8 ವರ್ಷಗಳ ಬಳಿಕ ರಾಶಿ ಇಡಿ ಅಡಕೆ ಬೆಲೆ 50 ಸಾವಿರಕ್ಕೇರಿಕೆ..!
* ಕಳೆದೊಂದು ವಾರದಿಂದ ಏರುತ್ತಿರುವ ಅಡಕೆ ದರ
* ರಾಶಿ ಇಡಿ ಮಾದರಿಯ ಅಡಕೆ ಪ್ರತಿ ಕ್ವಿಂಟಲ್‌ಗೆ 50,019 ದಾಖಲು
* ವಿದೇಶಿ ಅಡಕೆಯ ಆಮದಿನ ಮೇಲೆ ದೊಡ್ಡ ಪ್ರಮಾಣದ ತೆರಿಗೆ
ಗೋಪಾಲ್ ಯಡಗೆರೆ
ಶಿವಮೊಗ್ಗ(ಆ.30): ಅಡಕೆ ಧಾರಣೆ ಮತ್ತೆ ಹೊಸ ದಾಖಲೆ ಬರೆಯಲಾರಂಭಿಸಿದೆ. ಎಂಟು ವರ್ಷಗಳ ಬಳಿಕ ರಾಶಿ ಇಡಿ ಮಾದರಿಯ ಅಡಕೆ ದರ ಭಾನುವಾರ ಅರ್ಧ ಲಕ್ಷ ದಾಟಿದೆ.
ಭಾನುವಾರ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಮಾರುಕಟ್ಟೆಯಲ್ಲಿ ರಾಶಿ ಇಡಿ ಮಾದರಿಯ ಅಡಕೆ ಪ್ರತಿ ಕ್ವಿಂಟಲ್‌ಗೆ .50,019 ದಾಖಲಾಗಿದೆ. ಇದೇ ರೀತಿ ಬೆಟ್ಟೆ ಮಾದರಿಯ ಅಡಕೆ ಕೂಡ ಪ್ರತಿ ಕ್ವಿಂಟಲ್‌ಗೆ 50,199 ದಾಖಲಾಗಿದೆ. ಆದರೆ, ಸರಕು ಮಾದರಿಯ ಅಡಕೆ ಮಾತ್ರ 68,919 ಗಳಲ್ಲಿ ಕೊನೆಗೊಂಡಿದೆ. ಇದು ಕಳೆದ ವಾರದಲ್ಲಿ 75 ಸಾವಿರ ದಾಟಿತ್ತು.
ಕಳೆದೆರಡು ವರ್ಷಗಳಿಂದ ರಾಶಿ ಇಡಿ ಮಾದರಿಯ ಅಡಕೆ ಸರಾಸರಿ ಧಾರಣೆ 40-42 ಸಾವಿರಗಳಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಧಾರಣೆಯಲ್ಲಿ ಏರಿಕೆ ಕಾಣುತ್ತಾ ಅರ್ಧ ಲಕ್ಷ ದಾಟಿದೆ. ಒಂದು ಮೂಲದ ಪ್ರಕಾರ, ವಿದೇಶಿ ಅಡಕೆಯ ಆಮದಿನ ಮೇಲೆ ದೊಡ್ಡ ಪ್ರಮಾಣದ ತೆರಿಗೆ ವಿಧಿಸಿರುವುದು, ಡ್ರೈಫ್ರೂಟ್ ಹೆಸರಿನಲ್ಲಿ ಬರುತ್ತಿದ್ದ ಅಡಕೆಯ ಕಳ್ಳಾಟವನ್ನು ತೆರಿಗೆ ಇಲಾಖೆ ಪತ್ತೆ ಹಚ್ಚಿದ್ದು ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ಅಡಕೆಯಿಂದ ಹೋಳಿಗೆ ತಯಾರಿ : ಮಾರುಕಟ್ಟೆಯಲ್ಲಿ ಬೆಲೆ ಏರಿಕೆ
ಷೇರು ಮಾರುಕಟ್ಟೆಯಲ್ಲಿ ಹರ್ಷದ್ ಮೆಹ್ತಾ ನಡೆಸಿದ ತಂತ್ರಗಾರಿಕೆಯನ್ನು ಯಾರೂ ಮರೆತಿಲ್ಲ. ಅದರಂತೆ ಮಾರುಕಟ್ಟೆಯಲ್ಲಿ ಅಡಕೆ ದಾಸ್ತಾನು ಸ್ವಲ್ಪ ಕಡಿಮೆ ಇದೆ ಎಂದಾಕ್ಷಣ ದೊಡ್ಡ ವರ್ತಕರು ನೂರಾರು ಕೋಟಿ ಅಡಕೆಯನ್ನು ಏಕಾಏಕಿ ಖರೀದಿಸಿ ದಾಸ್ತಾನು ಮಾಡುತ್ತಾರೆ. ನಂತರ ಈ ವರ್ತಕರು ನಿಧಾನವಾಗಿ ಮಾರುಕಟ್ಟೆಯಲ್ಲಿ ಧಾರಣೆ ಏರಿಸುತ್ತಾ ಹೋಗುತ್ತಾರೆ.
ಇತ್ತ ಉತ್ತರ ಭಾರತದ ಅಡಕೆ ಖರೀದಿದಾರರಿಗೆ ಅಡಕೆ ಪೂರೈಸುವ ಒಪ್ಪಂದ ಮಾಡಿಕೊಂಡ ಇಲ್ಲಿನ ವರ್ತಕರು ಅಡಕೆ ಸಿಗದೇ ಕಂಗಾಲಾಗುತ್ತಾರೆ. ಕೊನೆಗೆ ಮುಂದೆ ಇನ್ನಷ್ಟು ದರ ಏರಿಕೆಯಾದರೆ ಎಂಬ ಭಯದಲ್ಲಿ ಹೆಚ್ಚು ಧಾರಣೆಯ ಟೆಂಡರ್ ನೀಡಲಾರಂಭಿಸುತ್ತಾರೆ. ಆಗ ದೊಡ್ಡ ವರ್ತಕರು ಹೆಚ್ಚಿನ ದರಕ್ಕೆ ಅಡಕೆ ಮಾರಿ ಸುಮ್ಮನಾಗಿಬಿಡುತ್ತಾರೆ. ಆಗ ಏಕಾಏಕಿ ಧಾರಣೆ ಕುಸಿಯುತ್ತದೆ ಎಂದು ಹೇಳಲಾಗಿದೆ.