ನವದೆಹಲಿ(ಆ.23): ನಾಣ್ಯ ಅಮಾನ್ಯೀಕರಣ, ಜಿಎಸ್‌ಟಿ ಜಾರಿಯಾದ ದಿನಗಳನ್ನು ನೆನಪಿಸಿಕೊಳ್ಳಿ. ನಾಣ್ಯ ಅಮಾನ್ಯೀಕರಣಕ್ಕೆ ಕಾರಣ, ಅದರ ಪರಿಣಾಮದ ತಾಕತ್ತು ಮನಗಂಡ ದೇಶ ವಿಪಕ್ಷಗಳ ಬೊಬ್ಬಾಟದ ಮಧ್ಯೆಯೂ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿತ್ತು.

ಅದರಂತೆ ಜಿಎಸ್‌ಟಿ ಜಾರಿ ವಿಚಾರದಲ್ಲೂ ಇದೇ ಪುನರಾವರ್ತನೆಯಾಯ್ತು. ಜಿಎಸ್‌ಟಿಯ ಉತ್ತಮ ಅಂಶಗಳನ್ನು ಮನಗಂಡ ದೇಶದ ಜನತೆ, ವಿಪಕ್ಷಗಳ ಆರೋಪಗಳಿಗೆ ಸೊಪ್ಪು ಹಾಕದೇ ಮೋದಿ ‘ನಿಮ್ಮ ಜೊತೆ ನಾವಿದ್ದೇವೆ’ಅಂತಾ ಗಟ್ಟಿಯಾಗಿ ಕೂಗಿ ಹೇಳಿದ್ದರು.

ಆದರೆ ದಿನಕಳೆದಂತೆ ಇದೇ ಆರ್ಥಿಕ ನೀತಿಗಳು ಸರ್ಕಾರಕ್ಕೂ, ಪ್ರಧಾನಿ ಮೋದಿ ಅವರಿಗೂ ಇಕ್ಕಟ್ಟಿನ ಸ್ಥಿತಿ ಸೃಷ್ಟಿಸಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಕಾರಣ ನಾಣ್ಯ ಅಮಾನ್ಯೀಕರಣದ ನಂತರದ ಪರಿಣಾಮಗಳು ನಕಾರಾತ್ಮಕ ಹಾದಿ ತುಳಿದಿದೆ ಎಂಬುದು ಹಲವು ಆರ್ಥಿಕ ತಜ್ಞರ ಅಭಿಪ್ರಾಯ.

ನಾಣ್ಯ ಅಮಾನ್ಯೀಕರಣ ಕಾಳಧನದ ಮೇಲೆ ಹಿಡಿತ ಸಾಧಿಸುವಲ್ಲಿ ಅಷ್ಟಾಗಿ ಪರಿಣಾಮ ಬೀರಿಲ್ಲ ಎಂಬುದು ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ತಿಳಿದು ಬರುತ್ತದೆ ಎನ್ನುತ್ತಾರೆ ಈ ತಜ್ಞರು. ಅಲ್ಲದೇ ನಾಣ್ಯ ಅಮಾನ್ಯೀಕರಣ ಸಮಾಜದ ಆರ್ಥಿಕವಾಗಿ ಸುಸ್ಥಿತ ವರ್ಗಕ್ಕೆ ಷ್ಟಾಗಿ ಪರಿಣಾಮ ಬೀರದಿದ್ದರೂ, ನಗದು ವ್ಯಾಪಾರ ಮತ್ತು ದಿನಗೂಲಿಯನ್ನೇ ಮೆಚ್ಚಿಕೊಂಡಿದ್ದ ಕೋಟ್ಯಂತರ ಜನರಿಗೆ ದುಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಜನಪ್ರಿಯತೆ ಕುಗ್ಗುತ್ತಿದೆ ಎಂದು ಕೆಲವು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಕೆಲವು ಸರ್ವೆಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ವಿರುದ್ದ ಜನಾಭಿಪ್ರಾಯ ವ್ಯಕ್ತವಾಗಿರುವುದು ಎಚ್ಚರಿಕೆಯ ಗಂಟೆ ಎಂದೇ ಪರಿಗಣಿಸಬೇಕಾಗುತ್ತದೆ. 

ಈ ಮೊದಲು ಮೋದಿ ನಿರ್ಧಾರಗಳನ್ನು ಒಕ್ಕೊರಲಿನಿಂದ ಒಪ್ಪಿಕೊಳ್ಳುತ್ತಿದ್ದ ಜನ, ಇದೀಗ ಎಲ್ಲವನ್ನೂ ಸ್ವೀಕರಿಸುವ ಮನಸ್ಥಿತಿಯಿಂದ ದೂರ ಸರಿದಿದ್ದಾರೆ ಎಂಬುದು ಈ ಸರ್ವೆಗಳಿಂದ ಗೊತ್ತಾಗುತ್ತದೆ. ಅದರಲ್ಲೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಸರ್ವೆಗಳಲ್ಲಿ  ಬಿಜೆಪಿ ಮತ್ತು ಎನ್‌ಡಿಎ ಸಂಖ್ಯೆ ಹಂತ ಹಂತವಾಗಿ ಕುಸಿಯುತ್ತಿರುವುದು ಈ ಕಳವಳಕ್ಕೆ ಕಾರಣವಾಗಿದೆ.