Asianet Suvarna News Asianet Suvarna News

ನಿರ್ಮಲಾ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ!

2024ರ ಲೋಕಸಭಾ ಚುನಾವಣೆಗಿನ ಮುನ್ನ ಕಡೆಯ ಪೂರ್ಣ ಪ್ರಮಾಣದ ಬಜೆಟ್‌ ಅನ್ನು  ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡ್ತಾ ಇದ್ದು, ಅವರ ಬಜೆಟ್ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.

heavy expectations on nirmala sitharaman Union budget akb
Author
First Published Feb 1, 2023, 10:12 AM IST

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗ, ಜಾಗತಿಕ ಆರ್ಥಿಕ ಹಿಂಜರಿಕೆ ಭೀತಿಯಲ್ಲಿ ಉದ್ಯೋಗ ಕಡಿತ, ಉತ್ಪಾದನಾ ವಲಯಗಳಿಗೆ ಚೇತರಿಕೆ ನೀಡುವ ಅನಿವಾರ್ಯತೆ, ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಇನ್ನಷ್ಟುನೆರವು, ರಫ್ತಿಗೆ ಮತ್ತಷ್ಟುಆದ್ಯತೆ, ಇದೆಲ್ಲರ ನಡುವೆ 2024ರ ಲೋಕಸಭಾ ಚುನಾವಣೆಗಿನ ಮುನ್ನ ಕಡೆಯ ಪೂರ್ಣ ಪ್ರಮಾಣದ ಬಜೆಟ್‌. ಹೀಗೆ ಹಲವು ಅಂಶಗಳನ್ನು ಗಮದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿರುವ ಕೇಂದ್ರ ಬಜೆಟ್‌ ಇಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ಇಂದು ಬೆಳಗ್ಗೆ 11 ಗಂಟೆಗೆ ಮಂಡನೆ ಮಾಡಲಿರುವ ಈ ಬಜೆಟ್‌, ಆದಾಯ ತೆರಿಗೆ ಸ್ತರ ಏರಿಕೆ, ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಇನ್ನಷ್ಟುಜನರ ಸೇರ್ಪಡೆ, ಉತ್ಪಾದನಾ ವಲಯಕ್ಕೆ ಇನ್ನಷ್ಟುಚೇತರಿಕೆ, ಬಡ್ಡಿದರ, ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗದ ಜನರ ಓಲೈಕೆ, ಬಡವರ ಪರ ಇನ್ನಷ್ಟುಯೋಜನೆ, ಸ್ಥಳೀಯವಾಗಿ ಉತ್ಪಾದಿಸುವ ವಸ್ತುಗಳಿಗೆ ಪ್ರೋತ್ಸಾಹಕಗಳನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಉಳ್ಳವರು ಮತ್ತು ಬಡವರ ನಡುವಿನ ಅಂತರ ಕೂಡಾ ಹೆಚ್ಚುಗುತ್ತಿದ್ದು ಈ ಬಗ್ಗೆಯೂ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಆದರೆ ಇದರ ಜೊತೆಗೆ ವಿತ್ತೀಯ ಶಿಸ್ತು ಪಾಲಿಸುವ ಅನಿವಾರ್ಯತೆಯೂ ಇರುವ ಕಾರಣ ಅದನ್ನೂ ಸರ್ಕಾರ ತನ್ನ ಗಮನದಲ್ಲಿಟ್ಟುಕೊಂಡಿರಲಿದೆ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಜೊತೆಗೆ ಈ ವರ್ಷ 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ರಾಜ್ಯಗಳಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ?

2014ರ ಬಳಿಕ ಕೇಂದ್ರ ಸರ್ಕಾರ ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಸಿಲ್ಲ. 2019ರಲ್ಲಿ 50 ಸಾವಿರ ರು. ಸ್ಟಾಂಡರ್ಡ್‌ ಡಿಡಕ್ಷನ್‌ ತರಲಾಗಿತ್ತು. ಅದರ ಮಿತಿಯೂ ಏರಿಕೆಯಾಗಿಲ್ಲ. ಮಧ್ಯಮವರ್ಗದ ಮೇಲಿನ ಹೊರೆ ತಗ್ಗಿಸಲು ಈ ಎರಡರ ಮಿತಿ ಏರಿಸುವ ಸಾಧ್ಯತೆ ಇದೆ. ಆದರೆ ಈ ಮಿತಿ ಹೆಚ್ಚಳ ಮಾಡಿದರೆ ಅದರ ನಷ್ಟ ಭರಿಸಲು ಸರ್ಕಾರ ಇತರೆ ವರ್ಗ ಅಥವಾ ಇತರೆ ಆದಾಯ ಮೂಲಗಳ ಮೇಲೆ ಸೆಸ್‌ ವಿಧಿಸುವ ಸಂಭವ ನಿಚ್ಚಳ ಎನ್ನಲಾಗಿದೆ.

Union Budget 2023: ದೇಶದ ಚಿತ್ತ ಕೇಂದ್ರ ಬಜೆಟ್‌ನತ್ತ: ಎಲೆಕ್ಷನ್‌ ರಾಜ್ಯಗಳಿಗೆ ಜಾಕ್‌ ಪಾಟ್‌?

ಸೆಕ್ಷನ್‌ 80ಸಿ ಅಡಿ ವಿನಾಯ್ತಿ ಹೆಚ್ಚಳ

ಜೀವ ವಿಮೆ, ನಿಶ್ಚಿತ ಠೇವಣಿ, ಬಾಂಡ್‌, ವಸತಿ ಹಾಗೂ ಪಿಪಿಎಫ್‌ನಂತಹ ಸಾಧನಗಳಲ್ಲಿ ಹಣ ವಿನಿಯೋಗಿಸಿ ಸೆಕ್ಷನ್‌ 80ಸಿ ಅಡಿ ಪಡೆಯಬಹುದಾದ ಆದಾಯ ತೆರಿಗೆ ವಿನಾಯಿತಿ ಮೊತ್ತ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸದ್ಯ ವಾರ್ಷಿಕ 1.50 ಲಕ್ಷ ರು.ವರೆಗೆ ಸೆಕ್ಷನ್‌ 80ಸಿ ಅಡಿ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಸೆಕ್ಷನ್‌ 80ಸಿ ಅಡಿ ಬರುವ ಎಲ್ಲ ಹೂಡಿಕೆಗೂ ವಿನಾಯಿತಿ ಪ್ರಕಟಿಸುವ ಬದಲು ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿಗೆ ಮಾತ್ರ ಮಿತಿ ಹೆಚ್ಚಳ ಮಾಡುವ ಪ್ರಸ್ತಾವವೂ ಇದೆ. ಷೇರುಪೇಟೆಯಲ್ಲಿ ಹಣ ತೊಡಗಿಸುವ ಮಧ್ಯಮವರ್ಗದವರ ಅನುಕೂಲಕ್ಕಾಗಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ನಿಯಮಗಳನ್ನು ಸರಳಗೊಳಿಸುವ ಸಾಧ್ಯತೆಯೂ ಇದೆ.

ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ

ದೇಶದ ನಿರುದ್ಯೋಗ ಪ್ರಮಾಣವು ಕಳೆದ ಡಿಸೆಂಬರ್‌ನಲ್ಲಿ 16 ತಿಂಗಳಲ್ಲೇ ಗರಿಷ್ಠವಾದ ಶೇ.8.3ಕ್ಕೆ ತಲುಪಿದೆ. ಹೀಗಾಗಿ ಜನಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ದೇಶದ ಜನರಿಗೆ ಉದ್ಯೋಗ ನೀಡುವ ಗುರುತರ ಹೊಣೆ ಸರ್ಕಾರದ ಮೇಲಿದೆ. ಆದಕಾರಣ ಗ್ರಾಮೀಣ ಉದ್ಯೋಗ ಖಾತ್ರಿ, ಗ್ರಾಮೀನ ರಸ್ತೆ ಮೂಲಸೌಕರ್ಯ, ಅಗ್ಗದ ದರ ಮನೆಗಳ ನಿರ್ಮಾಣಕ್ಕೆ ಸರ್ಕಾರ ಹೆಚ್ಚಿನ ಅನುದಾನ ಘೋಷಿಸುವ ಸಾಧ್ಯತೆ ಇದೆ.

ಉತ್ಪಾದನಾ ವಲಯಕ್ಕೆ ನೆರವು

ಜಾಗತಿಕ ಪೂರೈಕೆ ಜಾಲದಲ್ಲಿ ಚೀನಾಕ್ಕೆ ಪರ್ಯಾಯ ಸ್ಥಾನ ಪಡೆಯಲು ಯೋಜಿಸುತ್ತಿರುವ ಸರ್ಕಾರ, ಉತ್ಪಾದನಾ ವಲಯಕ್ಕೆ ಇನ್ನಷ್ಟುಹೆಚ್ಚಿನ ಪ್ರೋತ್ಸಾಹ ಘೋಷಿಸುವ ಸಾಧ್ಯತೆ ಇದೆ. ಬಜೆಟ್‌ನಲ್ಲಿ ಉತ್ಪಾದಕತೆ ಆಧರಿತ ಪ್ರೋತ್ಸಾಹಕ ಯೋಜನೆಗಳನ್ನು ಇನ್ನಷ್ಟುವಲಯಕ್ಕೆ ವಿಸ್ತರಿಸುವ ನಿರೀಕ್ಷೆ ಇದೆ. ಜೊತೆಗೆ ಉತ್ಪಾದಕತೆ ಜೊತೆಗೆ ಉದ್ಯೋಗ ಸೃಷ್ಟಿಯ ಅಂಶವನ್ನೂ ಪ್ರೋತ್ಸಾಹಕದ ವ್ಯಾಪ್ತಿಗೆ ಸೇರಿಸುವ ನಿರೀಕ್ಷೆಗಳಿವೆ.

ಕೇಂದ್ರ ಬಜೆಟ್ ಆರ್ಥಿಕತೆಗೆ ಬಲ ನಿರೀಕ್ಷೆ: ಸಿಗಲಿದೆಯಾ ಬೂಸ್ಟರ್?

ಆರೋಗ್ಯ ಕ್ಷೇತ್ರಕ್ಕೆ ಟಾನಿಕ್

ದೇಶದ ಜೀವನಾಡಿಯಾದ ಕೃಷಿ ವಲಯಕ್ಕೆ ಹೊಸ ದೃಷ್ಟಿಕೋನವನ್ನು ನೀಡುವ ಅಂಶಗಳನ್ನು ಬಜೆಟ್‌ ಒಳಗೊಂಡಿರಲಿದೆ ಎನ್ನಲಾಗಿದೆ. ಕೃಷಿಕರು, ಕೃಷಿ ಕಾರ್ಮಿಕರು, ಕೃಷಿ ಉತ್ಪನ್ನ ಆಧರಿತ ವಲಯಕ್ಕೆ ಸರ್ಕಾರ ಹೊಸ ಯೋಜನೆ ಘೋಷಿಸುವ ಸಾಧ್ಯತೆ ಇದೆ. ಸಾಲದ ನೆರವನ್ನು ಹೆಚ್ಚಿಸುವ ಸಾಧ್ಯತೆ ನಿಚ್ಚಲವಾಗಿದೆ. ಜೊತೆಗೆ ಕೋವಿಡ್‌ ಸಂದರ್ಭದಲ್ಲಿ ದೇಶ ಎದುರಿಸಿದ ಸಂಕಷ್ಟಮುಂದೆ ಎದುರಾಗದಂತೆ ತಡೆಯಲು ದೇಶದ ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವ ಸಾಧ್ಯತೆ ಇದೆ.

ಮೂಲಸೌಕರ್ಯಕ್ಕೆ ಬಂಪರ್‌

ಮೂಲಸೌಕರ್ಯ ವಲಯಕ್ಕೆ ಈ ಬಾರಿಯೂ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ ಘೋಷಿಸುವ ನಿರೀಕ್ಷೆ ಇದೆ. ಈ ವಲಯದಲ್ಲಿ ಬೆಳವಣಿಗೆ ಉದ್ಯೊಗ ಸೃಷ್ಟಿಯ ಜೊತೆಗೆ ಆರ್ಥಿಕ ಪ್ರಗತಿಗೂ ಕಾರಣವಾಗುವ ಶಕ್ತಿಯನ್ನು ಹೊಂದಿರುವ ಕಾರಣ, ಹಲವು ಹೊಸ ಯೋಜನೆಗಳನ್ನು ಘೋಷಿಸಿ ಅವುಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಈ ವರ್ಷ ಚುನಾವಣೆ ಎದುರಿಸುವ 9 ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ. ದೇಶದ ಶೇ.40ರಷ್ಟುಜನಸಂಖ್ಯೆ ನಗರ ಪ್ರದೇಶದಲ್ಲಿ ಇರುವ ಕಾರಣ ನಗರ ಮೂಲಸೌಕರ್ಯಕ್ಕೆ ಆಧ್ಯತೆ ಸಿಗಲಿದೆ.

ಶಿಕ್ಷಣಕ್ಕೆ ಇನ್ನಷ್ಟು ಕೊಡುಗೆ

ಶಿಕ್ಷಣ ವಲಯವನ್ನು ಆಮೂಲಾಗ್ರವಾಗಿ ಬದಲಾಯಿಸಲು ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಘೋಷಿಸಿದೆ. ಆದರೆ ಈ ವಲಯಕ್ಕೆ ನೀಡುತ್ತಿರುವ ಅನುದಾನ ಸಾಲದು ಎಂಬುದು ತಜ್ಞರ ವಾದ. ಹೀಗಾಗಿ ಈ ಬಜೆಟ್‌ನಲ್ಲಿ ಶಿಕ್ಷಣ ವಲಯದಕ್ಕೆ ನೀಡುವ ಅನುದಾನವನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸುವ ನಿರೀಕ್ಷೆಯನ್ನು ಶಿಕ್ಷಣ ತಜ್ಞರು ಇರಿಸಿಕೊಂಡಿದ್ದಾರೆ.

ರೈಲ್ವೆಯಲ್ಲಿ ಹಲವು ಸುಧಾರಣೆ

ಪ್ರತ್ಯೇಕ ರೈಲ್ವೆ ಬಜೆಟ್‌ ಮಂಡನೆ ಕೈಬಿಟ್ಟ ಬಳಿಕ, ಈ ವಲಯಕ್ಕೆ ಸಂಬಂಧಿಸಿದ ಜನಪ್ರಿಯ ಘೋಷಣೆಗಳು ಬಹುತೇಕ ಮರೆಯಾಗಿವೆ. ಹೀಗಾಗಿ ದೂರದೃಷ್ಟಿಯುಳ್ಳ ಯೋಜನೆಗಳಿಗೆ ಮಾತ್ರವೇ ಅನುದಾನ ನೀಡಲಾಗುತ್ತಿದೆ. ಈ ಬಾರಿಯೂ ಅದು ಮುಂದುವರೆಯುವ ಸಾಧ್ಯತೆ ಇದೆ. ದೇಶದಲ್ಲಿ ಹೊಸ ಕ್ರಾಂತಿ ಮೂಡಿಸಿರುವ ವಂದೇ ಭಾರತ್‌ ರೈಲಿನ ಇನ್ನಷ್ಟುಮಾದರಿಗಳನ್ನು ಪರಿಚಯಿಸುವ ಕುರಿತು, ದೇಶಾದ್ಯಂತ ಇನ್ನಷ್ಟುವಂದೇ ಭಾರತ್‌ ರೈಲುಗಳನ್ನು ಓಡಿಸುವ ಕುರಿತು, ರೈಲ್ವೆ ಪ್ರಯಾಣಕರಿಗೆ ಒಂದಿಷ್ಟುಹೊಸ ಸೌಲಭ್ಯಗಳನ್ನು ನೀಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಸ್ಟಾರ್ಟಪ್‌ಗೆ ಕೊಡುಗೆ

ದೇಶದಲ್ಲಿ ಸ್ಟಾರ್ಟಪ್‌ ವಾತಾವರಣವನ್ನು ಮತ್ತಷ್ಟುಬಲಯುತಗೊಳಿಸಲು ಹಾಗೂ ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಯೋಜನೆ ಪ್ರಕಟಿಸುವ ನಿರೀಕ್ಷೆ ಇದೆ. ಖಾಸಗಿ ವಿಮಾನ, ಹೆಲಿಕಾಪ್ಟರ್‌, ದುಬಾರಿ ದರ ಎಲೆಕ್ಟ್ರಾನಿಕ್‌ ವಸ್ತುಗಳು, ಆಭರಣಗಳ ಮೇಲಿನ ಸುಂಕ ಹೆಚ್ಚಳ ಮಾಡುವ ಮೂಲಕ ಈ ವಸ್ತುಗಳ ಸ್ಥಳೀಯ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ಮಾರುಕಟ್ಟೆದರಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುತ್ತಿರುವ ತೈಲ ಕಂಪನಿಗಳಿಗೆ ನೆರವು, ಕಳೆದ ಬಜೆಟ್‌ನಲ್ಲಿ ಕ್ರಿಪ್ಟೋ ಆಸ್ತಿಗೆ ಹೇರಲಾಗಿದ್ದ ತೆರಿಗೆ ಪ್ರಮಾಣ ಕಡಿತ, ಚಿನ್ನದ ಮೇಲಿನ ಆಮದರು ತೆರಿಗೆಯನ್ನು ಶೆ.10ಕ್ಕ ಇಳಿಸುವ ಮೂಲಕ ಕಳ್ಳಸಾಗಣೆಗೆ ಕಡಿವಾಣ ಹಾಕಬೇಕು ಎಂಬ ನಿರೀಕ್ಷೆಯನ್ನೂ ವಿವಿಧ ವಲಯಗಳು ಹೊಂದಿವೆ.

Follow Us:
Download App:
  • android
  • ios