ಬೆಂಗಳೂರು(ಅ.10): ಗೆಳೆಯನಿಗೆ ಸಾಲ ನೀಡುವುದು ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಷಯ. ಈ ವ್ಯವಹಾರದಲ್ಲಿ ನೀವು ಗೆಳೆಯನನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ವ್ಯವಹಾರ ಸೂಕ್ಷ್ಮ ಏಕೆಂದರೆ, ಗೆಳೆಯನೊಬ್ಬ ಕಷ್ಟಕಾಲದಲ್ಲಿ ಸಾಲ ಕೇಳಿದಾಗ ನೀವು ಇಲ್ಲವೆಂದು ಹೇಳುವುದು ಬಹಳ ಕಷ್ಟ. ಸಂಕೀರ್ಣವೇಕೆಂದರೆ, ಆತನಿಂದ ಸಾಲವನ್ನು ವಸೂಲಿ ಮಾಡುವುದು ನಿಮ್ಮಿಬ್ಬರ ಗೆಳೆತನವನ್ನು ಅಪಾಯದಂಚಿಗೆ ದೂಡುವ ಸಾಧ್ಯತೆಯಿರುತ್ತದೆ.

 

ಗೆಳೆಯರಿಗೆ ನೀಡಿದ ಸಾಲಕ್ಕೆ ಯಾವುದೇ ಕಠಿಣ ಷರತ್ತು/ನಿಬಂಧನೆಗಳಾಗಲಿ, ದಾಖಲೆಗಳಾಗಲಿ ಇರುವುದಿಲ್ಲ. ಆದುದರಿಂದ ಸಾಮಾನ್ಯವಾಗಿ ‘ಇಲ್ಲ’ವೆಂದು ಹೇಳಲು ಕಲಿಯಬೇಕಾಗುತ್ತದೆ. ‘ಇಲ್ಲ’ವೆಂದು ಹೇಳಲು ಸಾಧ್ಯವಾಗದ್ದಲ್ಲಿ, ಬಹಳ ಜಾಗ್ರತೆ ವಹಿಸಬೇಕಾಗುತ್ತದೆ.

ಸಾಲ ನೀಡುವುದು ನಿಮ್ಮ ಹಾಗೂ ಗೆಳೆಯನ ನಡುವಿನ ಸಮೀಕರಣವನ್ನು ಬದಲಾಯಿಸುತ್ತದೆ. ತಾನು ಪಡೆದಿರುವ ಸಾಲದ ಹೊಣೆಯು ನಿಮ್ಮ ಬಗ್ಗೆಗಿರುವ ಗೆಳೆತನದ ಭಾವನೆ ಮೇಲೆ ಪರಿಣಾಮ ಬೀರಬಹುದು. ಗೆಳೆಯರ ನಡುವೆ ಇರುವ ಪರಸ್ಪರ ವಿಶ್ವಾಸವೂ ಕೂಡಾ ಹಣವನ್ನು ವಾಪಾಸು ಕೇಳುವುದಕ್ಕೆ ಅಡಚಣೆಯಾಗುತ್ತದೆ.

ಗೆಳೆಯನಿಗೆ ಸಾಲ ನೀಡುವ ಮುನ್ನ ಗಮನಿಸಬೇಕಾದ 10 ಅಂಶಗಳು:

1. ಸಾಲ ಪಡೆಯುವ ಸಂದರ್ಭದಲ್ಲಿ  ನಿಮ್ಮ ಗೆಳೆಯ ನಿರ್ದಿಷ್ಟ ಸಮಯಾವಕಾಶದೊಳಗೆ ಮರುಪಾವತಿಸುವುದಾಗಿ ಖಚಿತಪಡಿಸಬಹುದು. ಒಂದು ವೇಳೆ ಆತ ಮರುಪಾವತಿಸಲು ವಿಫಲರಾದರೆ?... ಸಾಲ ಪಡೆಯುವಾಗ ಆತ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದಿರಬಹುದು. ಆದುದರಿಂದ ಮರುಪಾವತಿಸಲು ವಿಳಂಬ ಮಾಡಬಹುದು.  

2. ಸಾಲ ನೀಡುವಾಗ ಯಾವುದೇ ಕಾನೂನು ದಾಖಲೆಯನ್ನು ಮಾಡಿಕೊಳ್ಳದಿದ್ದರೆ, ಸರಿಯಾದ ಸಮಯದಲ್ಲಿ ಸಾಲ ಮರುಪಾವತಿಯ ಸಾಧ್ಯತೆಗಳು ಕೂಡಾ ಕಡಿಮೆಯಾಗುವುದು.

3. ಗೆಳೆಯ ಸಾಲ ಮರುಪಾವತಿಸಲು ವಿಳಂಬ ಮಾಡುತ್ತಿದ್ದಲ್ಲಿ, ಆತನ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ. ಆತ ಏನಾದರು ಸಮಸ್ಯೆಯನ್ನು ಎದುರಿಸುತ್ತಿರಬಹುದು. ಆದುದರಿಂದ ಸಾಲ ಮರುಪಾವತಿಸಲು ಕಷ್ಟವಾಗುತ್ತಿರಬಹುದು. ಅಂತಹ ಸಂದರ್ಭದಲ್ಲಿ ಇನ್ನೂ ಸ್ವಲ್ಪ ಸಮಯಾವಕಾಶ ನೀಡಬೇಕು.

4. ಆತನ ಸಮಸ್ಯೆಯನ್ನು ತಿಳಿದ ಬಳಿಕ, ನೀವು ನಿಮ್ಮ ಸಮಸ್ಯೆಯ ಬಗ್ಗೆ ಆತನಿಗೆ ಅರ್ಥಮಾಡಿಸಿರಿ. ಆತನ ಮನೆಗೆ ಭೇಟಿ ನೀಡಿ ನಿಮ್ಮ ಅನಿವಾರ್ಯತೆಗಳ ಬಗ್ಗೆ ತಿಳಿಸಿ, ಹಣವನ್ನು ವಾಪಾಸು ಕೇಳಿ.

5.ನಿಮ್ಮ ಬಳಿ ಗೆಳೆಯ ಸಾಲವನ್ನು ಕೇಳಿದರೆ, ಸಾಲ ಪಡೆಯಬಹುದಾದ ಇತರ ಮಾರ್ಗಗಳ ಬಗ್ಗೆ ಸಲಹೆ ನೀಡಿ. ಬ್ಯಾಂಕುಗಳಿಂದ ವೈಯುಕ್ತಿಕ ಸಾಲ, ಚಿನ್ನದ ಮೇಲಿನ ಸಾಲ, ಪ್ರಾಪರ್ಟಿ ಮೇಲಿನ ಸಾಲ,  ನಿಗದಿತ ಠೇವಣಿ ಮೇಲೆ ಓವರ್’ಡ್ರಾಫ್ಟ್ ಸೌಲಭ್ಯ ಇತ್ಯಾದಿಗಳನ್ನು ಪ್ರಯತ್ನಿಸಬಹುದಾಗಿದೆ.

6. ಬಹಳ ಪ್ರಯತ್ನಿಸಿದರೂ ಹಣ ವಾಪಾಸು ಬಾರದಿದ್ದಲ್ಲಿ, ನಿಮ್ಮ ಗೆಳೆಯರು ಅಥವಾ ಕುಟುಂಬ ಸದಸ್ಯರನ್ನು ಸಾಲ ವಸೂಲಿ ಪ್ರಯತ್ನದಲ್ಲಿ ಸೇರಿಸಿಕೊಳ್ಳುವುದರಿಂದ ಪ್ರಯೋಜನವಾಗಬಹುದು.

7. ಭರವಸೆ ಅಥವಾ ವಾಗ್ದಾನದ ಮೇಲೆ ಸಾಲ ನೀಡುವ ಬದಲು ಸಮರ್ಪಕವಾದ ದಾಖಲೆ (ಸ್ಟ್ಯಾಂಪ್ ಪೇಪರ್’ನಲ್ಲಿ ಅಗ್ರೀಮೆಂಟ್)ಯನ್ನು ಸಿದ್ಧಪಡಿಸಿಕೊಳ್ಳಿ. ಸಾಲದ ಮೊತ್ತ, ಮರು ಪಾವತಿ ದಿನಾಂಕ, ಹಾಗೂ ಇನ್ನಿತರ ನಿಯಮಗಳನ್ನು ವಿವರವಾಗಿ ಅದರಲ್ಲಿ ದಾಖಲಿಸಿಕೊಳ್ಳಿ. ಈ ಸಂದರ್ಭದಲ್ಲಿ ನಿಮ್ಮ ಕುಟುಂಬ ಸದಸ್ಯರನ್ನೂ ಜತೆ ಸೇರಿಸಿಕೊಳ್ಳಿ. ನಿಮ್ಮ ಅನುಪಸ್ಥಿತಿಯಲ್ಲಿ ಅವರು ಸಾಲವನ್ನು ಹಿಂಪಡೆಯಬಹುದು.

8. ಗೆಳೆಯನಿಗೆ ಸಾಲ ನೀಡಿರುವ ಬಗ್ಗೆ ದಾಖಲೆಯನ್ನು ಹೊಂದುವಂತಾಗಲು ಹಣವನ್ನು ನಗದಿನ ಬದಲು ಚೆಕ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆತನ ಖಾತೆಗೆ ವರ್ಗಾಯಿಸಿ.

9. ಸಾಲ ವಸೂಲಿ ಮಾಡಲು ಯಾವುದೇ ಪ್ರಯತ್ನಗಳು ಫಲ ನೀಡದಿದ್ದಾಗ, ಅಂತಿಮವಾಗಿ ಕಾನೂನು ಕ್ರಮ ಜರುಗಿಸಿ. ಈ ಸಂದರ್ಭದಲ್ಲಿ ನಿಮ್ಮಬಳಿ ಸಮರ್ಪಕ ದಾಖಲೆಗಳಿರುವುದು ಅತ್ಯವಶ್ಯ. ನಿಮ್ಮಿಬ್ಬರ ನಡುವೆ ಆಗಿರುವ ಮೆಸೇಜ್ ಸಂಭಾಷಣೆಗಳು, ಬ್ಯಾಂಕ್ ವಿವರಗಳು ಹಾಗೂ ಇನ್ನಿತರ ದಾಖಲೆಗಳು ನಿಮ್ಮ ನೆರವಿಗೆ ಬರುವುದು.

10. ಕಾನೂನೂ ಕ್ರಮ ಜರುಗಿಸುವುದು ಕೊನೆಯ ಆಯ್ಕೆಯಾದರೂ, ಅದು ಖರ್ಚಿನ ದೃಷ್ಟಿಯಿಂದ ನಿಮಗೆ  ಹೊರೆಯಾಗಬಹುದು.  ಇಂತಹ ಪರಿಸ್ಥಿತಿಯಲ್ಲಿ ನೀವು ಕೇವಲ ನಿಮ್ಮ ಗೆಳೆಯನನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಕಾನೂನು ಕ್ರಮಕ್ಕೆ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.

ನಿಮ್ಮ ಮುಂದಿರುವ ಎಲ್ಲಾ ಆಯ್ಕೆಗಳು ನಿಷ್ಪ್ರಯೋಜಕವಾಗುವ ಮುನ್ನ, ಅಂತಹ ಕ್ಲಿಷ್ಟಕರವಾದ ಸನ್ನಿವೇಶವನ್ನು ಹೇಗೆ ತಪ್ಪಿಸಬಹುದೆಂದು ಸರಿಯಾಗಿ ಯೋಚಿಸಿ ಮುಂದುವರೆಯಿರಿ.