ನವದೆಹಲಿ(ನ.02): ‘ಬಾಬಾ ಕಾ ಡಾಬಾ’, ಸೋಶಿಯಲ್ ಮೀಡಿಯಾ ಮೂಲಕ ಭಾರೀ ಸೌಂಡ್ ಮಾಡಿದ್ದ ಪುಟ್ಟ ಹೋಟೆಲ್ ಇದು. ರಸ್ತೆ ಪಕ್ಕದಲ್ಲಿ ಸಣ್ಣ ಕ್ಯಾಂಟೀನ್ ಇಟ್ಟುಕೊಂಡು ವ್ಯಾಪಾರ ಇಲ್ಲದೆ ಕಣ್ಣೀರು ಹಾಕಿದ್ದ ವೃದ್ಧ ದಂಪತಿಯ ಕಣ್ಣೀರಿನ ವಿಡಿಯೋ ಸೋಶಿಯಲ್ ಮೀಡಿಯಾ ಮೂಲಕ ಸೌಂಡ್ ಮಾಡಿ, ಬಳಿಕ ಭಾರೀ ಪ್ರಸಿದ್ಧಿ ಪಡೆದಿದ್ದ ಹೋಟೆಲ್ ಇದು. ಆದರೀಗ ವೃದ್ಧ ದಂಪತಿಯ ನೋವಿಗೆ ಮರುಗಿ ಅವರನ್ನು ಫೇಮಸ್ ಮಾಡಿ, ಕ್ಯಾಂಟೀನ್ ಎದುರು ಜನರ ಸಾಲು ಸೇರುವಂತೆ ಮಾಡಿದ್ದ ಟ್ಯೂಬರ್ ವಿರುದ್ಧ ಕ್ಯಾಂಟೀನ್ ಮಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಬಾ ಕಾ ಡಾಬಾ ವಿಡಿಯೋ ಮಾಡಿದ್ದ ಗೌರವ್ ವಾಸನ್ ಜನರಿಂದ ಹಣ ಪಡೆಯುತ್ತಿದ್ದಾರೆ ಎಂದು ದೂರಿ ಈ ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ತನ್ನ ಸ್ನೇಹಿತರ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿ ತಮ್ಮ ಹೆಸರಲ್ಲಿ ಜನರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಬಾಬಾ ಕಾ ಡಾಬಾ ಮಾಲೀಕ ಕಾಂತ ಪ್ರಸಾದ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ದಕ್ಷಿಣ ದೆಹಲಿಯ ಮಾಳ್ವಿಯಾ ನಗರದ ರಸ್ತೆಯ ಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಈ ದಂಪತಿ ಗ್ರಾಹಕರಿಲ್ಲದೇ ಪರದಾಡುತ್ತಿದ್ದ ವಿಡಿಯೋವನ್ನು ಫುಡ್ ಬ್ಲಾಗರ್ ಗೌರವ್ ವಾಸನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಈ ದಂಪತಿಗೆ ಸಹಾಯ ಮಾಡಬೇಕು ಎಂದು ಮನವಿಯನ್ನೂ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.  ವೃದ್ಧ ದಂಪತಿ ಕಣ್ಣೀರಿಗೆ ಮಿಡಿದು, ನಟರು ಸೇರಿದಂತೆ ಬಹಳಷ್ಟು ಜನರು ವಿಡಿಯೋ ಶೇರ್ ಮಾಡಿದ್ದರು. ಇದರ ಪರಿಣಾಮ ಎಂಬಂತೆ ದಿನಬೆಳಗಾಗುತ್ತಿದ್ದಂತೆಯೇ ಈ ಡಾಬಾದೆದುರು ಜನರ ದಂಡೇ ನೆರೆದಿತ್ತು.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಹಳಷ್ಟು ಜನರು ದಂಪತಿಗೆ ಹಣಕಾಸಿನ ನೆರವನ್ನೂ ನೀಡಿದ್ದರು. ಆದರೆ ಇದೀಗ ದಂಪತಿ ಠಾಣೆ ಮೆಟ್ಟಿರೇರಿದ್ದು, ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾಲ್ವಿಯಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.