Crude Oil Price 7 ತಿಂಗಳ ಕನಿಷ್ಠ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಯಾವಾಗ..?
ಕಚ್ಚಾತೈಲ ಬೆಲೆ 7 ತಿಂಗಳ ಕನಿಷ್ಠಕ್ಕೆ ಇಳಿದಿದೆ. ಆದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ತೈಲ ಕಂಪನಿಗಳು ಹಳೆಯ ನಷ್ಟತುಂಬಿಕೊಳ್ಳುತ್ತಿದ್ದು, ಈ ಹಿನ್ನೆಲೆ ಇಂಧನ ದರ ಇಳಿಕೆಯಾಗಿಲ್ಲ ಎಂದು ತಿಳಿದುಬಂದಿದೆ.
ನವದೆಹಲಿ: ಉಕ್ರೇನ್-ರಷ್ಯಾ ಯುದ್ಧದ (Ukraine - Russia War) ಕಾರಣ ಸಾರ್ವಕಾಲಿಕ ಗರಿಷ್ಠ ಬೆಲೆ ಕಂಡಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾತೈಲದ ಬೆಲೆ (Crude Oil Price) ಈಗ 7 ತಿಂಗಳ ಕನಿಷ್ಠಕ್ಕೆ ಇಳಿದಿದೆ. ಆದರೂ ಪೆಟ್ರೋಲಿಯಂ ಕಂಪನಿಗಳು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಗೋಜಿಗೆ ಹೋಗಿಲ್ಲ. ಈ ಹಿಂದೆ ಕಚ್ಚಾತೈಲ ಬೆಲೆ ಏರಿದ್ದರೂ, ನಾನಾ ಕಾರಣಗಳಿಂದಾಗಿ 5 ತಿಂಗಳಿನಿಂದ ಏರಿಕೆ ತಡೆ ಹಿಡಿದು ನಷ್ಟ (Loss) ಅನುಭವಿಸಿದ್ದ ಕಂಪನಿಗಳು ಇದೀಗ ಅದನ್ನು ಭರಿಸಿಕೊಳ್ಳುವ ಭರದಲ್ಲಿವೆ ಎಂದು ಮೂಲಗಳು ಹೇಳಿವೆ. ಕಳೆದ ಏಪ್ರಿಲ್‌ನಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 102.97 ಡಾಲರ್‌ಗೆ ತಲುಪಿತ್ತು. ಮೇ ನಲ್ಲಿ 109.51 ಡಾಲರ್, ಜೂನ್‌ನಲ್ಲಿ ಗರಿಷ್ಠ 116.01 ಡಾಲರ್‌ಗೆ ತಲುಪಿತ್ತು. ಆದರೆ ಜುಲೈನಲ್ಲಿ 105.49 ಡಾಲರ್‌ಗೆ , ಆಗಸ್ಟ್‌ನಲ್ಲಿ 97.40 ಡಾಲರ್‌ಗೆ ಮತ್ತು ಸೆಪ್ಟೆಂಬರ್‌ನಲ್ಲಿ 92.84 ಡಾಲರ್‌ಗೆ ಇಳಿದಿದೆ. ಇದು 7 ತಿಂಗಳ ಕನಿಷ್ಠ.
ಆದರೆ ತೈಲ ದರ 116 ಡಾಲರ್‌ಗೆ ತಲುಪಿದ್ದ ವೇಳೆ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ (Petrol) 20-25 ರೂ ಮತ್ತು ಡೀಸೆಲ್‌ಗೆ (Diesel) 14-18 ರೂ. ನಷ್ಟಅನುಭವಿಸುತ್ತಿದ್ದವು. ಈ ನಡುವೆ ದರ ಏರಿಕೆ ಬಗ್ಗೆ ದೇಶವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತೈಲ ಕಂಪನಿಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ತಡೆ ಹೇರಿತ್ತು. ಹೀಗಾಗಿ 5 ತಿಂಗಳಿನಿಂದ ಕಂಪನಿಗಳೂ ಭಾರಿ ನಷ್ಟಅನುವಿಸಿದ್ದವು. ಆದ್ದರಿಂದ 5 ತಿಂಗಳಲ್ಲಿ ಅನುಭವಿಸಿದ ನಷ್ಟ ಭರ್ತಿಯಾದ ಬಳಿಕವಷ್ಟೇ ತೈಲ ದರ ಇಳಿಕೆಗೆ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ: Petrol, Diesel Price Today: ಉತ್ತರ ಕನ್ನಡದಲ್ಲಿ 1.90 ರೂ. ಇಳಿಕೆಯಾದ ಡೀಸೆಲ್ ದರ
ಉತ್ತರ ಸ್ಟ್ರೀಮ್ ಪೈಪ್‌ಲೈನ್ ಅನ್ನು ರಷ್ಯಾ ಆಫ್‌ಲೈನ್‌ನಲ್ಲಿ ಇರಿಸುವುದು ಮತ್ತು ಉತ್ಪಾದಕ ಕಾರ್ಟೆಲ್ OPEC ಹಾಗೂ ಅದರ ಮಿತ್ರರಾಷ್ಟ್ರಗಳು (OPEC +) ಉತ್ಪಾದನೆಯನ್ನು ಕಡಿತಗೊಳಿಸುವುದು ಸೇರಿದಂತೆ ಇತರೆ ಬೆಳವಣಿಗೆಗಳ ಹೊರತಾಗಿಯೂ ಕಚ್ಚಾ ತೈಲ ಬೆಲೆಗಳು ಕುಸಿಯಿತು. ಈ ಮಧ್ಯೆ, ಕಚ್ಚಾ ತೈಲ ದರ ಕುಸಿದರೂ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ, ‘’ಅಂತಾರಾಷ್ಟ್ರೀಯ ತೈಲ ಬೆಲೆಗಳು ಬಹು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದಾಗ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದ್ದವು. ಈ ಹಿನ್ನೆಲೆ ಉಂಟಾದ ನಷ್ಟಕ್ಕೆ ಪರಿಷ್ಕರಣೆ ಮಾಡಿಲ್ಲ’’ ಎಂದು ಲಿಂಕ್ ಮಾಡಲು ಪ್ರಯತ್ನಿಸಿದರು.
"(ಅಂತರರಾಷ್ಟ್ರೀಯ ತೈಲ) ಬೆಲೆಗಳು ಹೆಚ್ಚಾಗಿದ್ದಾಗ, ನಮ್ಮ (ಪೆಟ್ರೋಲ್ ಮತ್ತು ಡೀಸೆಲ್) ಬೆಲೆಗಳು ಈಗಾಗಲೇ ಕಡಿಮೆಯಾಗಿದ್ದವು" ಎಂದು ಅವರು ಹೇಳಿದರು. ಹಾಗೆ, "ನಮ್ಮ ಎಲ್ಲಾ ನಷ್ಟವನ್ನು ನಾವು ಮರುಪಾವತಿಸಿದೆವೇ?" ಎಂದು ಮಾಧ್ಯಮಗಳಿಗೇ ಕೆಂದ್ರ ಸಚಿವರು ಮರು ಪ್ರಶ್ನೆ ಹಾಕಿದ್ದಾರೆ. ಆದರೆ, ಏಪ್ರಿಲ್ 6 ರಿಂದ ಪೆಟ್ರೋಲ್, ಡೀಸೆಲ್ ದರಗಳನ್ನು ಸ್ಥಿರವಾಗಿರಿಸಿಕೊಳ್ಳುವಲ್ಲಿ ಉಂಟಾದ ನಷ್ಟದ ಬಗ್ಗೆ ಅವರು ವಿವರಿಸಲಿಲ್ಲ.