ಇಸ್ಲಾಮಾಬಾದ್(ಜೂ.17): ಆರ್ಥಿಕವಾಗಿ ದಿವಾಳಿ ಅಂಚಿಗೆ ಬಂದು ತಲುಪಿರುವ ಪಾಕಿಸ್ತಾನ ಈಗೇನಿದ್ದರೂ ಪರಾವಲಂಬಿ. ದೇಶ ಮುನ್ನಡೆಸಲು ಅನ್ಯ ದೇಶಗಳ, ವಿವಿಧ ವಿದೇಶಿ ಬ್ಯಾಂಕ್‌ಗಳನ್ನು ನಂಬಿ ಕುಳತಿರುವ ಪಾಕ್, ಆರ್ಥಿಕ ನೆರವಿಗಾಗಿ ಬಾಯ್ತೆರೆದು ಕುಳಿತಿದೆ.

ಈಗಾಗಲೇ ಸೌದಿ ಅರೇಬಿಯಾ, ಯುಎಇ ಸೇರಿದಂತೆ ಹಲವು ರಾಷ್ಟ್ರಗಳು ಪಾಕ್‌ಗೆ ಆರ್ಥಿಕ ಸಹಾಯ ನೀಡಿವೆ. ಚೀನಾ ಕೂಡ ಕೆಲವು ಶರತ್ತುಗಳೊಂದಿಗೆ ಆರ್ಥಿಕ ಸಹಾಯಕ್ಕೆ ಮುಂದಾಗಿದೆ. ಈ ಮಧ್ಯೆ ಏಶಿಯನ್ ಡೆವಲಪಮೆಂಟ್ ಬ್ಯಾಂಕ್(ಎಡಿಬಿ) ಕೂಡ ಪಾಕ್‌ಗೆ ಹಣದ ಸಹಾಯ ಮಾಡಲು ಚಿಂತಿಸುತ್ತಿದೆ.

ಆದರೆ ಸಹಾಯಕ್ಕಾಗಿ ಹಪಹಪಿಸುತ್ತಿರುವ ಪಾಕ್ ಸರ್ಕಾರ, ಎಡಿಬಿ ಬ್ಯಾಂಕ್ ತಮಗೆ 3.4 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ನೀಡಲಿದೆ ಎಂದು ಘೋಷಿಸಿ ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ತಾನು ಈ ಕುರಿತು ಕೇವಲ ಚಿಂತಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ಎಡಿಬಿ ಬ್ಯಾಂಕ್ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ 3.4 ಬಿಲಿಯನ್ ಯುಎಸ್ ಡಾಲರ್ ನೆರವು ಘೋಷಿಸಲಿದೆ ಎಂದು ಪಾಕ್ ಸಚಿವ ಮುಕ್ದಮ್ ಭಕ್ತಿಯಾರ್ ಹೇಳಿಕೆ ನೀಡಿದ್ದಾರೆ.

ಆದರೆ ಇದನ್ನು ನಿರಾಕರಿಸಿರುವ ಎಡಿಬಿ ಬ್ಯಾಂಕ್, ನೆರವು ನೀಡಿರುವ ಕುರಿತು ಈಗಲೇ ಅಂತಿಮ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಇದಕ್ಕೂ ಮೊದಲೇ ಹೇಳಿಕೆ ನೀಡುವ ಮೂಲಕ ಪಾಕ್ ಸಚಿವ ಮುಕ್ದಮ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.