7th Pay Commission:ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್; ಡಿಎ, ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆ ಸಾಧ್ಯತೆ
ಕೇಂದ್ರ ಸರ್ಕಾರಿ ನೌಕರರಿಗೆ ಮಾ.31ರಂದು ಡಿಎ, ಡಿಆರ್ ಹಾಗೂ ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆಯಾಗುವ ನಿರೀಕ್ಷೆಯಿದೆ. ತುಟ್ಟಿ ಭತ್ಯೆ ಶೇ.4ರಷ್ಟು ಏರಿಕೆಯಾಗಿ ಶೇ.42ಕ್ಕೆ ತಲುಪುವ ಸಾಧ್ಯತೆಯಿದೆ. ಹಾಗೆಯೇ ನಿರೀಕ್ಷಿತ ಪ್ರಮಾಣದಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆಯಾದ್ರೆ ಕನಿಷ್ಠ ವೇತನ 18,000ರೂ.ನಿಂದ 26,000 ರೂ.ಗೆ ಹೆಚ್ಚಲಿದೆ.
ನವದೆಹಲಿ (ಮಾ.24): ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಕನಸು ಈ ತಿಂಗಳ ಅಂತ್ಯದಲ್ಲಿ ನನಸಾಗುವ ಸಾಧ್ಯತೆಯಿದೆ. ನಿರೀಕ್ಷಿತ ರೀತಿಯಲ್ಲೇ ತುಟ್ಟಿ ಭತ್ಯೆ (ಡಿಎ) ಹೆಚ್ಚಳವಾಗಲಿದೆ. ಹಾಗೆಯೇ ಡಿಯರ್ ನೆಸ್ ರಿಲೀಫ್ (ಡಿಆರ್) ಕೂಡ ಏರಿಕೆಯಾಗಲಿದೆ. ಇವೆರಡರ ಜೊತೆಗೆ ಅತ್ಯಂತ ಮಹತ್ವದ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ನಿರೀಕ್ಷಿತ ಪ್ರಮಾಣದಲ್ಲೇ ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆಯಾದ್ರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18,000ರೂ.ನಿಂದ 26,000 ರೂ.ಗೆ ಏರಿಕೆಯಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇನ್ನು ತುಟ್ಟಿ ಭತ್ಯೆಯಲ್ಲಿ ಕೂಡ ಶೇ.4ರಷ್ಟು ಏರಿಕೆಯಾಗಿ ಶೇ.42ಕ್ಕೆ ತಲುಪುವ ಸಾಧ್ಯತೆಯಿದೆ. ಈ ಎಲ್ಲ ಏರಿಕೆಗಳನ್ನು ಕೇಂದ್ರ ಸರ್ಕಾರ ಮಾ.31ರಂದು ಪ್ರಕಟಿಸುವ ಸಾಧ್ಯತೆಯಿದೆ. ಈ ಪರಿಷ್ಕೃತ ಏರಿಕೆ 2023ರ ಜನವರಿ 1ರಿಂದಲೇ ಅನ್ವಯವಾಗಲಿದೆ. ಈ ಏರಿಕೆಯಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಕಳೆದ ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರ ನೌಕರರ ಡಿಎಯನ್ನು ಶೇ.4ರಷ್ಟು ಹೆಚ್ಚಳ ಮಾಡಿತ್ತು. ಹೀಗಾಗಿ ಶೇ.34ರಷ್ಟಿದ್ದ ಡಿಎ ಶೇ.38ಕ್ಕೆ ಏರಿಕೆಯಾಗಿತ್ತು.
ಹಣದುಬ್ಬರ ಹೆಚ್ಚಳ ಹಾಗೂ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸಿ ಡಿಎ ಹಾಗೂ ಡಿಆರ್ ಹೆಚ್ಚಳ ಮಾಡಲಾಗುತ್ತದೆ. ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಮಾನದಂಡವಾಗಿದ್ದು,ಅದರ ಆಧಾರದಲ್ಲೇ ಪರಿಷ್ಕರಿಸಲಾಗುತ್ತದೆ. ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್) ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ.
ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ನೋಟುಗಳು ಏಕೆ ಸಿಗುತ್ತಿಲ್ಲ? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ
ಡಿಎ ಲೆಕ್ಕಚಾರ ಹೀಗೆ
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು.ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳು-115.76)/115.76)x100.
ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ =(ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.
ಈ ಸೂತ್ರ ಬಳಸಿ ಲೆಕ್ಕಾಚಾರ ಹಾಕಿದರೆ ಡಿಎ ಎಷ್ಟು ಶೇಕಡಾವಾರು ಏರಿಕೆಯಾಗಬೇಕು ಎಂಬುದು ಸಿಗುತ್ತದೆ. ಈ ಸೂತ್ರದಲ್ಲಿ CPI-IW ಅಂದರೆ ಕೈಗಾರಿಕಾ ಕಾರ್ಮಿಕರ ಬೆಲೆ ಸೂಚ್ಯಂಕ. ಇದು ಕಳೆದ 12 ತಿಂಗಳ ಸರಾಸರಿ ಬೆಲೆ ಏರಿಕೆ ಮಾಹಿತಿ ಒದಗಿಸುತ್ತದೆ. ಪ್ರಸ್ತುತ ಕಳೆದ 12 ತಿಂಗಳ ಸರಾಸರಿ ಸಿಪಿಐ-ಐಡಬ್ಲ್ಯು 372.2 ಇದೆ. ಹೀಗಾಗಿ ಮೇಲಿನ ಸೂತ್ರ ಬಳಸಿ ಲೆಕ್ಕ ಹಾಕಿದ್ರೆ ಡಿಎ ಶೇ.42.37 ಆಗುತ್ತದೆ. ಸರ್ಕಾರ ಡಿಎ ಅನ್ನು ಶೇ.42ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ.
ಏಳನೇ ವೇತನ ಆಯೋಗ: ಸರ್ಕಾರಿ ಉದ್ಯೋಗಿಗಳ ಕನಿಷ್ಠ ವೇತನದಲ್ಲಿ ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ
ಫಿಟ್ಮೆಂಟ್ ಫ್ಯಾಕ್ಟರ್
ಪ್ರಸ್ತುತ ಫಿಟ್ಮೆಂಟ್ ಫ್ಯಾಕ್ಟರ್ ಶೇ. 2.57ರಷ್ಟಿದೆ. ಆರನೇ ವೇತನ ಆಯೋಗದಲ್ಲಿ ಇದು ಶೇ.1.86ರಷ್ಟಿತ್ತು. ವರದಿಗಳ ಪ್ರಕಾರ ನೌಕರರು ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಶೇ.3.68ಕ್ಕೆ ಏರಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ. ಹಾಗೇನಾದ್ರೂ ಆದರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18,000ರೂ.ನಿಂದ 26,000 ರೂ.ಗೆ ಏರಿಕೆಯಾಗಲಿದೆ.