ಸಾಂದರ್ಭಿಕ ಚಿತ್ರ

ಒಟ್ಟಾವಾ(ಜೂ.01): ಆಧುನಿಕ ಜಗತ್ತು, ಬದಲಾದ ಜೀವನ ಶೈಲಿ, ನಗರೀಕರಣ ಮತ್ತು ವಾಯು ಮಾಲಿನ್ಯದ ಪರಿಣಾಮದಿಂದಾಗಿ ಇತ್ತೀಚಿನ ದಿನಗಳಲ್ಲಿ ಉಸಿರಾಡುವ ಗಾಳಿ ಕೂಡ ಕಲುಷಿತವಾಗುತ್ತಿದೆ. 

ನಾವು ಉಸಿರಾಡುತ್ತಿರುವ ಕಲುಷಿತ ಗಾಳಿಯ ಪರಿಣಾಮ ನೂರಾರು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುವುದು ಸುಳ್ಳಲ್ಲ. 

ಬೀಜಿಂಗ್,  ದೆಹಲಿ, ಮುಂಬೈ, ಲಖನೌ ಸೇರಿದಂತೆ ವಿಶ್ವದ ಪ್ರಮುಖ ನಗರಗಳು ತೀವ್ರ ವಾಯುಮಾಲೀನ್ಯ ಸಮಸ್ಯೆಯಿಂದ ಬಳಲುತ್ತಿರುವುದು ಹೊಸ ವಿಷಯವೇನಲ್ಲ.

ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿ ಖಾಸಗಿ ಸಂಸ್ಥೆಯೊಂದು ಉಸಿರಾಡುವ ಸ್ವಚ್ಛ ಗಾಳಿಯನ್ನು ಮಾರಾಟ ಮಾಡುತ್ತಿದ್ದು, ವೈಟಲಿಟಿ ಏರ್ ಕಂಪನಿ ಎಂಬ ಸಂಸ್ಥೆ ಉಸಿರಾಡುವ ಗಾಳಿಯನ್ನು ಸಿಲಿಂಡರ್ನಲ್ಲಿ ತುಂಬಿಸಿ ಮಾರಾಟಕ್ಕಿಟ್ಟಿದೆ. 

ಈ ಸಿಲಿಂಡರ್ನಲ್ಲಿ ಶೇ. 95ರಷ್ಟು ಪರಿಶುದ್ಧ ಆಮ್ಲಜನಕವಿರುವ ಸ್ವಚ್ಛ ಗಾಳಿಯಿದ್ದು, ವ್ಯಕ್ತಿಯ ಆರೋಗ್ಯವೃದ್ಧಿಯ ದೃಷ್ಟಿಯಿಂದಲೂ ಒಳ್ಳೆಯದು ಎಂದು ಕಂಪನಿ ತಿಳಿಸಿದೆ.

ಈ ಗಾಳಿಯ ಸಿಲಿಂಡರ್ನಲ್ಲಿ 10 ಲೀಟರ್ ನಷ್ಟು ಸ್ವಚ್ಛ ಗಾಳಿ ಇರಲಿದ್ದು, ಇದರ ಬೆಲೆ 1,750 ರೂ. ಎಂದು ಕಂಪನಿ ತಿಳಿಸಿದೆ. ಈ ಸಿಲಿಂಡರ್ ಮೂಲಕ ಓರ್ವ ಮನುಷ್ಯ 200 ಬಾರಿ ಉಸಿರಾಡಬಹುದಾಗಿದೆ. 

ಕೆನಡಾದಲ್ಲಿ ಈ ಗಾಳಿಯ ಸಿಲಿಂಡರ್ಗಳಿಗೆ ವ್ಯಾಪಕ ಬೇಡಿಕೆ ಬಂದಿದ್ದು, ಕಂಪನಿ ಓರ್ವ ಗ್ರಾಹಕನಿಗೆ ಒಂದು ಬಾರಿಗೆ ಮೂರು ಸಿಲಿಂಡರ್ ಮಾತ್ರ ಮಾರಾಟ ಮಾಡುವುದಾಗಿ ಸ್ಪಷ್ಟಪಡಿಸಿದೆ.

ವೈಟಲಿಟಿ ಏರ್ ಕಂಪನಿ ಕೆನಡಾ ಪರ್ವತ ಪ್ರದೇಶಗಳಿಂದ ಸ್ವಚ್ಛ ಗಾಳಿಯನ್ನು ಸಂಗ್ರಹಿಸಿ, ಬಳಿಕ ಅದನ್ನು ಕಂಪ್ರೆಸರ್ಗಳ ಮೂಲಕ ಅಲ್ಯೂಮಿನಿಯಂನಿಂದ ತಯಾರಾದ ಪುಟ್ಟ ಸಿಲಿಂಡರ್ ಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದೆ.