ಬಂದಿದೆ ತಂತಾನೆ ಬ್ಯಾಲೆನ್ಸ್ ಮಾಡುವ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್..!
ಲೈಗರ್‌ನಿಂದ ಮೊದಲ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ, 2023ರ ಆಟೋ ಎಕ್ಸ್‌ಪೋದಲ್ಲಿ ಪರಿಚಯ, ಲೈಗರ್ ಎಕ್ಸ್, ಎಕ್ಸ್ ಪ್ಲಸ್ ಎಂಬ ಮಾದರಿ, ರಿವರ್ಸ್ ಗೇರ್, ಜಿಪಿಎಸ್, 4ಜಿ ಸೌಲಭ್ಯ, ಎಕ್ಸ್ ಬೆಲೆ 1.7 ಲಕ್ಷ, ಎಕ್ಸ್ ಪ್ಲಸ್ ಬೆಲೆ 1.9 ಲಕ್ಷ ರು.
ನವದೆಹಲಿ(ಜ.12): ಮುಂಬೈ ಮೂಲದ ಲೈಗರ್ ಕಂಪನಿ ಇದೇ ಮೊದಲ ಬಾರಿಗೆ ತಾನಾಗಿಯೇ ಸಮತೋಲನ ಕಾಯ್ದುಕೊಳ್ಳಬಲ್ಲ (ಮೊದಲ ಸೆಲ್ಫ್ ಬ್ಯಾಲೆನ್ಸಿಂಗ್) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ.
ಈ ಸ್ಕೂಟರ್ ನಿಲ್ಲಿಸಬೇಕಾದರೆ ಕಾಲು ಕೆಳಗಿಡಬೇಕಾದ ಪ್ರಮೇಯವಿಲ್ಲ. ಈ ಸ್ಕೂಟರ್ ಈ ವರ್ಷದಲ್ಲೇ ಮಾರುಕಟ್ಟೆಗೆ ಕಾಲಿಡಲಿದೆ. 2023ರ ಆಟೋ ಎಕ್ಸ್‌ಪೋ ವೇದಿಕೆಯಲ್ಲಿ ‘ಕಾಲುಗಳಿಗೆ ವಿಶ್ರಾಂತಿ’ ಎಂಬ ಹೇಳಿಕೆಯೊಂದಿಗೆ ಈ ಸ್ಕೂಟರ್‌ನ್ನು ಅನಾವರಣ ಮಾಡಿರುವ ಕಂಪನಿ ತಾನಾಗಿಯೇ ಸಮತೋಲನ ಸಾಧಿಸಬಲ್ಲ ತಂತ್ರಜ್ಞಾನವನ್ನು ಈ ಸ್ಕೂಟರ್‌ನಲ್ಲಿ ಅಳವಡಿಸಿದೆ. ಲೈಗರ್ ಎಕ್ಸ್ ಮತ್ತು ಲೈಗರ್ ಎಕ್ಸ್ ಪ್ಲಸ್ ಎಂಬ ಹೆಸರಿನ 2 ಆವೃತ್ತಿಗಳಲ್ಲಿ ಸ್ಕೂಟರ್‌ಗಳನ್ನು ಪರಿಚಯಿಸಲಾಗಿದೆ.
ಹಳೆಯ ಸ್ಕೂಟರ್ ಹೊಂದಿದವರು ಏಥರ್ 450 ಎಕ್ಸ್ ಸ್ಕೂಟರ್‌ಗೆ ಹೀಗೆ ಅಪ್‌ಗ್ರೇಡ್ ಮಾಡಿಕೊಳ್ಳಿ..!
ಸ್ಕೂಟರ್ ವಿಶೇಷತೆ
ಸಿಗ್ನಲ್‌ನಲ್ಲಿ ನಿಲ್ಲಿಸಿದಾಗ ಚಾಲಕ ಕಾಲನ್ನು ಕೆಳಗೆ ಇಡದೇ ಇದ್ದರೂ ಬೈಕ್ ನೇರವಾಗಿ ನಿಂತಿಕೊಂಡಿರುತ್ತದೆ. ಕೆಳಗೆ ಬೀಳದು. ನಿಗದಿತ ಮಟ್ಟಕ್ಕಿಂತ ವೇಗ ಕೆಳಗಿಳಿಯುತ್ತಲೇ ಸ್ಕೂಟರ್ ಸ್ವಯಂ ಬ್ಯಾಲೆನ್ಸಿಂಗ್ ಮೋಡ್‌ಗೆ ಬರುತ್ತದೆ. ಇದರ ಗರಿಷ್ಠ ವೇಗ 65 ಕಿ.ಮೀ. ಎಕ್ಸ್ ಮಾದರಿ 3 ಗಂಟೆಗಳ ಕಾಲ ಚಾರ್ಜ್ ಮಾಡಿದರೆ 60 ಕಿ.ಮೀ. ದೂರ ಸಾಗಲಿದೆ. ಎಕ್ಸ್ ಪ್ಲಸ್ ಮಾದರಿ ಕಳಚಲಾಗದ ಮಾದರಿಯ ಬ್ಯಾಟರಿ ಹೊಂದಿದ್ದು, 100 ಕಿ.ಮೀ. ದೂರ ಸಾಗಲಿದೆ. ಇದರಲ್ಲಿ ರಿವರ್ಸ್ ಗೇರ್ ಸೌಲಭ್ಯವಿದೆ. 4ಜಿ ಕನೆಕ್ಟಿವಿಟಿ, ಜಿಪಿಎಸ್, ಕಾಲ್ ಮತ್ತು ಎಸ್‌ಎಮ್‌ಎಸ್ ಅಲರ್ಟ್‌ಗಳನ್ನು ಸಹ ನೀಡಲಾಗಿದೆ. ಎಕ್ಸ್ ಮಾದರಿಗೆ 1.7 ಲಕ್ಷ ರು. ಹಾಗೂ ಎಕ್ಸ್ ಪ್ಲಸ್ ಮಾದರಿ 1.9 ಲಕ್ಷ ರು. ಆಗಿದೆ.