ಶ್ರೀಮಂತರ ಹಿಂಡುವ ಸೂಪರ್‌ ರಿಚ್‌ ಟ್ಯಾಕ್ಸ್‌ |  ಮೊನ್ನೆಯ ಬಜೆಟ್‌ನಿಂದ ಸಿರಿವಂತರಿಗೆ ಜಗತ್ತಿನಲ್ಲೇ ಅತಿಹೆಚ್ಚು ತೆರಿಗೆ ವಿಧಿಸುವ ದೇಶಗಳ ಸಾಲಿಗೆ ಭಾರತ | 6361 ಜನರಿಗೆ 42.7% ತೆರಿಗೆ (ಸೀಲ್‌)

ಮೊನ್ನೆಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಶ್ರೀಮಂತರಿಗೆ ಬಿಸಿ ಮುಟ್ಟಿದೆ. ಸೂಪರ್‌ ರಿಚ್‌ ಟ್ಯಾಕ್ಸ್‌ ಎಂದು ಕರೆಸಿಕೊಳ್ಳುವ ಅತಿ ಶ್ರೀಮಂತರಿಗೆ ವಿಧಿಸುವ ತೆರಿಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಟ್ಯಧಿಪತಿಗಳು ಈ ವರ್ಷದಿಂದ ಹೆಚ್ಚುಕಮ್ಮಿ ತಮ್ಮ ಆದಾಯದ ಅರ್ಧದಷ್ಟನ್ನು (ಶೇ.42.7) ಆದಾಯ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಇದರೊಂದಿಗೆ ಶ್ರೀಮಂತರಿಗೆ ಅತಿಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಒಂದಾಗಿ ಮಾರ್ಪಟ್ಟಿದೆ.

ಸೂಪರ್‌ ರಿಚ್‌ ಟ್ಯಾಕ್ಸ್‌ ಎಂದರೆ ಏನು?

ಬಡ, ಮಧ್ಯಮ ವರ್ಗದ ಜನರು ಮತ್ತು ಅಲ್ಪ ಶ್ರೀಮಂತರನ್ನು ಬಿಟ್ಟು ಆಗರ್ಭ ಶ್ರೀಮಂತರ ಗಳಿಕೆಯ ಮೇಲೆ ವಿಧಿಸುವ ಆದಾಯ ತೆರಿಗೆ. ಎಲ್ಲ ದೇಶಗಳಲ್ಲೂ ಇದರ ದರ ಸಾಮಾನ್ಯವಾಗಿ ಶೇ.25-30ಕ್ಕಿಂತ ಹೆಚ್ಚಿರುತ್ತದೆ. ಸಮಾಜ ಕಲ್ಯಾಣ ಯೋಜನೆಗಳಿಗೆ ಹೆಚ್ಚು ಹಣ ಸಂಗ್ರಹಿಸಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸರ್ಕಾರಗಳು ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸುತ್ತವೆ.

ಭಾರತದಲ್ಲಿ ಹೊಸ ಟ್ಯಾಕ್ಸ್‌ ಹೇಗಿದೆ?

ವಾಸ್ತವವಾಗಿ ಇದು ಹೊಸ ತೆರಿಗೆ ಅಲ್ಲ. ಈ ಹಿಂದಿನಿಂದಲೇ ನಮ್ಮ ದೇಶದಲ್ಲಿ ವಾರ್ಷಿಕ 10 ಲಕ್ಷ ರು.ಗಿಂತ ಹೆಚ್ಚು ಆದಾಯವಿರುವವರಿಗೆ ಶೇ.30ರಷ್ಟುತೆರಿಗೆ ವಿಧಿಸಲಾಗುತ್ತಿದೆ. ಮೊನ್ನೆಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಈ ದರವನ್ನು ಹೆಚ್ಚಿಸಿಲ್ಲ. ಆದರೆ, ಶೇ.30ರ ತೆರಿಗೆ ಮೇಲೆ ವಿಧಿಸುವ ಮೇಲ್ತೆರಿಗೆಗಳನ್ನು ಬೇರೆ ಬೇರೆ ಸ್ಲಾ್ಯಬ್‌ಗಳಲ್ಲಿ ಹೆಚ್ಚಿಸಿದ್ದಾರೆ.

2 ರಿಂದ 5 ಕೋಟಿ ರು. ಆದಾಯವಿರುವವರಿಗೆ ಮತ್ತು 5 ಕೋಟಿ ರು.ಗೆ ಮೇಲ್ಪಟ್ಟು ಆದಾಯ ಹೊಂದಿದವರಿಗೆ ವಿಧಿಸುವ ಶೇ.30ರ ತೆರಿಗೆಯ ಮೇಲೆ ಕ್ರಮವಾಗಿ ಶೇ.15 ಮತ್ತು ಶೇ.25ರಷ್ಟುಮೇಲ್ತೆರಿಗೆ ವಿಧಿಸಿದ್ದಾರೆ. ಅದರಿಂದಾಗಿ ಈ ಎರಡೂ ವರ್ಗದ ಶ್ರೀಮಂತರು ಪಾವತಿಸಬೇಕಿದ್ದ ತೆರಿಗೆ ಶೇ.39 ಮತ್ತು ಶೇ.42.7ಕ್ಕೆ ಏರಿಕೆಯಾಗಿದೆ.

ಎಷ್ಟು ಶ್ರೀಮಂತರು ತೆರಿಗೆ ಕಟ್ಟುತ್ತಾರೆ?

ಆದಾಯ ತೆರಿಗೆ ಇಲಾಖೆಯ ಪ್ರಕಾರ ನಮ್ಮ ದೇಶದಲ್ಲಿ 1 ಕೋಟಿ ರು.ಗಿಂತ ಅಧಿಕ ಆದಾಯವಿರುವವರಲ್ಲಿ ಶೇ.40ರಷ್ಟುಜನರು ಮಾತ್ರ ತಮ್ಮ ಆದಾಯ ಎಷ್ಟುಎಂಬುದರ ನಿಜವಾದ ಅಂಕಿಅಂಶಗಳನ್ನು ಬಹಿರಂಗ ಪಡಿಸುತ್ತಿದ್ದಾರೆ.

ಉಳಿದ 60% ಜನರು ತಮ್ಮ ಆದಾಯವನ್ನು ಗೌಪ್ಯವಾಗಿಟ್ಟು ತೆರಿಗೆ ವಂಚಿಸುತ್ತಿದ್ದಾರೆ. ಅಂದರೆ ತಮ್ಮ ಆದಾಯ ಹೆಚ್ಚಿದ್ದರೂ ಕಡಿಮೆ ಆದಾಯ ತೋರಿಸಿ ಅದಕ್ಕೆ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ಇನ್ನುಳಿದ ಹಣವನ್ನು ಕಪ್ಪುಹಣದ ರೀತಿಯಲ್ಲಿ ಶೇಖರಿಸುತ್ತಿದ್ದಾರೆ.

ಯಾವ ದೇಶದಲ್ಲಿ ಶ್ರೀಮಂತರಿಗೆ ಎಷ್ಟು ತೆರಿಗೆ?

ಭಾರತದಲ್ಲಿರುವ ಗರಿಷ್ಠ ತೆರಿಗೆ ದರ ಅಂದರೆ 42.7%. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಜರ್ಮನಿ, ಜಪಾನ್‌ ಮತ್ತು ಚೀನಾದಲ್ಲಿ ವಾರ್ಷಿಕ 5 ಕೋಟಿ ರು.ಗಿಂತ ಕಡಿಮೆ ಆದಾಯ ಇರುವವರೇ 45% ತೆರಿಗೆ ಪಾವತಿಸಬೇಕು. ಇನ್ನು ಅಮೆರಿಕದಲ್ಲಿ 3.42 ಕೋಟಿ ರು. ಆದಾಯ ಇರುವವರು 37% ತೆರಿಗೆ ಕಟ್ಟಬೇಕು. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ತೆರಿಗೆ ಪ್ರಮಾಣ ಕಡಿಮೆ ಇದೆ.

ಸ್ವೀಡನ್‌ 25%

ಬ್ರೆಜಿಲ್‌ 27.5%

ಭಾರತ 42.7%

ಚೀನಾ 45%

ದಕ್ಷಿಣ ಆಫ್ರಿಕಾ 45%

ಬ್ರಿಟನ್‌ 45%

ಜಪಾನ್‌ 49.9%

ಅಮೆರಿಕ 50%

ಕೆನಡಾ-54%

ಫ್ರಾನ್ಸ್‌ 66.2%

ತೆರಿಗೆ ಹೇರಿ ಶ್ರೀಮಂತವಾದ ಅಮೆರಿಕ, ಫ್ರಾನ್ಸ್‌, ಕೆನಡಾ

ಅಂಕಿ ಅಂಶಗಳ ಪ್ರಕಾರ ಫ್ರಾನ್ಸ್‌, ಕೆನಡಾ ಮತ್ತು ಅಮೆರಿಕದಲ್ಲಿ ಶ್ರೀಮಂತರಿಗೆ ಅತಿ ಹೆಚ್ಚು ಅಂದರೆ ಶೇ.50ರಷ್ಟುಅಥವಾ ಅದಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಈಗ ಜಾರಿ ಮಾಡಿರುವ ತೆರಿಗೆ ಹೆಚ್ಚಲ್ಲ. ಶ್ರೀಮಂತರಿಗೆ ತೆರಿಗೆ ಹೇರಿರುವ ಅಲ್ಲಿನ ಸರ್ಕಾರಗಳು, ಆ ಹಣವನ್ನು ಜನಸಾಮಾನ್ಯರಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡಲು ಮತ್ತು ಸಾಮಾಜಿಕ ಭದ್ರತೆಗೆ ವಿನಿಯೋಗಿಸುತ್ತಿವೆ.

42.7% ತೆರಿಗೆ ಎಷ್ಟು ಜನರಿಗೆ?

ಭಾರತದಲ್ಲಿ ಎಷ್ಟೇ ಆದಾಯ ತೆರಿಗೆ ವಿಧಿಸಿದರೂ ತೆರಿಗೆ ಏರಿಕೆಯ ಬಿಸಿ ಕೆಲವೇ ಜನರಿಗೆ ತಟ್ಟುತ್ತದೆ. ಏಕೆಂದರೆ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆಯೇ ನಮ್ಮ ದೇಶದಲ್ಲಿ ಬಹಳ ಕಡಿಮೆ. 2016-17ರಲ್ಲಿ 4.66 ಕೋಟಿ ಜನರು ತೆರಿಗೆ ರಿಟನ್ಸ್‌ರ್‍ ಸಲ್ಲಿಸಿದ್ದರು. ಅಂದರೆ, 130 ಕೋಟಿ ಜನರಲ್ಲಿ ಆದಾಯ ತೆರಿಗೆ ಇಲಾಖೆಗೆ ತಮ್ಮ ಆದಾಯದ ಲೆಕ್ಕ ನೀಡುತ್ತಿರುವವರು ಇಷ್ಟುಜನ ಮಾತ್ರ.

ತೆರಿಗೆ ರಿಟರ್ನ್ಸ್ ಸಲ್ಲಿಸಿದ ಈ 4.66 ಕೋಟಿ ಜನರಲ್ಲಿ ಎಲ್ಲರೂ ತೆರಿಗೆ ಪಾವತಿಸಿರುವುದಿಲ್ಲ. ಕೇವಲ ತಮ್ಮ ವ್ಯವಹಾರದ ಲೆಕ್ಕ ನೀಡಿದವರು, ತಾವು ಆದಾಯ ತೆರಿಗೆ ಪಾವತಿಸುವಷ್ಟುಆದಾಯ ಹೊಂದಿಲ್ಲ ಎಂದು ಹೇಳಿದವರು ಹಾಗೂ ಟಿಡಿಎಸ್‌ ರೀಫಂಡ್‌ ಪಡೆಯಲೆಂದು ರಿಟರ್ನ್ಸ್ ಸಲ್ಲಿಸಿರುವವರೂ ಇದರಲ್ಲಿ ಸೇರಿದ್ದಾರೆ.

ಇನ್ನು, ಎರಡು ವರ್ಷದ ಹಿಂದೆ ದೇಶದಲ್ಲಿ 74,983 ಜನರು (0.16) ತಮ್ಮ ಆದಾಯ 1ರಿಂದ 5 ಕೋಟಿ ರು. ಇದೆ ಎಂದು ಘೋಷಿಸಿಕೊಂಡಿದ್ದರು. ಇವರಲ್ಲಿ 2 ಕೋಟಿಗಿಂತ ಕಡಿಮೆ ಆದಾಯ ಇರುವವರಿಗೇನೂ ಈಗ ಸೂಪರ್‌ ರಿಚ್‌ ತೆರಿಗೆಯ ಹೊರೆ ಬೀಳುವುದಿಲ್ಲ. ಶೇ.42.7ರ ತೆರಿಗೆ ಹೊರೆ ಬೀಳುವುದು ಕೇವಲ 6,361 ಶ್ರೀಮಂತರ ಮೇಲೆ.

ಶ್ರೀಮಂತರ ವಿರೋಧ: ದೇಶ ಬಿಡುವವರ ಸಂಖ್ಯೆ ಹೆಚ್ಚಳ?

ಈ ಬಾರಿಯ ಬಜೆಟ್‌ನಲ್ಲಿ ಸೂಪರ್‌ ರಿಚ್‌ ಟ್ಯಾಕ್ಸ್‌ ಹೆಚ್ಚಾಗಿರುವುದಕ್ಕೆ ಶ್ರೀಮಂತರ ವಲಯದಿಂದ ಭಾರಿ ವಿರೋಧ ಕೇಳಿಬಂದಿದೆ. ಈಗಾಗಲೇ ನಮ್ಮ ದೇಶ ಶ್ರೀಮಂತರಿಗೆ ಅತಿ ಹೆಚ್ಚು ತೆರಿಗೆ ವಿಧಿಸುವವರ ಸಾಲಿನಲ್ಲಿದ್ದು, ಅದನ್ನು ಮತ್ತಷ್ಟುಏರಿಸಿರುವುದು ಅವೈಜ್ಞಾನಿಕ ಎಂಬ ಟೀಕೆ ವ್ಯಕ್ತವಾಗಿದೆ.

ಇಷ್ಟೆಲ್ಲಾ ತೆರಿಗೆ ಪಾವತಿಸಿಯೂ ನಾವು ದೆಹಲಿಯಂತಹ ಮಲಿನ ಪರಿಸರದಲ್ಲಿ, ಮುಂಬೈನಂತಹ ಟ್ರಾಫಿಕ್‌ ಜಾಮ್‌ನಲ್ಲಿ, ಬೆಂಗಳೂರಿನಂತಹ ಕೆಟ್ಟರಸ್ತೆಗಳಲ್ಲಿ ಒದ್ದಾಡಬೇಕು. ಇದರ ಬದಲು ಕಡಿಮೆ ತೆರಿಗೆ ವಿಧಿಸುವ ಸಿಂಗಾಪುರ, ಸ್ವೀಡನ್‌ ಮುಂತಾದ ಶ್ರೀಮಂತ ದೇಶಗಳಿಗೇ ಹೋಗಿ ನೆಲೆಸುವುದು ಒಳ್ಳೆಯದಲ್ಲವೇ ಎಂಬ ಪ್ರಶ್ನೆಗಳು ಬರಲಾರಂಭಿಸಿವೆ.

ಶ್ರೀಮಂತರ ಮೇಲೆ ತೆರಿಗೆ ಹೊಸತಲ್ಲ: ಈಗ ಇಳಿಕೆಯಾಗಿದೆ!

1960ರ ದಶಕ - ಶ್ರೀಮಂತರಿಗೆ ಶೇ.88 ತೆರಿಗೆ

1970ರ ದಶಕ - ಶ್ರೀಮಂತರಿಗೆ ಶೇ.85 ತೆರಿಗೆ

1980ರ ದಶಕ - ಶ್ರೀಮಂತರಿಗೆ ಶೇ.50 ತೆರಿಗೆ

1990ರ ದಶಕ - ಶ್ರೀಮಂತರಿಗೆ ಶೇ.40 ತೆರಿಗೆ

* 1997ರಲ್ಲಿ ಚಿದಂಬರಂ ಮಂಡಿಸಿದ ‘ಡ್ರೀಮ್‌ ಬಜೆಟ್‌’ನಲ್ಲಿ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ.30ಕ್ಕೆ ಇಳಿಸಿದರು. ನಂತರದ ವರ್ಷದಲ್ಲಿ ಅದರ ಮೇಲೆ ಸರ್‌ಚಾಜ್‌ರ್‍ ವಿಧಿಸುತ್ತಾ ಬಂದಿದ್ದರಿಂದ ಈಗ ಶೇ.42.7ಕ್ಕೆ ಏರಿಕೆಯಾಗಿದೆ.

ಒಬಾಮಾ ಪ್ರಯೋಗಿಸಿದ ಅಸ್ತ್ರ

ಬರಾಕ್‌ ಒಬಾಮ ಎರಡನೇ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದರೆ 2013ರಲ್ಲಿ ದೇಶದ ಆಗರ್ಭ ಶ್ರೀಮಂತರಿಗೆ ಹೆಚ್ಚು ತೆರಿಗೆ ಹೇರಿ ದೇಶದ ಆರ್ಥಿಕತೆಯನ್ನು ಬಲವರ್ಧಿಸುವ ನಿರ್ಧಾರ ಕೈಗೊಂಡರು. ಅದು ಫಲ ನೀಡಿತು. ಇಡೀ ದೇಶದ ಜನರು ಅದನ್ನು ಒಪ್ಪಿಕೊಂಡರು.

ದೇಶದ ಜನರಿಗೆ ಉಚಿತ ಆರೋಗ್ಯ ತಪಾಸಣೆಗೆ ಒಬಾಮಾ ಕೇರ್‌ ಯೋಜನೆಯನ್ನು ಒಬಾಮಾ ಆರಂಭಿಸಿದರು. ಹಾಗೆಯೇ ಅದೇ ವರ್ಷ ಫ್ರೆಂಚ್‌ ಅಧ್ಯಕ್ಷ ಪ್ರಾಂಕೋಯಿಸ್‌ ಹೊಲಾಂಡೆ ಚುನಾವಣಾ ಪ್ರಚಾರದ ವೇಳೆ ಇದೇ ಅಸ್ತ್ರವನ್ನು ಮುಂದಿಟ್ಟು ಗೆದ್ದಿದ್ದರು. ಹೀಗೆ ಅನೇಕ ಮುಂದುವರಿದ ದೇಶಗಳು ‘ಸೂಪರ್‌ ರಿಚ್‌’ ಟ್ಯಾಕ್ಸ್‌ ಮೂಲಕ ದೇಶದ ಆರ್ಥಿಕತೆಯ ಬಲವರ್ಧನೆಗೆ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿವೆ.

2014 ರಿಂದ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಳ

2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹೆಚ್ಚೆಚ್ಚು ಜನರನ್ನು ಆದಾಯ ತೆರಿಗೆ ಪಾವತಿಸುವ ವ್ಯಾಪ್ತಿಗೆ ತರಲು ಕ್ರಮ ಕೈಗೊಂಡಿತು. ಇದರ ಪರಿಣಾಮ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಕೇವಲ ಐದು ವರ್ಷದಲ್ಲಿ ಶೇ.80ರಷ್ಟು ಏರಿಕೆಯಾಗಿದೆ.

ದೇಶದಲ್ಲಿ 2013-14ರಲ್ಲಿ 3.41 ಕೋಟಿ ಜನರು ತೆರಿಗೆ ರಿಟನ್ಸ್‌ರ್‍ ಸಲ್ಲಿಸಿದ್ದರು. 2017-18ರಲ್ಲಿ ಈ ಸಂಖ್ಯೆ 6.85 ಕೋಟಿಗೆ ಏರಿಕೆಯಾಗಿದೆ. ಆದರೆ ಇವರಲ್ಲಿ 2.2 ಕೋಟಿ ಜನರು ತೆರಿಗೆ ಪಾವತಿಸಿಲ್ಲ. ಬರೀ ರಿಟನ್ಸ್‌ರ್‍ ಸಲ್ಲಿಸಿದ್ದಾರೆ.

ಹಾಗೆಯೇ ಈ 4 ವರ್ಷದಲ್ಲಿ 1 ಕೋಟಿಗಿಂತ ಅಧಿಕ ಆದಾಯ ತಮಗಿದೆ ಎಂದು ಘೋಷಿಸಿಕೊಂಡವರ ಸಂಖ್ಯೆಯೂ 60% ಏರಿಕೆಯಾಗಿದೆ. 2013-14ರಲ್ಲಿ 88,649 ಜನರು ಒಂದು ಕೋಟಿಗೂ ಅಧಿಕ ಆದಾಯವಿರುವುದಾಗಿ ಘೋಷಿಸಿಕೊಂಡಿದ್ದರು. 2017-18ರಲ್ಲಿ ಈ ಸಂಖ್ಯೆ 1,40,139ಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹ ಎಲ್ಲಿಂದ?

1. ಮಹಾರಾಷ್ಟ್ರ-38.3%

2. ದೆಹಲಿ- 13.7%

3. ಕರ್ನಾಟಕ-10.1

4. ತಮಿಳುನಾಡು-6.7

5. ಗುಜರಾತ್‌-4.5

ದೇಶದ ಅಭಿವೃದ್ಧಿಗೆ ಸಮಸ್ತ ಪ್ರಜೆಗಳು ತುಸು ಹೆಚ್ಚು ಕೊಡುಗೆ ನೀಡಬೇಕಾದ ಅಗತ್ಯವಿದೆ. ಸೂಪರ್‌ ರಿಚ್‌ ಟ್ಯಾಕ್ಸ್‌ ಎಂದರೆ ಶ್ರೀಮಂತರ ಮೇಲೆ ಹೊರೆ ಹೇರಿ ದೇಶ ಅಭಿವೃದ್ಧಿಪಡಿಸುವುದು ಎಂದಲ್ಲ. ಈ ತೆರಿಗೆಯಿಂದ ಸಿಗುವ ಸೌಲಭ್ಯಗಳು ಕೇವಲ ಬಡವರಿಗಷ್ಟೇ ತಲುಪುವುದಿಲ್ಲ, ಶ್ರೀಮಂತರಿಗೂ ತಲುಪುತ್ತವೆ. ಸುವ್ಯಸ್ಥಿತ ರಸ್ತೆ, ಸಾರಿಗೆ ಸಂಪರ್ಕ ಇವು ದೇಶದ ಸಮಸ್ತರಿಗೂ ಬೇಕಲ್ಲವೇ.

ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಮಂತ್ರಿ