Petrol Diesel Excise Duty Reduction: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದ ಕುರಿತು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ದಾಖಲೆ ಇಳಿಕೆ ಮಾಡಲಾಗಿದೆ. 

ನವದೆಹಲಿ, ಮೇ 21: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿಹೋಗಿದ್ದ ಜನತಗೆ ಶನಿವಾರ ಸಂತಸದ ಸುದ್ದಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿದ್ದಾರೆ. ಪೆಟ್ರೋಲ್‌ ಮೇಲಿನ 8 ರೂಪಾಯಿ ತೆರಿಗೆ ಮತ್ತು ಡೀಸೆಲ್‌ ಮೇಲಿನ 6 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಲಾಗಿದೆ. ಈ ಮೂಲಕ ಪೆಟ್ರೋಲ್‌ ಬೆಲೆ ದೇಶಾದ್ಯಂತ ರೂ. 9.50 ಮತ್ತು ಡೀಸೆಲ್‌ ಬೆಲೆ ರೂ. 7 ಕಡಿಮೆಯಾಗಲಿದೆ (petrol diesel excise duty reduction). ದಿನಬಳಕೆ ವಸ್ತುಗಳು, ಹಣ್ಣು - ತರಕಾರಿ, ಸೋಪು, ಶಾಂಪೂ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಈ ಬೆಲೆ ಇಳಿಕೆಯ ನಿರ್ಧಾರದಿಂದ ಜನಸಾಮಾನ್ಯರಿಗೆ ದೊಡ್ಡಮಟ್ಟದ ಸಹಾಯವಾಗಲಿದೆ. 

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ತಲಾ ರೂ 8 ಮತ್ತು ರೂ. 6 ಕಡಿಮೆ ಮಾಡಲಾಗಿದೆ ಎಂದಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಇಂದಿನ ಬೆಲೆಗಿಂತ ಪೆಟ್ರೋಲ್‌ಗೆ ರೂ 9.50 ಕಡಿಮೆಯಾಗಲಿದ್ದು, ಡೀಸೆಲ್‌ ಒಂದು ಲೀಟರ್‌ ಗೆ ರೂ 7 ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. 

Scroll to load tweet…

ಅಬಕಾರಿ ಸುಂಕ ಕಡಿತದಿಂದ ಕೇಂದ್ರಕ್ಕೆ ನಷ್ಟ (petrol diesel excise duty reduction):

ಅಬಕಾರಿ ಸುಂಕ ಕಡಿತಗೊಳಿಸುವುದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಾರ್ವಜನಿಕರ ಮೇಲೆ ಬಿದ್ದ ಬೆಲೆ ಏರಿಕೆಯ ಬಿಸಿ ಕಡಿಮೆಯಾಗುವುದರಿಂದ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸರಕು ಸಾಗಾಟ ಪ್ರಕ್ರಿಯೆಗೂ ಇದು ಸಹಕಾರಿಯಾಗಲಿದ್ದು, ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಇದರಿಂದ ತೆರಿಗೆದಾರರು, ಮಧ್ಯಮ ವರ್ಗ ಮತ್ತು ಬಡತನ ರೇಖೆಯಲ್ಲಿರುವವರಿಗೆ ಸಹಾಯವಾಗಲಿದೆ ಎನ್ನಲಾಗಿದೆ. 

ಅಡಿಗೆ ಸಿಲಿಂಡರ್‌ ಮೇಲೆ ರೂ 200 ಸಬ್ಸಿಡಿ:

ಕೇವಲ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಮಾತ್ರ ಕಡಿಮೆ ಮಾಡಿಲ್ಲ. ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಡುಗೆ ಅನಿಲಕ್ಕೂ ಸಬ್ಸಿಡಿ ಘೋಷಿಸಲಾಗಿದೆ. ಈ ಬಗ್ಗೆಯೂ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸುಮಾರು ಒಂಭತ್ತು ಕೋಟಿ ಫಲಾನುಭವಿಗಳಿಗೆ ವಾರ್ಷಿಕ 12 ಸಿಲಿಂಡರ್‌ವರೆಗೆ ರೂ 200 ಸಬ್ಸಿಡಿ ನೀಡಲಾಗಿದೆ. ಈ ಹಿಂದೆ ಸಬ್ಸಿಡಿಯನ್ನು ಸಂಪೂರ್ಣ ಕಡಿತಗೊಳಿಸಲಾಗಿತ್ತು. ಈ ಎಲ್ಲಾ ಮಹತ್ವದ ನಿರ್ಧಾರಗಳು ವಿರೋಧ ಪಕ್ಷಗಳು ಚಾಟಿ ಬೀಸುತ್ತಿರುವಾಗಲೇ ಹೊರಬಂದಿರುವ ಹಿನ್ನೆಲೆ, ವಿರೋಧ ಪಕ್ಷಗಳ ಬಾಯಿಯೂ ಮುಚ್ಚಿಸಿದಂತಾಗಿದೆ. 

Scroll to load tweet…

ಅಡುಗೆ ಅನಿಲದ ಮೇಲಿನ ಸಬ್ಸಿಡಿಯಿಂದ ಸರ್ಕಾರಕ್ಕೆ ವಾರ್ಷಿಕ ರೂ 6,100 ಕೋಟಿ ರೂಪಾಯಿ ನಷ್ಟವಾಗಲಿದೆ. ಒಟ್ಟಿನಲ್ಲಿ ಶನಿವಾರ ವಿತ್ತ ಸಚಿವರಿಂದ ಶುಭ ಸುದ್ದಿ ಇಡೀ ದೇಶದ ಜನತೆಗೆ ಸಿಕ್ಕಿದ್ದು, ಸಾಮಾನ್ಯರು ಕೊಂಚ ನಿರಾಳರಾಗುವಂತಾಗಿದೆ.