Asianet Suvarna News Asianet Suvarna News

ಇಂಧನ ದಕ್ಷತೆ ಹೆಚ್ಚಿಸಲು ಸಂಶೋಧನೆ ನಡೆಸಿ: ಸಿಎಂ ಬೊಮ್ಮಾಯಿ

ಆಮ್ಲಜನಕ, ನೈಸರ್ಗಿಕ ಅನಿಲ, ಹೈಬ್ರಿಡ್‌ ಇಂಧನ ಕ್ಷೇತ್ರದಲ್ಲಿ ಮಿತವ್ಯಯಿ, ಹೆಚ್ಚು ದಕ್ಷತೆಯ ಇಂಧನದ ಸಂಶೋಧನೆಗೆ ನಡೆಸಿ: ಬೊಮ್ಮಾಯಿ

Conduct Research to Increase Energy Efficiency Says CM Basavaraj Bommai grg
Author
First Published Nov 27, 2022, 5:00 AM IST

ಬೆಂಗಳೂರು(ನ.27):  ನವೀಕರಿಸಬಹುದಾದ ಇಂಧನ ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಈ ಇಂಧನಗಳ ಬಳಕೆಯು ಭವಿಷ್ಯ ಸಂಶೋಧನೆಗಳಲ್ಲಿ ಅಡಕವಾಗಿದೆ. ಆದ್ದರಿಂದ ಇಂಧನಗಳ ದಕ್ಷತೆ ಹೆಚ್ಚಿಸಲು ಮತ್ತು ಇಂಧನ ಮಿತವ್ಯಯಿ ಆಗಲು ವ್ಯಾಪಕ ಸಂಶೋಧನೆ ನಡೆಯುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಏಟ್ರಿಯಾ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅಲ್ಲಿ ನಡೆದ ಹಸಿರು ಭವಿಷ್ಯ ಶೃಂಗಸಭೆಯಲ್ಲಿ ಪಾಲ್ಗೊಂಡು, ಉದ್ಯಮಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ಪಟ್ಟರು.

ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ .2 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಇದರಲ್ಲಿ .1 ಲಕ್ಷ ಕೋಟಿಗಳ ಒಪ್ಪಂದ ಜಲಜನಕ ಇಂಧನದ ಬಗ್ಗೆ ಇದೆ. ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸರ್ಕಾರ ಈಗಾಗಲೇ ಸಾಕಷ್ಟುಸಬ್ಸಿಡಿ ಮತ್ತಿತ್ತರ ನೆರವು ನೀಡುತ್ತಿದೆ. ಆಮ್ಲಜನಕ, ನೈಸರ್ಗಿಕ ಅನಿಲ, ಹೈಬ್ರಿಡ್‌ ಇಂಧನ ಕ್ಷೇತ್ರದಲ್ಲಿ ಮಿತವ್ಯಯಿ ಮತ್ತು ಹೆಚ್ಚು ದಕ್ಷ ಇಂಧನದ ಸಂಶೋಧನೆಯತ್ತ ಖಾಸಗಿ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಆರ್ಥಿಕ ನೆರವು: ಕರ್ಣಾಟಕ ಬ್ಯಾಂಕ್‌-ಹ್ಯುಂಡೈ ಸಂಸ್ಥೆ ಜತೆ ಒಡಂಬಡಿಕೆ

ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಲ್ಲಿ ಖಾಸಗಿಯವರ ಪಾತ್ರವೂ ದೊಡ್ಡದಿದೆ. ಶಿಕ್ಷಣ ಸಂಸ್ಥೆಗಳು ಸರ್ಕಾರದೊಂದಿಗೆ ಸಹಯೋಗದಲ್ಲಿ ಕಾರ್ಯ ನಿರ್ವಹಿಸುವುದು ಅತ್ಯಗತ್ಯ. ಭಾರತದಲ್ಲಿನ ಜನಸಂಖ್ಯೆಗೆ ಉದ್ಯೋಗ ಸೃಷ್ಟಿಸುವುದು ದೊಡ್ಡ ಜವಾಬ್ದಾರಿ. ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆಗಳು ಹೊಂದಾಣಿಕೆ ಮಾಡಿಕೊಂಡು ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ರಂಗ ಮತ್ತು ಉದ್ದಿಮೆ ರಂಗದ ನಡುವೆ ಉತ್ತಮ ತಿಳವಳಿಕೆಗಳಿರಬೇಕು ಎಂದು ಅಭಿಪ್ರಾಯ ಪಟ್ಟರು.

ಸಂವಾದದಲ್ಲಿ ಪಾಲ್ಗೊಂಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತು ವಿಜ್ಞಾನ (ಮೆಟಿರಿಯಲ್‌ ಸೈನ್ಸ್‌)ದಲ್ಲಿ ಸಾಕಷ್ಟುಸಂಶೋಧನೆಗಳು ನಡೆಯುವ ಅಗತ್ಯವಿದೆ. ಸರ್ಕಾರ ಇಂತಹ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಲೋಹಗಳ ಅನ್ವೇಷಣೆ, ಅಭಿವೃದ್ಧಿಯ ಜೊತೆಗೆ ನಮ್ಮ ವಿದೇಶಾಂಗ ವ್ಯವಹಾರವನ್ನು ಬಳಸಿಕೊಂಡು ಖನಿಜ ದೊರೆಯುವ ದೇಶಗಳ ಜೊತೆಗಿನ ದ್ವಿಪಕ್ಷೀಯ ಒಪ್ಪಂದಗಳಿಂದ ಪ್ರಯೋಜನ ಪಡೆಯುವುದು ಮುಖ್ಯ ಎಂದು ಹೇಳಿದರು.

ಉದ್ಯಮಶೀಲತೆ ಮತ್ತು ತಜ್ಞತೆ ಎಂಬುದು ಸಣ್ಣ ವಯಸ್ಸಿನಲ್ಲಿಯೇ ಮೈಗೂಡಬೇಕು. ಆಗ ದೀರ್ಘ ಯಶಸ್ಸು ಸಿಗುತ್ತದೆ. ಹಾಗೆಯೇ ಯುವ ಜನಾಂಗದಲ್ಲಿ ಆಳವಾದ ಜ್ಞಾನದ ಜೊತೆಗೆ ಅದನ್ನು ಸೂಕ್ತ ರೀತಿಯಲ್ಲಿ ಸಂವಹನ ಮಾಡುವ ಸಾಮರ್ಥ್ಯ ಇರಬೇಕು ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಏಟ್ರಿಯಾ ಗುಂಪಿನ ಅಧ್ಯಕ್ಷ ಸಿ.ಎಸ್‌.ಸುಂದರರಾಜು ಉಪಸ್ಥಿತರಿದ್ದರು.
 

Follow Us:
Download App:
  • android
  • ios