ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆ ಮುಕ್ತಾಯ, ಜಂಟಿ ಅಧಿವೇಶನ ಕುರಿತು ನಾಳೆ ರಾಷ್ಟ್ರಪತಿ ಭಾಷಣ
ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನವದೆಹಲಿ (ಜ.30): ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಸುಗಮ ಕಲಾಪಕ್ಕಾಗಿ ಸಂಪ್ರದಾಯದಂತೆ ಇಂದು ಸಂಸತ್ ಭವನ ಸಂಕೀರ್ಣದಲ್ಲಿ ಸರ್ವ ಪಕ್ಷ ನಾಯಕರ ಸಭೆ ನಡೆಯಿತು.
ಸಭೆ ಬಳಿಕ ಮಾಧ್ಯಮಗಳೊಂದು ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ಮುರ್ಮು ಅವರ ಭಾಷಣದೊಂದಿಗೆ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಎಂದರು. 2023 - 24ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಬಳಿಕ ರಾಜ್ಯಸಭೆಯಲ್ಲಿ ಬಜೆಟ್ ಮಂಡನೆಯಾಗಲಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದ ಬಳಿಕ ದೆಹಲಿ ವಿವಿಯ ಮೊಘಲ್ ಗಾರ್ಡನ್ ಹೆಸರೂ ಬದಲು!
ಇನ್ನೂ ಗುರುವಾರದಿಂದ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯ ಮೇಲೆ ಚರ್ಚೆಯನ್ನು ಆರಂಭವಾಗಲಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಉತ್ತರಿಸಲಿದ್ದಾರೆ. ವಂದನಾ ನಿರ್ಣಯ ಹಾಗೂ ಪ್ರಧಾನಿ ಅವರ ಉತ್ತರ ಸೇರಿದಂತೆ ಅಧಿವೇಶನದ ಮೊದಲ ಭಾಗದ ಕಾರ್ಯ ಕಲಾಪಗಳು ಫೆ 13 ರ ವರೆಗು ನಡೆಯಲಿವೆ. ಮಧ್ಯ ವಿರಾಮದ ಬಳಿಕ ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 13 ರಂದು ಪ್ರಾರಂಭವಾಗಿ ಏಪ್ರಿಲ್ 6 ರವರೆಗೆ ನಡೆಯಲಿದೆ.
ವಿವಿಧ ಸಚಿವಾಲಯಗಳಿಗೆ ಅನುದಾನಕ್ಕಾಗಿ ಬೇಡಿಕೆಯ ಕುರಿತು ಚರ್ಚೆ ನಡೆಯಲಿದ್ದು, ಕೇಂದ್ರ ಬಜೆಟ್ ಅನ್ನು ಅಂಗೀಕರಿಸುವ ಕಾರ್ಯಕಲಾಪಗಳು ನಡೆಯಲಿವೆ. ಅಲ್ಲದೇ ಇತರ ಶಾಸಕಾಂಗದ ವ್ಯವಹಾರಗಳು, ವಿಧೇಯಕಗಳ ಮೇಲಿನ ಚರ್ಚೆ ಸಹ ಸರ್ಕಾರವು ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಸರ್ವ ಪಕ್ಷಗಳ ಸಭೆಯಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಪಿಯೂಷ್ ಗೋಯಲ್, ಅರ್ಜುನ, ರಾಮ್ ಮೇಘವಾಲ್ ಮತ್ತು ವಿ ಮುರಳೀಧರನ್ ಸೇರಿದಂತೆ 27 ಪಕ್ಷದ 37 ನಾಯಕರು ಉಪಸ್ಥಿತರಿದ್ದರು.
ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಮುಂದಿನ ವಾರ ವಿಚಾರಣೆ
ಡಿಎಂಕೆ ನಾಯಕ ಟಿ.ಆರ್ ಬಾಲು, ಟಿಎಂಸಿ ನಾಯಕರು, ಸುದೀಪ್ ಬಂಡೋಪಾಧ್ಯಾಯ, ಟಿಆರ್‌ಎಸ್ ನಿಂದ ಕೆ ಕೇಶವ ರಾವ್, ವೈಎಸ್‌ಆರ್ ಕಾಂಗ್ರೆಸ್‌ನಿಂದ ವಿಜಯಸಾಯಿ ರೆಡ್ಡಿ, ನ್ಯಾಷನಲ್ ಕಾನ್ಫರೆನ್ಸ್‌ನಿಂದ ಫಾರೂಕ್ ಅಬ್ದುಲ್ಲಾ, ಆರ್‌ಜೆಡಿಯಿಂದ ಪ್ರೊಫೆಸರ್ ಮನೋಜ್ ಝಾ, ಜೆಡಿಯುನ ರಾಮ್ ನಾಥ್ ಠಾಕೂರ್ ಸೇರಿದಂತೆ ಶಿವಸೇನೆ (ಉದ್ಧವ್ ಠಾಕ್ರೆ) ಅವರ ಪರವಾಗಿ ಪ್ರಿಯಾಂಕಾ ಚತುರ್ವೇದಿ ಪ್ರತಿನಿಧಿಸಿದ್ದರು. ಕಾಂಗ್ರೆಸ್ ನಾಯಕರು ಸಭೆಗೆ ಗೈರುಹಾಜರಾಗಿದ್ದರು, ಮೂಲಗಳ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಇಬ್ಬರೂ ಶ್ರೀನಗರದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ಕಾರಣ ಸಭೆಗೆ ಬಂದಿಲ್ಲ ಎಂದು ಹೇಳಲಾಗಿದೆ.