ನವದೆಹಲಿ(ಅ.24): ಕೊರೋನಾ ಸಂಕಷ್ಟದಿಂದಾಗಿ ಯೋಜಿತ ರೀತಿಯಲ್ಲಿ ಜಿಎಸ್‌ಟಿ ಸಂಗ್ರಹವಾಗದೆ ಸಮಸ್ಯೆ ಎದುರಿಸುತ್ತಿದ್ದ ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಟ್ಟಾರೆ 6000 ಕೋಟಿ ರು. ಸಾಲದ ನೆರವು ಒದಗಿಸಿದೆ. ರಾಜ್ಯಗಳ ಹೆಸರಿನಲ್ಲಿ ಮಾರುಕಟ್ಟೆಯಿಂದ ಸಾಲ ಪಡೆದಿರುವ ಕೇಂದ್ರ ಸರ್ಕಾರ, ಆ ಹಣವನ್ನು ಇದೀಗ ರಾಜ್ಯಗಳಿಗೆ ವರ್ಗಾಯಿಸಿದೆ.

3-5 ವರ್ಷದ ಅವಧಿಯ ಸಾಲ ಇದಾಗಿದ್ದು, ಶೇ.5.19ರಷ್ಟುಬಡ್ಡಿದರ ಹೊಂದಿದೆ. ಇದೇ ರೀತಿ ಪ್ರತಿ ವಾರವೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣ ವರ್ಗಾಯಿಸಲಿದೆ.

ಜಿಎಸ್‌ಟಿ ಪರಿಹಾರ ನಷ್ಟವನ್ನು ರಾಜ್ಯಗಳೇ ನೇರವಾಗಿ ಸಾಲ ಪಡೆದು ಭರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು. ಇದಕ್ಕೆ 21 ರಾಜ್ಯಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಕಳೆದ ವಾರ ತನ್ನ ನಿಲುವಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದ ಕೇಂದ್ರ ಸರ್ಕಾರ, ರಾಜ್ಯಗಳ ಪರವಾಗಿ ತಾನೇ 1.1 ಲಕ್ಷ ಕೋಟಿ ರು. ಸಾಲ ಪಡೆದು ಹಂಚುವುದಾಗಿ ತಿಳಿಸಿತ್ತು. ಇದರಿಂದಾಗಿ ಒಂದೇ ಬಡ್ಡಿದರದಲ್ಲಿ ಸಾಲ ಸಿಗಲಿದೆ ಮತ್ತು ಸಾಲ ನಿರ್ವಹಣೆಯೂ ಸುಲಭ ಎಂದು ಹೇಳಿತ್ತು. ಆದರೆ 21 ರಾಜ್ಯಗಳ ಪೈಕಿ 5 ರಾಜ್ಯಗಳು ಜಿಎಸ್‌ಟಿ ಸಂಗ್ರಹದಲ್ಲಿ ಯಾವುದೇ ನಷ್ಟಅನುಭವಿಸಿರಲಿಲ್ಲ. ಹೀಗಾಗಿ ಉಳಿದ 16 ರಾಜ್ಯಗಳಿಗೆ ಇದೀಗ 6000 ಕೋಟಿ ರು. ಸಾಲ ಹಂಚಲಾಗುತ್ತಿದೆ.

ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ತಾನು ಭರಿಸುವುದಾಗಿ ಈ ಮೊದಲು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಈ ಲೆಕ್ಕಾಚಾರದ ಪ್ರಕಾರ ಕೇಂದ್ರವು ರಾಜ್ಯಗಳಿಗೆ 3 ಲಕ್ಷ ಕೋಟಿ ರು. ನೀಡಬೇಕಿತ್ತು. ಈ ಪೈಕಿ 65000 ಕೋಟಿ ರು.ಗಳನ್ನು ಸೆಸ್‌ ಮೂಲಕ ಸಂಗ್ರಹಿಸಿ ರಾಜ್ಯಗಳಿಗೆ ನೀಡಲು ಕೇಂದ್ರ ಒಪ್ಪಿತ್ತು.

ಉಳಿದ 2.35 ಲಕ್ಷ ಕೋಟಿ ರು. ಪೈಕಿ 1.1 ಲಕ್ಷ ಕೋಟಿ ರು. ಮಾತ್ರವೇ ನಷ್ಟಪರಿಹಾರದ ವ್ಯಾಪ್ತಿಗೆ ಬರುತ್ತದೆ. ಉಳಿದಿದ್ದು ಕೊರೋನಾ ಪರಿಣಾಮ ಉಂಟಾಗಿರುವ ನಷ್ಟ. ಜೊತೆಗೆ ಕೊರೋನಾ ನಿರ್ವಹಣೆ ಇರುವಾಗ ಈ ಹಣವನ್ನು ಕೂಡಾ ತಾನು ಪಾವತಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿತ್ತು. ಜೊತೆಗೆ ರಾಜ್ಯಗಳಿಗೇ ನೇರವಾಗಿ ಸಾಲ ಪಡೆಯಲು ಸೂಚಿಸಿತ್ತು. ಇದಕ್ಕೆ 21 ರಾಜ್ಯಗಳು ಒಪ್ಪಿಕೊಂಡಿದ್ದವು.