ಬಿಜಿಂಗ್(ನ.11): ಚೀನಾದ ದೈತ್ಯ ಇ-ಕಾಮರ್ಸ್ ಕಂಪನಿ ಅಲಿಬಾಬಾ ಕೇವಲ ಒಂದೇ ಗಂಟೆಯಲ್ಲಿ ಬರೋಬ್ಬರಿ 10 ಬಿಲಿಯನ್ ಯುಎಸ್ ಡಾಲರ್ ವ್ಯವಹಾರ ಮಾಡಿ ದಾಖಲೆ ಬರೆದಿದೆ.

ಅಲಿಬಾಬಾದ ವಾರ್ಷಿಕ 'ಸಿಂಗಲ್ ಡೇ' ಫೆಸ್ಟಿವಲ್ ಭಾರೀ ಯಶಸ್ಸು ಗಳಿಸಿದ್ದು, ಮೊದಲ ಗಂಟೆಯಲ್ಲೇ ಸುಮಾರು 9.92 ಬಿಲಿಯನ್ ಯುಎಸ್ ಡಾಲರ್ (69 ಬಿಲಿಯನ್ ಚೀನಿ ಯುವಾನ್) ವ್ಯವಹಾರ ದಾಖಲಿಸಿದೆ.

ಕಳೆದ ವರ್ಷದ ಸಿಂಗಲ್ ಡೇ ಫೆಸ್ಟಿವಲ್‌ನಲ್ಲಿ ಅಲಿಬಾಬಾ ಮೊದಲ ಗಂಟೆಗೆ 57 ಬಿಲಿಯನ್ ಚೀನಿ ಯುವಾನ್ ವಹಿವಾಟು ನಡೆಸಿತ್ತು. ಅಲಿಬಾಬಾದ ಸಿಂಗಲ್ ಡೇ ಫೆಸ್ಟಿವಲ್ ವಿಶ್ವದಲ್ಲೇ ಅತ್ಯಂತ ದೊಡ್ಡ ಶಾಪಿಂಗ್ ಸೇಲ್ ಫೆಸ್ಟಿವಲ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಕಳೆದ ವರ್ಷದ ಫೆಸ್ಟಿವಲ್‌ನಲ್ಲಿ ಅಲಿಬಾಬಾ ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 24.15 ಬಿಲಿಯನ್ ಯುಎಸ್ ಡಾಲರ್ (168 ಬಿಲಿಯನ್ ಚೀನಿ ಯುವಾನ್) ವಹಿವಾಟು ನಡೆಸಿ ವಿಶ್ವ ದಾಖಲೆ ನಿರ್ಮಿಸಿತ್ತು.

ಅಲಿಬಾಬಾ ಸಿಂಗಲ್ ಡೇ ಫೆಸ್ಟಿವಲ್‌ನಲ್ಲಿ ವಿಶ್ವದ ಸುಮಾರು 1,80,000 ಬ್ರ್ಯಾಂಡ್ ಕಂಪನಿಗಳು ಭಾಗವಹಿಸಿದ್ದು, ಈಗಾಗಲೇ 20 ಬಿಲಿಯನ್ ಯುಎಸ್ ಡಾಲರ್ ವಹಿವಾಟು ನಡೆದಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.