪ್ರತಿ ತೆರಿಗೆ ಹೇರಲು ಸಿದ್ಧತೆ ನಡೆಸಿದೆ ಎಂದು ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಹೇಳಿದ್ದಾರೆ.
ನಾವು ಯಾವತ್ತಿಗೂ ಮಾತುಕತೆಗೆ ಮುಕ್ತವಾಗಿದ್ದೇವೆ. ವಿಶ್ವವು ಭೌಗೋಳಿಕ, ರಾಜಕೀಯ ಹಾಗೂ ಆರ್ಥಿಕ ಅನಿಶ್ಚಿತತೆಯಿಂದ ಹೊಯ್ದಾಟ ನಡೆಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ತೆರಿಗೆಯ ಮೂಲಕ ನಮ್ಮ ಆರ್ಥಿಕತೆ ಮೇಲೆ ಹೊರೆ ಮಾಡಿಕೊಳ್ಳುವುದು ಎಲ್ಲರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದಿಂದ ಆಮದಾಗುವ ಸ್ಟೀಲ್ ಮತ್ತು ಅಲ್ಯುಮಿನಿಯಂ ಉತ್ಪನ್ನಗಳು ಮಾತ್ರವಲ್ಲದೆ, ಬಟ್ಟೆ, ಚರ್ಮದ ಉತ್ಪನ್ನ, ಗೃಹೋಪಯೋಗಿ ಉತ್ಪನ್ನಗಳು, ಪ್ಲಾಸ್ಟಿಕ್, ಮರ, ಪೌಲ್ಟ್ರಿ, ಸಾಗರೋತ್ಪನ್ನ, ಮೊಟ್ಟೆ, ಸಕ್ಕರೆ, ತರಕಾರಿಗಳ ಮೇಲೂ ಪ್ರತಿ ತೆರಿಗೆ ಹಾಕಲಾಗುವುದು ಎಂದು ಆಯೋಗ ತಿಳಿಸಿದೆ. ಅಮೆರಿಕವು ಯುರೋಪ್‌ನ ಸ್ಟೀಲ್‌ಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅಮೆರಿಕದ ಹೊಸ ತೆರಿಗೆಯಿಂದ ಯುರೋಪ್‌ನ ಸ್ಟೀಲ್ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾದಿಂದಲೂ ಬೇಸರ: ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಅವರು, ಸ್ಟೀಲ್ ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲಿನ ಅಮೆರಿಕದ ತೆರಿಗೆಯು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ. ಆದರೆ, ನಮ್ಮ ಸರ್ಕಾರ ಪ್ರತಿ ತೆರಿಗೆ ಹಾಕುವುದಿಲ್ಲ ಎಂದು ಹೇಳಿದ್ದಾರೆ.
ಉಕ್ಕು ತೆರಿಗೆಯಿಂದ ಭಾರತಕ್ಕೆ ಆತಂಕ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ಉಕ್ಕು ಮತ್ತು ಅಲ್ಯೂಮಿನಿಯಂ ಆಮದಿನ ಮೇಲೆ ಶೇ. 25ರಷ್ಟು ಸುಂಕ ವಿಧಿಸಿರುವುದು ಭಾರತದ ಪಾಲಿಗೆ ಆತಂಕಕಕಾರಿ. ಏಕೆಂದರೆ ಭಾರತ ತನ್ನ ರಫ್ತಿನಲ್ಲಿ ಶೇ.5ರಷ್ಟು ಉಕ್ಕು ಹಾಗೂ ಶೇ.12ರಷ್ಟು ಅಲ್ಯುಮಿನಿಯಂ ಅನ್ನು ಅಮೆರಿಕಕ್ಕೆ ಕಳಿಸುತ್ತದೆ. ಇದರಿಂದ ವಾರ್ಷಿಕ ಸುಮಾರು 8,700 ಕೋಟಿ ರೂ. ಮೌಲ್ಯದ ರಫ್ತಿಗೆ ತೊಂದರೆಯಾಗಬಹುದು ಎಂದು ಹೇಳಲಾಗಿದೆ.
ವಿಶ್ವದ ಟಾಪ್ ಧನಿಕರಿಗೆ 16 ಲಕ್ಷ ಕೋಟಿ ರು. ನಷ್ಟ
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ಅವರ ಆಪ್ತ ವಲಯದಲ್ಲಿದ್ದ ಉದ್ಯಮಿಗಳಿಗೆ ಭಾರೀ ಲಾಭವಾಗಬಹುದು ಎಂಬ ವಿಶ್ಲೇಷಣೆ ತಲೆಕೆಳಗಾಗಿದೆ.ಅವರ ಪ್ರಮಾಣಚನ ಸ್ವೀಕಾರದಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಆಪ್ತ ಎಲಾನ್ ಮಸ್ಕ್ ಅಲ್ಲದೆ, ಜೆಫ್ ಬೆಜೋಸ್, ಮಾರ್ಕ್ ಜಕರ್‌ಬರ್ಗ್ ಸೇರಿ ವಿಶ್ವದ ಟಾಪ್ ಶ್ರೀಮಂತರಿಗೆ 16 ಲಕ್ಷ ಕೋಟಿ ರು. ನಷ್ಟವಾಗಿದೆ.ಟ್ರಂಪ್ ಅಧಿಕಾರಕ್ಕೇರಿದಾಗ ಏರುಗತಿಯಲ್ಲಿದ್ದ ಅಮೆರಿಕದ ಷೇರುಪೇಟೆ, ಇದೀಗ ವ್ಯಾಪಾರ ಪಾಲುದಾರ ದೇಶಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯಿಂದ ವಿಪರೀತ ಕುಸಿತ ಕಾಣುತ್ತಿದೆ. ಪರಿಣಾಮವಾಗಿ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರಿಗೆ 12 ಲಕ್ಷ ಕೋಟಿ ರು.ನಷ್ಟು ಭಾರೀ ನಷ್ಟವಾಗಿದೆ. ಪ್ರಮುಖವಾಗಿ, ಇಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾದ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ. ಅಂತೆಯೇ ದೇಶದ ಇನ್ನೂ 4 ಸಿರಿವಂತರ ಆಸ್ತಿಯೂ ಕೊಂಚ ಕರಗಿದೆ.
ದೇಶದ ಟಾಪ್ 7 ಶ್ರೀಮಂತರ 3 ಲಕ್ಷ ಕೋಟಿ ರು. ಸಂಪತ್ತು ನಷ್ಟ
ಮುಂಬೈ: ಭಾರತದ ಷೇರುಪೇಟೆ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ದೇಶದ ಟಾಪ್ 7 ಶ್ರೀಮಂತರಿಗೆ ಈ ವರ್ಷ ಬರೋಬ್ಬರಿ 3 ಲಕ್ಷ ಕೋಟಿ ರು. ನಷ್ಟು ನಷ್ಟವಾಗಿದೆ. ಬ್ಲೂಂಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಈ 7 ಸಿರಿವಂತರ ಒಟ್ಟು ಆಸ್ತಿ ಮೌಲ್ಯ 29 ಲಕ್ಷ ಕೋಟಿ ರು.ನಿಂದ 26 ಲಕ್ಷ ಕೋಟಿ ರು.ಗೆ ಕರಗಿದೆ.
ಉದ್ಯಮಿ ಗೌತಮ್ ಅದಾನಿ ಅವರಿಗೆ 88 ಸಾವಿರ ಕೋಟಿ ರು. ನಷ್ಟವಾಗಿದ್ದು, ಒಟ್ಟು ಆಸ್ತಿಯ ಮೌಲ್ಯ 5 ಲಕ್ಷ ಕೋಟಿ ರು.ಗೆ ಇಳಿದಿದೆ. ಪ್ರಮುಖವಾಗಿ ಅದಾನಿ ಎನರ್ಜಿ ಶೇ.22ರಷ್ಟು ನಷ್ಟ ಅನುಭವಿಸಿದೆ.ಮುಕೇಶ್ ಅಂಬಾನಿ ಈ ವರ್ಷ 27 ಸಾವಿರ ಕೋಟಿ ರು. ನಷ್ಟ ಅನುಭವಿಸಿದರೂ, 7 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ನಂ.1 ಶ್ರೀಮಂತ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
ಮದ್ಯಕ್ಕೆ ಶೇ.150 ತೆರಿಗೆ: ಭಾರತ ವಿರುದ್ಧ ಅಮೆರಿಕ ಕಿಡಿ
ನ್ಯೂಯಾರ್ಕ್/ವಾಷಿಂಗ್ಟನ್: ಭಾರತದ ತೆರಿಗೆ ನೀತಿ ವಿರುದ್ಧ ಅಮೆರಿಕ ಮತ್ತೊಮ್ಮೆ ಅಸಮಾಧಾನ ಹೊರಹಾಕಿದೆ. ಅಮೆರಿಕದ ಮದ್ಯಗಳ ಮೇಲೆ ಶೇ.150, ಕೃಷಿ ಉತ್ಪನ್ನಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ಅಮೆರಿಕ ಕಿಡಿಕಾರಿದೆ.'ಅಮೆರಿಕದ ಮದ್ಯಗಳ ಮೇಲೆ ಭಾರತವು ಶೇ.150ರಷ್ಟು ತೆರಿಗೆ ವಿಧಿಸುತ್ತಿದೆ. ನಾವು ಕೆಂಟುಕಿ ಬೋರ್ಬನ್ ಮದ್ಯವನ್ನು ಭಾರತಕ್ಕೆ ರಫ್ತು ಮಾಡಲು ಸಾಧ್ಯವೇ? ನನ್ನ ಪ್ರಕಾರ ಖಂಡಿತಾ ಸಾಧ್ಯವಿಲ್ಲ. ಭಾರತವು ನಮ್ಮ ಕೃಷಿ ಉತ್ಪನ್ನಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುತ್ತದೆ' ಎಂದು ವೈಟ್‌ಹೌಸ್‌ನ ಮಾಧ್ಯಮ ಕಾರ್ಯದರ್ಶಿ ಕರೋಲಿನೆ ಲೆವಿಟ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ದಿನಗಳಿಂದ ಭಾರತದ ತೆರಿಗೆ ನೀತಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ನಡುವೆ, ಕಳೆದ ಶುಕ್ರವಾರ ತೆರಿಗೆ ಕಡಿತಕ್ಕೆ ಭಾರತ ಒಪ್ಪಿಕೊಂಡಿದೆ ಎಂದು ಹೇಳಿದ್ದರು. ಆದರೆ ಮೋದಿ ಸರ್ಕಾರ ಮಾತ್ರ ಅಮೆರಿಕದ ಜತೆಗಿನ ತೆರಿಗೆ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಂಸತ್ತಿಗೆ ಸ್ಪಷ್ಟನೆ ನೀಡಿದೆ.
ಮದ್ಯಕ್ಕೆ 150% ತೆರಿಗೆ, ಕೃಷಿಗೆ 100% ತೆರಿಗೆ, ಭಾರತವನ್ನು ಟೀಕಿಸಿದ ವೈಟ್ ಹೌಸ್!
ಮಸ್ಕ್ ಒಡೆತನದ ಟೆಸ್ಲಾ ಕಾರು ಖರೀದಿಸಿದ ಟ್ರಂಪ್!
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಪ್ತ, ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಕಾರು ಖರೀದಿ ಮಾಡಿದ್ದಾರೆ.ಟ್ರಂಪ್ ಅವರ ಬೆಂಬಲಕ್ಕೆ ಮಸ್ಕ್ ಅವರ ಟೆಸ್ಲಾ ಕಂಪನಿಯ ಷೇರು ಕುಸಿಯುತ್ತಿದ್ದು, ಅವರಿಗೆ ನೈತಿಕ ಸ್ಥೈರ್ಯ ತುಂಬಲು ಟ್ರಂಪ್, ಕಡುಗೆಂಪು ಬಣ್ಣದ ಕಾರನ್ನು ಯಾವುದೇ ರಿಯಾಯ್ತಿ ಇಲ್ಲದೇ 80,000 ಡಾಲರ್ (69,78,811 ರು.) ಕೊಟ್ಟು ಖರೀದಿಸಿದ್ದಾರೆ. ಕಾರು ಚಾಲನೆಗೆ ಅನುಮತಿ ಇಲ್ಲದ ಕಾರಣ ಶ್ವೇತಭವನದ ಸಿಬ್ಬಂದಿ ಇದನ್ನು ಓಡಿಸಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಖರೀದಿ ಬಳಿಕ ಕಾರಿನೊಳಗೆ ಕುಳಿತು ಟ್ರಂಪ್-ಮಸ್ಕ್ ಫೋಟೋಗೆ ಪೋಸು ನೀಡಿದ್ದಾರೆ.
ಬರ್ಗರ್, ಪಿಜ್ಜಾ ಮತ್ತು 12 ಡಯಟ್ ಕೋಕ್! ಇದು ಡೊನಾಲ್ಡ್ ಟ್ರಂಪ್ ಊಟದ ಮೆನು