ನವದೆಹಲಿ[ಡಿ.13]: ದೆಹಲಿ- ಲಖನೌ ಮಾರ್ಗದಲ್ಲಿ ತನ್ನ ಅಂಗಸಂಸ್ಥೆ ಐಆರ್‌ಸಿಟಿಸಿ (ಇಂಡಿಯನ್‌ ರೇಲ್ವೆ ಕೇಟರಿಂಗ್‌ ಅಂಡ್‌ ಟೂರಿಸಂ ಕಾರ್ಪೋರೇಷನ್‌)ಗೆ ಖಾಸಗಿ ರೈಲು ಓಡಿಸಲು ಅನುಮತಿ ನೀಡಿರುವ ಭಾರತೀಯ ರೈಲ್ವೆ, ಇದೀಗ ಇನ್ನೂ 150 ಮಾರ್ಗಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ.

ಡಿ.8-9ರಂದು ನಡೆದ ಅತ್ಯುನ್ನತ ಮಟ್ಟದ ಸಭೆಯಲ್ಲಿ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಬಹುದಾದ 150 ಮಾರ್ಗಗಳನ್ನು ಶೋಧಿಸುವಂತೆ ಅಧಿಕಾರಿಗಳಿಗೆ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಸೂಚನೆ ನೀಡಿದ್ದಾರೆ. ‘150 ಮಾರ್ಗಗಳಿಗೆ ಮುಂದಿನ ತಿಂಗಳು ಬಿಡ್ಡಿಂಗ್‌ ನಡೆಯಲಿದೆ. ಎರಡು ಹಂತದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ರೈಲ್ವೆ ಮಂಡಳಿ ಮುಖ್ಯಸ್ಥ ವಿನೋದ್‌ ಕುಮಾರ್‌ ಯಾದವ್‌ ತಿಳಿಸಿದ್ದಾರೆ.

150 ಮಾರ್ಗಗಳ ಪೈಕಿ ಮುಂಬೈನಿಂದ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ 30 ಮಾರ್ಗಗಳನ್ನು ಖಾಸಗಿಗೆ ವಹಿಸುವ ಚಿಂತನೆ ಇದೆ. ಕರ್ನಾಟಕದ ಕೆಲವೊಂದು ಮಾರ್ಗಗಳನ್ನೂ ಖಾಸಗಿಗೆ ಒಪ್ಪಿಸಲಾಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಶೀಘ್ರದಲ್ಲೇ ಮಾರ್ಗಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತುರಂತೋ, ತೇಜಸ್‌, ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳು ಚಲಿಸುತ್ತಿರುವ ಮಾರ್ಗವನ್ನು ಖಾಸಗೀಕರಣ ಮಾಡಲಾಗುತ್ತದೆ. ಆದರೆ ಈ ರೈಲುಗಳೂ ಮೊದಲಿನಂತೆಯೇ ಚಲಿಸುತ್ತವೆ. ಖಾಸಗಿಗೆ ವಹಿಸಿದ ಮಾರ್ಗದಲ್ಲಿ ಖಾಸಗಿ ಕಂಪನಿಗಳು ತಮ್ಮದೇ ರೈಲು ಓಡಿಸಲಿವೆ. ರೈಲಿನ ಪ್ರಯಾಣ ಶುಲ್ಕ, ಆಹಾರ ದರ ಎಲ್ಲವನ್ನೂ ಖಾಸಗೀ ಕಂಪನಿಗಳೇ ನಿರ್ಧರಿಸುತ್ತವೆ. ರೈಲ್ವೆ ಇಲಾಖೆ ಪಾತ್ರವಿರುವುದಿಲ್ಲ. ಇದಲ್ಲದೆ, ಪ್ರಯಾಣಿಕರ ಮನೆಯಿಂದಲೇ ಲಗೇಜ್‌ ತಂದು ಅದನ್ನು ನಿರ್ವಹಿಸುವ ಸೇವೆಯನ್ನೂ ಒದಗಿಸುತ್ತವೆ. ಈ ರೈಲುಗಳು ಸಮಯಕ್ಕೆ ಸರಿಯಾಗಿ ಚಲಿಸುತ್ತವೆ. ರೈಲ್ವೆ ಇಲಾಖೆ ಓಡಿಸುವ ರೈಲುಗಳಿಗಿಂತ ಖಾಸಗಿ ಕಂಪನಿಯ ರೈಲಿಗೆ ಆಯಾ ಮಾರ್ಗದಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.