ನವದೆಹಲಿ(ಮೇ.29): ಎಟಿಎಂನಲ್ಲಿ ಹಣ ಡ್ರಾ ಮಾಡುವ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ಆರ್‌ಬಿಐ, ಒಂದು ವೇಳೆ ಎಟಿಎಂನಿಂದ ಹಣ ಬರದಿದ್ದರೆ ಗ್ರಾಹಕನಿಗೆ ಪರಿಹಾರ ನೀಡುವ ಹೊಸ ನೀತಿ ಜಾರಿಗೊಳಿಸಿದೆ.

ಗ್ರಾಹಕ ಎಟಿಎಂನಲ್ಲಿ ನಿರ್ದಿಷ್ಟ ಹಣ ಡ್ರಾ ಮಾಡಿದಾಗ, ತಾಂತ್ರಿಕ ದೋಷದಿಂದ ಹಣ ಹೊರಗೆ ಬರದಿದ್ದರೆ ಕೂಡಲೇ ಅದು ಗ್ರಾಹಕನ ಅಕೌಂಟ್ ಗೆ ಮರಳಿ ಜಮೆ ಆಗುತ್ತದೆ. ಆದರೆ 7 ದಿನಗಳ ಕೆಲಸದ ಅವಧಿ ಬಳಿಕವೂ ಈ ಹಣ ಮರಳಿ ಜಮೆಯಾಗದಿದ್ದರೆ, ದಿನಕ್ಕೆ 100 ರೂ.ನಂತೆ ಗ್ರಾಹಕನಿಗೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಹೇಳಿದೆ.

ಗ್ರಾಹಕ ಯಾವುದೇ ಬ್ಯಾಂಕ್‌ನ ಎಟಿಎಂನಿಂದ ಹಣ ಡ್ರಾ ಮಾಡಿದರೂ, ತನ್ನ ಮೂಲ ಬ್ಯಾಂಕ್‌ಗೆ ದೂರು ನೀಡಿ ಹಣ ಮರಳಿ ಪಡೆಯಬಹುದಾಗಿದೆ. ಆದರೆ 7 ದಿನಗಳ ಕೆಲಸದ ಅವಧಿ ಬಳಿಕವೂ ಹಣ ಮರಳಿ ಬಾರದಿದ್ದರೆ ಆತನಿಗೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.