ನಟಿ ಮಾಳವಿಕಾ ಅವಿನಾಶ್ ಆಧಾರ್ ಕಾರ್ಡ್ ದುರ್ಬಳಕೆ; ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡ ನಟಿ
ಆಧಾರ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.ಇದೀಗ ಸ್ಯಾಂಡಲ್ ವುಡ್ ನಟಿ ಮಾಳವಿಕಾ ಅವಿನಾಶ ಅವರ ಆಧಾರ್ ಕಾರ್ಡ್ ದುರ್ಬಳಕೆಯಾಗಿದ್ದು, ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Business Desk:ಇತ್ತೀಚೆಗಷ್ಟೇ 81.5 ಕೋಟಿ ಭಾರತೀಯರ ಆಧಾರ್ ಕಾರ್ಡ್ ನಲ್ಲಿನ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರಿಸೆಕ್ಯುರಿಟಿ ವರದಿ ಮಾಡಿತ್ತು. ಇದು ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಅನುಮಾನ ಹುಟ್ಟಿಸಿತ್ತು. ಈ ನಡುವೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಕೂಡ ದೊಡ್ಡ ಪ್ರಮಾಣದಲ್ಲಿ ವರದಿಯಾಗುತ್ತಿರೋದು ಆತಂಕ ಹೆಚ್ಚಿಸಿವೆ. ಸ್ಯಾಂಡಲ್ ವುಡ್ ನಟಿ ಮಾಳವಿಕಾ ಅವಿನಾಶ್ ಕೂಡ ತಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಧಾರ್ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ನನ್ನ ಫೋಟೋ ಹೊಂದಿರುವ ಆಧಾರ್ ಕಾರ್ಡ್ ಅನ್ನು ಹೇಗೆ ಬೇರೆಯವರು ಬಳಸಲು ಸಾಧ್ಯ ಎಂಬ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ. ನಿಮ್ಮ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸೋದಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ (ಟಿಆರ್ ಎಐ) ಸಂದೇಶ ಬಂದ ಬಳಿಕವಷ್ಟೇ ನನ್ನ ಆಧಾರ್ ಕಾರ್ಡ್ ದುರ್ಬಳಕೆಯಾಗಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ಮಾಳವಿಕಾ ಫೆಸ್ ಬುಕ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಮಾಳವಿಕಾ ಅವರಿಗೆ TRAIಯಿಂದ ಮೊಬೈಲ್ ಸೇವೆ ಸ್ಥಗಿತಗೊಳಿಸೋದಾಗಿ ಸಂದೇಶ ಬಂದಿತ್ತು. ಅದರಲ್ಲಿ ಹೆಚ್ಚಿನ ಮಾಹಿತಿ ನಂಬರ್ 9ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಹೀಗಾಗಿ ಅವರು ತಕ್ಷಣ ನಂಬರ್ 9ಗೆ ಕರೆ ಮಾಡಿದ್ದಾರೆ. ಆಗ ಅವರಿಗೆ ಪಶ್ಚಿಮ ಮುಂಬೈಯ ಒಂದು ಸ್ಥಳದಲ್ಲಿ ಅವರ ಆಧಾರ್ ಕಾರ್ಡ್ ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸಲಾಗಿದ್ದು, ಆ ಸಿಮ್ ನಿಂದ ಅನೇಕರಿಗೆ ಕಿರುಕುಳ ನೀಡುವ ಹಾಗೂ ಕೆಟ್ಟ ಪದ ಬಳಕೆ ಸಂದೇಶಗಳನ್ನು ಕಳುಹಿಸಲಾಗಿರೋದು ತಿಳಿಯುತ್ತದೆ. ಈ ಬಗ್ಗೆ TRAIಗೆ ದೂರುಗಳು ಬಂದ ಕಾರಣ ಮಾಳವಿಕಾ ಅವರು ಬಳಸುತ್ತಿರುವ ಮೊಬೈಲ್ ಸಂಖ್ಯೆ ಸೇವೆಯನ್ನು ಕೂಡ ಸ್ಥಗಿತಗೊಳಿಸುತ್ತಿರೋದಾಗಿ ಅವರಿಗೆ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಈ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಮಾಳವಿಕಾ ಅವರು ಪ್ರಕರಣ ದಾಖಲಾಗಿರುವ ಮುಂಬೈ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಗೆ ಕರೆ ಮಾಡುತ್ತಾರೆ. ಆಗ ಅವರು ಪ್ರಕರಣದ ಸಂಪೂರ್ಣ ಮಾಹಿತಿ ನೀಡುತ್ತಾರೆ. ಅಲ್ಲದೆ, ವಿಡಿಯೋ ಕರೆ ಮಾಡಿ ಮಾಳವಿಕಾ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿ ಅವರ ಹೆಸರಿನಲ್ಲಿ ಪಡೆದಿರುವ ಅನಧಿಕೃತ ಸಿಮ್ ಕಾರ್ಡ್ ರದ್ದುಗೊಳಿಸುವಂತೆ ಮನವಿ ಮಾಡಿರುವ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ.
ಮಾಳವಿಕಾ ಅವಿನಾಶ್ ಆಧಾರ್ ಕಾರ್ಡ್ ಅನ್ನು ಏರ್ ಪೋರ್ಟ್, ಹೋಟೆಲ್ ಸೇರಿದಂತೆ ಎಲ್ಲ ಕಡೆಯೂ ಬಳಸಿದ್ದೇನೆ. ಇನ್ನು ಸಿನಿಮಾ ಒಪ್ಪಂದದ ಸಮಯದಲ್ಲಿ ಕೂಡ ಆಧಾರ್ ಕಾರ್ಡ್ ಬಳಸಿರೋದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಎಲ್ಲಿ, ಹೇಗೆ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆ ಎಂಬುದು ತಿಳಿದಿಲ್ಲ ಎಂದಿದ್ದಾರೆ.
81 ಕೋಟಿ ಭಾರತೀಯರ ಖಾಸಗಿ ಡೇಟಾ ಸೋರಿಕೆ; ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಮತ್ತೆಅನುಮಾನ!
ಆಧಾರ್ ದುರ್ಬಳಕೆ ಬಗ್ಗೆ ತಿಳಿಯೋದು ಹೇಗೆ?
ಯುಐಡಿಎಐ ಅಧಿಕೃತ ವೆಬ್ ಸೈಟ್ ನಲ್ಲಿ ಆಧಾರ್ ಅಥೆಂಟಿಕೇಷನ್ ಹಿಸ್ಟರಿ ಎಂಬ ಟೂಲ್ ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದು.
ಹಂತ 1: ಯುಐಡಿಎಐ ಅಧಿಕೃತ ವೆಬ್ ಸೈಟ್ uidai.gov.in.ಭೇಟಿ ನೀಡಿ.
ಹಂತ 2: ‘My Aadhaar’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ವೆಬ್ ಸೈಟ್ ತೆರೆದುಕೊಂಡ ತಕ್ಷಣ ಎಡ ಬದಿಯಲ್ಲಿ ಮೇಲ್ಭಾಗದಲ್ಲಿದೆ. ಈ ಆಯ್ಕೆ ಕ್ಲಿಕ್ ಮಾಡಿದ ತಕ್ಷಣ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
ಹಂತ 3: ಆಧಾರ್ ಸೇವಾ ವಿಭಾಗದಲ್ಲಿ ಈಗ ‘Aadhaar Authentication History’ ಭೇಟಿ ನೀಡಿ. ಈಗ ಹೊಸ ವೆಬ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ನಿಮ್ಮ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ಬಳಸಿಕೊಂಡು ಲಾಗಿನ್ ಆಗಿ. ಆ ಬಳಿಕ send OTP ಮೇಲೆ ಕ್ಲಿಕ್ ಮಾಡಿ.
ಹಂತ 5: ಪರಿಶೀಲನೆಗೆ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. ಆ ಬಳಿಕ ‘Proceed’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ಆಧಾರ್ ಕಾರ್ಡ್ ಎಲ್ಲ ಮಾಹಿತಿಗಳು ಹಾಗೂ ಈ ಹಿಂದಿನ ದೃಢೀಕರಣ ಮನವಿಗಳು ಪರದೆ ಮೇಲೆ ಕಾಣಿಸುತ್ತವೆ.
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆ ಯಾರಾದರೂ ಬಳಸಿದ್ದರೆ ನೀವು ಆ ಬಗ್ಗೆ ಯುಐಡಿಎಐಗೆ ಮಾಹಿತಿ ನೀಡಬಹುದು. ಯುಐಡಿಎಐ ಟೋಲ್ ಫ್ರೀ ನಂಬರ್ 1947 ಅಥವಾ help@uidai.gov.in ಮೂಲಕ ಯುಎಐಡಿಎ ಸಂಪರ್ಕಿಸಿ ಮಾಹಿತಿ ಪಡೆಯಬಹುದು.