Asianet Suvarna News Asianet Suvarna News

ಕರ್ನಾಟಕದಲ್ಲಿ 6 ಕಂಪನಿಗಳಿಂದ 620 ಕೋಟಿ ರೂ.ಹೂಡಿಕೆ: ಸಚಿವ ಪ್ರಿಯಾಂಕ್‌ ಖರ್ಗೆ

ನಾವು ನೆರೆಯ ರಾಜ್ಯದ ಜೊತೆ ಸ್ಪರ್ಧೆ ಮಾಡದೇ ಚೀನಾ ಮತ್ತಿತರ ದೇಶಗಳ ಜೊತೆ ಸ್ಪರ್ಧಿಸುವ ಗುರಿ ಹೊಂದಿದ್ದೇವೆ. ಆರು ಕಂಪನಿಗಳು ಸುಮಾರು 620 ಕೋಟಿ ರು. ಬಂಡವಾಳ ಹೂಡಲು ಮುಂದೆ ಬಂದಿವೆ. ಇನ್ನೊಂದು ವರ್ಷದಲ್ಲಿ ರಾಜ್ಯಕ್ಕೆ ಬಯೋ ಎಂಜಿನಿಯರಿಂಗ್, ಬಯೋ ಫೌಂಡ್ರಿಗಳು ಬರಲಿವೆ. ಮುಂದಿನ ಎರಡು ವರ್ಷದಲ್ಲಿ ರಾಜ್ಯವನ್ನು ‘ಅನ್ವೇಷಣೆ ರಾಜ್ಯ’ವನ್ನಾಗಿ ಮಾಡುವ ವಿಶ್ವಾಸವಿದೆ ಎಂದ ಸಚಿವ ಪ್ರಿಯಾಂಕ್‌ ಖರ್ಗೆ 

620 Crore Investment from 6 Companies in Karnataka says Minister Priyank Kharge grg
Author
First Published Jun 26, 2024, 11:16 AM IST

ಬೆಂಗಳೂರು(ಜೂ.26):  ರಾಜ್ಯದ ಐಟಿ, ಬಿಟಿ ಕ್ಷೇತ್ರಕ್ಕೆ ಬಂಡವಾಳ ಆಕರ್ಷಿಸಲು ಇತ್ತೀಚೆಗೆ ಅಮೆರಿಕ, ಬ್ರಿಟನ್‌, ಫ್ರಾನ್ಸ್‌, ಸ್ವಿಜರ್ಲೆಂಡ್‌, ಜರ್ಮನಿ ದೇಶಗಳಲ್ಲಿ ನಡೆಸಿದ ರೋಡ್‌ ಶೋ, ವಿವಿಧ ಸಮಾವೇಶಗಳಲ್ಲಿ ಭಾಗಿಯಾದ ಪರಿಣಾಮ ಆರು ಕಂಪನಿಗಳಿಂದ ಸುಮಾರು 620 ಕೋಟಿ ರು. ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಐಟಿ-ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ನಿಯೋಗ, ವಿವಿಧ ದೇಶಕ್ಕೆ ಭೇಟಿ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದ ಪರಿಣಾಮ ಕೆಲವು ಕಂಪನಿಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದು ಅರ್ಜಿ ಸಲ್ಲಿಸಿವೆ. ಕೆಲವು ಆಸಕ್ತಿ ತೋರಿಸಿದ್ದು ರಾಜ್ಯಕ್ಕೆ ಭೇಟಿ ನೀಡುವುದಾಗಿ ತಿಳಿಸಿವೆ. ಈ ಕಂಪನಿಗಳು ಸಲ್ಲಿಸುವ ಅರ್ಜಿಯನ್ನು ರಾಜ್ಯ ಉನ್ನತಾಧಿಕಾರ ಸಮಿತಿ ಪರಿಶೀಲಿಸಿ ನಿರ್ಧರಿಸಲಿವೆ ಎಂದರು.

ನಂದಿನಿ ಪ್ಯಾಕೆಟ್‌ಗೆ 50 ಮಿ.ಲೀ ಹಾಲು ಹೆಚ್ಚಿಸಿ 2 ರೂ. ಸೇರ್ಪಡೆ ಮಾಡಿದ್ದೇವೆ, ದರ ಹೆಚ್ಚಿಸಿಲ್ಲ ಸಿಎಂ ಸಿದ್ದರಾಮಯ್ಯ

ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾತನಾಡಿ, ಅಮೆರಿಕದ ಸ್ಯಾನ್‌ಡಿಯಾಗೋದಲ್ಲಿ ನಡೆದ ‘ಬಯೋ-ಯುಎಸ್‌ ಸಮಾವೇಶ’ದಲ್ಲಿ ಭಾಗವಹಿಸಿ ಖ್ಯಾತ ಸೆಮಿ ಕಂಡಕ್ಟರ್‌ ತಯಾರಿಕಾ ಕಂಪನಿ, ಮೈಕ್ರೋಚಿಪ್‌ ತಯಾರಿಕಾ ಕಂಪನಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿತ್ತು. ಸ್ಟ್ಯಾನ್‌ಫೋರ್ಡ್‌ ಬಯೋ ಡಿಸೈನ್‌ ಬೆಂಗಳೂರಿನಲ್ಲಿ ತಮ್ಮಚಟುವಟಿಕೆ ವಿಸ್ತರಿಸಲು ಬಯಸಿದ್ದು, ಶೀಘ್ರದಲ್ಲಿ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿದೆ ಎಂದು ಹೇಳಿದರು.

100 ಸ್ಟಾರ್ಟ್‌ಅಪ್‌ಗೆ ಬೆಂಬಲ:

‘ಲಂಡನ್‌ ಟೆಕ್‌ ವೀಕ್‌’ನಲ್ಲಿ ಸ್ಟಾರ್ಟ್‌ ಅಪ್‌ ಜಿನೋಮ್‌ ಸಂಸ್ಥಾಪಕ ಜಿ.ಎಫ್. ಗೌಥಿಯರ್‌ ಅವರ ಜತೆ ಚರ್ಚಿಸಲಾಗಿದೆ. ಈ ಕಂಪನಿಯು ರಾಜ್ಯದಲ್ಲಿ ‘ಹೈಪರ್‌ ಗ್ರೋಥ್‌ ಆಕ್ಸಿಲರೇಷನ್‌’ ಯೋಜನೆಯಡಿ 100 ಸ್ಟಾರ್ಟ್‌ ಅಪ್‌ಗಳನ್ನು ಬೆಂಬಲಿಸಲು ಮುಂದೆ ಬಂದಿದೆ. ಜರ್ಮನಿಯ ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌ ಮತ್ತು ಹೆವಿ ಇಂಡಸ್ಟ್ರೀಸ್‌ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವ ವಿಶ್ವಾಸವಿದೆ ಎಂದು ಶರತ್‌ ಬಚ್ಚೇಗೌಡ ತಿಳಿಸಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ನಾವು ನೆರೆಯ ರಾಜ್ಯದ ಜೊತೆ ಸ್ಪರ್ಧೆ ಮಾಡದೇ ಚೀನಾ ಮತ್ತಿತರ ದೇಶಗಳ ಜೊತೆ ಸ್ಪರ್ಧಿಸುವ ಗುರಿ ಹೊಂದಿದ್ದೇವೆ. ಆರು ಕಂಪನಿಗಳು ಸುಮಾರು 620 ಕೋಟಿ ರು. ಬಂಡವಾಳ ಹೂಡಲು ಮುಂದೆ ಬಂದಿವೆ. ಇನ್ನೊಂದು ವರ್ಷದಲ್ಲಿ ರಾಜ್ಯಕ್ಕೆ ಬಯೋ ಎಂಜಿನಿಯರಿಂಗ್, ಬಯೋ ಫೌಂಡ್ರಿಗಳು ಬರಲಿವೆ. ಮುಂದಿನ ಎರಡು ವರ್ಷದಲ್ಲಿ ರಾಜ್ಯವನ್ನು ‘ಅನ್ವೇಷಣೆ ರಾಜ್ಯ’ವನ್ನಾಗಿ ಮಾಡುವ ವಿಶ್ವಾಸವಿದೆ ಎಂದರು. ಐಟಿ- ಬಿಟಿ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios