ನೀವು ಹೊಸತಾಗಿ ಉದ್ಯೋಗಕ್ಕೆ ಸೇರಿ ಓಡಾಡಲು ಬೈಕ್‌ ಬೇಕಾಗಿರಬಹುದು. ನಿಮ್ಮ ಮಕ್ಕಳು ಕಾಲೇಜಿಗೆ ಹೋಗೋಕೆ ಬೈಕು ಬೇಕು ಅನ್ನುತ್ತಾ ಇರಬಹುದು. ಅಥವಾ ನಿಮ್ಮ ಬೈಕೇ ತುಂಬಾ ಹಳತಾಗಿ, ಓಡಿಸಲು ಸಾಧ್ಯವಾಗದೆ ಹೊಸ ಬೈಕ್‌ ಖರೀದಿಸಲು ಮುಂದಾಗಿರಬಹುದು. ಎನಿವೇ, ಪೆಟ್ರೋಲ್‌ ಬೈಕ್‌ಗಳ ಖರೀದಿ, ಮೇಂಟೇನೆನ್ಸ್‌, ಫ್ಯೂಚರ್‌- ಇದೆಲ್ಲವನ್ನೂ ನೋಡಿದರೆ, ಇ-ಬೈಕ್‌ಗಳೇ ವಾಸಿ ಅಂತ ತಜ್ಞರು ಹೇಳ್ತಾರೆ. ಯಾಕೆ ನೀವು ಇ-ಬೈಕನ್ನೇ ತಗೋಬೇಕು ಅನ್ನುವುದಕ್ಕೆ ಕಾರಣಗಳು ಇಲ್ಲಿವೆ.

ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್!

ಮೈಲೇಜ್‌ ಹೆಚ್ಚು

ಭಾರತೀಯ ಗ್ರಾಹಕರಿಗೆ ಮೈಲೇಜ್‌ ಬಗ್ಗೆ ಮೊದಲ ಕಣ್ಣು. ಯಾವ ಪೆಟ್ರೋಲ್‌ ಬೈಕ್‌ ಕೂಡ ಲೀಟರ್‌ಗೆ 60 ಕಿಲೋಮೀಟರ್‌ಗಿಂತ ಅಧಿಕ ಮೈಲೇಜ್‌ ಕೊಡುವುದಿಲ್ಲ. ಒಂದು ಲೀಟರ್‌ ಪೆಟ್ರೋಲ್‌ಗೆ ಈಗ 80 ರೂ. ಇದೆ. ಆದರೆ ಇ-ಬೈಕ್‌ಗಳು ಒಮ್ಮೆ ರಿಚಾರ್ಜ್‌ ಆಗಲು ಸುಮಾರು 3.5 ಯುನಿಟ್‌ ಕರೆಂಟ್‌ ಬಳಸುತ್ತವೆ. ಒಂದು ಯುನಿಟ್‌ ವಿದ್ಯುತ್‌ನ ಬೆಲೆ 10 ರೂಪಾಯಿಗಿಂತ ಹೆಚ್ಚಿಲ್ಲ. ಈಗ ಒಮ್ಮೆ ಚಾರ್ಜ್‌ ಮಾಡಿದರೆ 50 ಕಿಲೋಮೀಟರ್‌ನಿಂದ 150 ಕಿಲೋಮೀಟರ್‌ ದೂರದವರೆಗೆ ಓಡುವ ಇಬೈಕ್‌ಗಳು ಬಂದಿವೆ. ಅಂದರೆ ಅಷ್ಟು ದೂರಕ್ಕೆ ನಿಮಗೆ ಆಗುವ ಖರ್ಚು 35 ರೂಪಾಯಿಗಿಂತ ಹೆಚ್ಚಲ್ಲ. ಯಾವುದು ಅಗ್ಗವೋ ಹೋಲಿಸಿ ನೋಡಿ.

ಜೀರೋ ಎಮಿಷನ್‌

ಇ ಬೈಕ್‌ಗಳು ಪರಿಸರಕ್ಕೆ ಹಾನಿಕರವಾದ ಕಾರ್ಬನ್‌ ಮತ್ತು ನೈಟ್ರಸ್‌ ಆಕ್ಟೈಡ್‌ ಹೊಗೆಯನ್ನು ಉಗುಳುವುದೇ ಇಲ್ಲ. ಇದರಿಂದಾಗಿ ಪರಿಸರ ಮಾಲಿನ್ಯದ ಪ್ರಶ್ನೆಯೂ ಇಲ್ಲ. ನೀವು ಆರು ತಿಂಗಳಿಗೊಮ್ಮೆ ಎಮಿಷನ್‌ ಟೆಸ್ಟ್‌ ಮಾಡಿಸಬೇಕಾದ ಪ್ರಮೇಯವೂ ಇಲ್ಲ. ಈಗಾಗಲೇ ನಮ್ಮ ನಗರದ ಪರಿಸರ ವಾಹನಗಳ ಹೊಗೆಯಿಂದ ಸಾಕಷ್ಟು ಹಾಳಾಗಿದೆ. ಅದನ್ನು ಸರಿಪಡಿಸಲು ನಿಮ್ಮ ಕೊಡುಗೆ ಹೀಗೆ ನೀಡಿ.

ಹೆಲ್ಮೆಟ್ ಕಿರಿಕಿರಿಗೆ ಸಿಕ್ತು ಮುಕ್ತಿ; ಟೆಕ್ಕಿ ಕಂಡು ಹಿಡಿದ್ರು ಕೂಲರ್ ಹೆಲ್ಮೆಟ್!

ಚಾರ್ಜ್‌ ಮಾಡಿಕೊಳ್ಳುವುದು ಸುಲಭ

ಈಗ ದೊಡ್ಡ ನಗರಗಳಲ್ಲಿ ಇ- ಚಾರ್ಜಿಂಗ್‌ ಯುನಿಟ್‌ಗಳು ಸ್ಥಾಪನೆಗೊಳ್ಳುತ್ತಿವೆ. ಚಾರ್ಜ್‌ ಮಾಡುವುದು ಸುಲಭ. ಮನೆಯಲ್ಲಿ ಅಥವಾ ಆಫೀಸ್‌ನಲ್ಲಿ ಚಾರ್ಜ್‌ಗೆ ಹಾಕಿ ಇಡಬಹುದು. ನಿಮ್ಮ ಕೆಲಸ ಮುಗಿಸಿ ಬರುವಷ್ಟರಲ್ಲಿ ಚಾರ್ಜ್‌ ಆಗಿರುತ್ತದೆ. ಪೆಟ್ರೋಲ್‌ ಬಂಕ್‌ಗೆ ಭೇಟಿ ಕೊಡುವ ಪ್ರಮೇಯವೇ ಇಲ್ಲ. ಪೆಟ್ರೋಲ್‌ ಬೆಲೆ ಏರಿಕೆಯ ಬಿಸಿಯೂ ನಿಮ್ಮನ್ನು ತಟ್ಟುವುದಿಲ್ಲ.

ಮೆಂಟೇನೆನ್ಸ್‌ ಸುಲಭ

ಪೆಟ್ರೋಲ್‌ ವಾಹನಕ್ಕೆ ಹೋಲಿಸಿದರೆ ಇ ಬೈಕ್‌ ಹಗುರ. ಇದರಲ್ಲಿ ಚಲಿಸುವ ಪಾರ್ಟ್‌ಗಳು ಕಡಿಮೆ. ಪೆಟ್ರೋಲ್‌ ಬೈಕ್‌ನಲ್ಲಿ ಮೂವಿಂಗ್‌ ಪಾರ್ಟ್‌ಗಳು ಸುಮಾರು 2000ದಷ್ಟಿದ್ದರೆ ಇ ಬೈಕ್‌ನಲ್ಲಿ 20-25 ಇರಬಹುದು. ಹೀಗಾಗಿ ಪೆಟ್ರೋಲ್‌ ಬೈಕ್‌ಗಳಿಗಿಂತ ಇವುಗಳ ಮೆಂಟೇನೆನ್ಸ್‌ ಖರ್ಚು ಅರ್ಧದಷ್ಟು ಕಡಿಮೆ.  

ಟ್ಯಾಕ್ಸ್‌ ವಿನಾಯಿತಿ

ಇ-ವಾಹನಗಳಿಗೆ ಕಳೆದ ವರ್ಷ ಬಜೆಟ್‌ನಲ್ಲಿ ಕೇಂದ್ರ ಸರಕಾರ ಟ್ಯಾಕ್ಟ್ನಿಂದ ವಿನಾಯಿತಿ ನೀಡಿದೆ. ಸುಮಾರು 1.5 ಲಕ್ಷದಷ್ಟು ಬೆಲೆಯ ವಾಹನಗಳಿಗೆ ಯಾವುದೇ ತೆರಿಗೆ ಇಲ್ಲ. ಹಾಗೇ ಇವುಗಳಿಗೆ ಬಳಸುವ ಲಿಥಿಯಂ ಬ್ಯಾಟರಿಗಳಿಗೂ ಕಸ್ಟಮ್ಸ್‌ ಡ್ಯೂಟಿ ಇಳಿಸಲಾಗಿದೆ. ಒಟ್ಟಿನಲ್ಲಿ ಬೈಕಿನ ಬೆಲೆಯೇ ಸುಮಾರಷ್ಟು ಇಳಿದಿದೆ.

ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್‌ ರೈಡ್‌!

ಸರಕಾರದ ಪ್ರಯತ್ನಗಳು

ದೇಶದಲ್ಲಿ ಇನ್ನು ಐದು ವರ್ಷಗಳಲ್ಲಿ ಸುಮಾರು ಅರ್ಧದಷ್ಟು ವಾಹನಗಳು ಇಲೆಕ್ಟ್ರಿಕ್‌ ಆಗಿಬಿಡಬೇಕು ಎಂಬುದು ಸರಕಾರದ ಕನಸು. ಇದು ಸ್ವಲ್ಪ ಕಷ್ಟವೇ. ಆದರೆ ಆ ಕಡೆಗೆ ಪ್ರಯತ್ನಗಳಂತೂ ಆಗ್ತಾ ಇವೆ. ಎಲ್ಲ ಅಪಾರ್ಟ್‌ಮೆಂಟ್‌, ಮಾಲ್‌ಗಳ ಪಾರ್ಕಿಂಗ್‌ ಏರಿಯಾಗಳಲ್ಲಿ 20% ಜಾಗವನ್ನು ಇ-ಚಾರ್ಜಿಂಗ್‌ಗೆ ಇಡಬೇಕು ಅಂತ ಹೇಳಲಾಗಿದೆ. ಇನ್ನು ಮುಂದೆ ಪ್ರತಿಯೊಂದು ಏರಿಯಾದಲ್ಲೂ ಇ-ಚಾರ್ಜಿಂಗ್‌ ಯುನಿಟ್‌ಗಳು ಬರಲಿವೆ. ಎಲ್ಲ ಕಡೆ ಇ-ವಾಹನಗಳ ಉತ್ತೇಜನಕ್ಕೆ ಹೆಚ್ಚು ಹೆಚ್ಚು ಕ್ರಮ ತೆಗೆದುಕೊಳ್ಳುತ್ತೆ ಸರಕಾರ. ಪರಿಸರಕ್ಕೆ ಪೂರಕವಾದ ಈ ಅಭಿಯಾನದಲ್ಲಿ ನಾವು ಹಿಂದೆ ಬೀಳೋದು ಯಾಕೆ, ಅಲ್ವಾ?