Asianet Suvarna News Asianet Suvarna News

TVS iQube‌ Review: ಐಕ್ಯೂಬ್‌ ಎಂಬ ಸುತ್ತೂರು ಸುಂದರಿ: 75 km ಸುತ್ತಾಡಿಸಲಿಕ್ಕೆ ಸ್ಕೂಟರ್‌ ಸನ್ನದ್ಧ!

*ಎಪ್ಪತ್ತೈದು ಕಿಲೋಮೀಟರ್‌ ಸುತ್ತಾಡಿಸಲಿಕ್ಕೆ ಸ್ಕೂಟರ್‌ ಸನ್ನದ್ಧ
*ಐಕ್ಯೂಬ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತಷ್ಟು ಮಾಹಿತಿ
*ಇಕಾನಮಿ ಮತ್ತು ಪವರ್‌ ಎಂಬ ಎರಡು ಚಾಲನಾವಿಧಾನ

TVS first ever electric scooter in India iQube Review mnj
Author
Bengaluru, First Published Dec 21, 2021, 11:34 AM IST

Auto Desk: ರಾತ್ರಿ ಮಲಗುವ ಮುನ್ನ ಈ ಸ್ಕೂಟರಿಗೆ ಸಿಲುಕಿಸಿದ ವೈರನ್ನು ಮನೆಯ ಪ್ಲಗ್ಗಿಗೆ ಜೋಡಿಸಿ, ಸ್ವಿಚ್ಚೊತ್ತಿ ನಿದ್ದೆಹೋದರೆ ಬೆಳಗ್ಗೆ ಏಳುವ ಹೊತ್ತಿಗೆ, ನಿಮ್ಮನ್ನು ಎಪ್ಪತ್ತೈದು ಕಿಲೋಮೀಟರ್‌ ಸುತ್ತಾಡಿಸಲಿಕ್ಕೆ ಸ್ಕೂಟರ್‌ ಸನ್ನದ್ಧವಾಗಿರುತ್ತದೆ.ಈ ಒಂದು ಸಾಲು ಪೆಟ್ರೋಲ್‌ ಬೆಲೆ ಏರುತ್ತಿರುವ ದಿನಗಳಲ್ಲಿ ನಮ್ಮನ್ನು ಖಂಡಿತಾ ಆಕರ್ಷಿಸುತ್ತದೆ. ಪೆಟ್ರೋಲು ಹಾಕುವ ಅಗತ್ಯವಿಲ್ಲದ ಮೋಟಾರು ವಾಹನ ಬರಲಿ ಅಂತ ಎಲ್ಲರೂ ಆಶಿಸಿದವರೇ. ಈಗ ಆ ಕಾಲ ಬಂದಿದೆ. ಮಾರುಕಟ್ಟೆಯಲ್ಲಿ ಹಲವಾರು ಇಲೆಕ್ಟ್ರಿಕ್‌ ವಾಹನಗಳು (Electriv Vehicles) ದೊರೆಯುತ್ತವೆ. ಅವುಗಳ ಸಾಲಿಗೆ ಸೇರುವ ಮತ್ತೊಂದು ದ್ವಿಚಕ್ರವಾಹನ ಐಕ್ಯೂಬ್‌ (TVS iQube).

ಐಕ್ಯೂಬ್‌ ಹೇಗಿದೆ ಅಂತ ಕೇಳಿದರೆ ಒಂದೇ ಮಾತಲ್ಲಿ ಚೆನ್ನಾಗಿದೆ ಎಂದು ಹೇಳಿಬಿಡಬಹುದು. ಈಗ ಮಾರುಕಟ್ಟೆಯಲ್ಲಿರುವ ಇತರ ಸ್ಕೂಟರುಗಳಿಗಿಂತ ಇದೇನೂ ಭಿನ್ನವಾಗಿಲ್ಲ ಎನ್ನುವುದೇ ಇದರ ಹೆಗ್ಗಳಿಕೆ. ಸದ್ದು ಮಾಡದೇ, ಎಮಿಷನ್‌ ಇಲ್ಲದೇ ಸರಾಗವಾಗಿ ಓಡಾಡುವ ಐಕ್ಯೂಬ್‌ನಲ್ಲಿ ಸುತ್ತಾಡುವುದು ಸುಖದಾಯಕ. ಹಿತವಾದ ಸಂಗೀತದಂತೆ ಅದು ನಮ್ಮನ್ನು ಮುದಗೊಳಿಸುತ್ತದೆ. ಕಿರಿಕಿರಿಯಿಲ್ಲದ, ಯಾವುದೇ ತೊಂದರೆ ಕೊಡದ, ಬ್ಯಾಟರಿ ತುಂಬಿರುವ ತನಕ ತಕರಾರು ಮಾಡದ ಐ ಕ್ಯೂಬ್‌ ಹಿತವಾದ ಪ್ರಯಾಣದ ಸುಖವನ್ನು ನೀಡುತ್ತದೆ. ಈ ಸ್ಕೂಟರ್‌ ಬೆಲೆ ₹1,07,38

ಆರು ಸೆಕೆಂಡಿಗೆ 40 ಕಿಲೋಮೀಟರ್‌ ವೇಗ ತಲುಪಬಲ್ಲ ವಾಹನ!

ನಮಗೆ ಟೆಸ್ಟ್‌ ಡ್ರೈವಿಗೆ ಬಂದ ಐ ಕ್ಯೂಬ್‌ ಬಿಳಿಯ ಬಣ್ಣದ್ದು. ಕೀ ತಿರುವಿದರೆ ಬ್ಯಾಟರಿ ಪರ್ಸೆಂಟೇಜು, ಎಷ್ಟುಕಿಲೋಮೀಟರ್‌ ಪ್ರಯಾಣ ಮಾಡಬಹುದು ಎಂಬ ವಿವರಗಳೆಲ್ಲ ಕಾಣಿಸುತ್ತವೆ. ನೀವು ಐಕ್ಯೂಬ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತಷ್ಟು ಮಾಹಿತಿಗಳನ್ನು ಡಿಸ್‌ಪ್ಲೇ ಪ್ಯಾನೆಲ್ಲಿನಲ್ಲೇ ನೋಡಬಹುದು. ಇದರ ವಿಶೇಷ ಎಂದರೆ ಆರು ಸೆಕೆಂಡಿಗೆ 40 ಕಿಲೋಮೀಟರ್‌ ವೇಗ ತಲುಪಬಲ್ಲ ಈ ವಾಹನ, ಇದ್ದಕ್ಕಿದ್ದಂತೆ ಪೂರ್ತಿಯಾಗಿ ಆ್ಯಕ್ಸಲೇಟರ್‌ ತಿರುವಿದರೆ ಅಲ್ಲಾಡುವುದಿಲ್ಲ. ಬದಲಿಗೆ ಎಚ್ಚರಿಕೆ ನೀಡುತ್ತದೆ. ನಿಧಾನವಾಗಿ ಆರಂಭಿಸಿ ಎಂದು ಹೇಳುತ್ತದೆ. ಹಾಗೆಯೇ ಸ್ಟಾಂಡ್‌ ಹಾಕಿಕೊಂಡಿದ್ದರೆ ಇದು ಸ್ಟಾರ್ಟ್‌ ಆಗುವುದೇ ಇಲ್ಲ.

ನೂರಕ್ಕೆ ನೂರು ಚಾರ್ಜ್ ಆದಾಗ 75 ಕಿಲೋಮೀಟರ್‌ ಸುತ್ತಾಡಬಹುದು ಅಂತ ಹೇಳಿದರೂ, ಅದನ್ನು ಪೂರ್ತಿ ನಂಬುವ ಹಾಗಿಲ್ಲ. ನಮಗೆ ಟೆಸ್ಟ್‌ ಡ್ರೈವ್‌ ಮಾಡಿದಾಗ ಸಿಕ್ಕ ಮೈಲೇಜು ಐವತ್ತು ಅದರ ಮೇಲೆ ಐದು. ಕೊನೆಯ ಇಪ್ಪತ್ತು ಶೇಕಡಾ ಬ್ಯಾಟರಿ ಉಳಿದಾಗ ಭಯ ಶುರುವಾಗುತ್ತದೆ. ಆರೇಳು ಪರ್ಸೆಂಟ್‌ ಉಳಿದಿದ್ದರೆ ಗಾಡಿ ಸ್ಟಾರ್ಟ್‌ ಆಗುವುದಿಲ್ಲ. ಬ್ಯಾಟರಿ ಸೇವಿಂಗ್‌ ಮೋಡ್‌‌ (Battery Saving Mode) ಅನ್ನುವುದೇನೂ ಇದರಲ್ಲಿಲ್ಲ. ಬಾಟರಿ ಕಮ್ಮಿಯಿದ್ದಾಗ ಹೆಡ್‌ ಲೈಟ್‌ ಆಫ್‌ ಆಗಿ ಬ್ಯಾಟರಿ ಉಳಿಸುವ ವ್ಯವಸ್ಥೆಯನ್ನು ನೀಡಬಹುದಾಗಿತ್ತು.

ಇಕಾನಮಿ ಮತ್ತು ಪವರ್‌ ಎಂಬ ಎರಡು ಚಾಲನಾವಿಧಾನಗಳಿವೆ. ಸ್ಟಾರ್ಟರ್‌ ಬಟನ್‌ ಮತ್ತೊಮ್ಮೆ ಒತ್ತಿದರೆ ಪವರ್‌ ಮೋಡ್‌ ಆನ್‌ ಆಗುತ್ತದೆ. ಆಗ ಮೈಲೇಜು ಶೇಕಡಾ ಮೂವತ್ತರಷ್ಟು ಕಡಿಮೆ ಆಗುತ್ತದೆ. ದಾರಿಯಲ್ಲಿ ಬಾಟರಿ ಮುಗಿದು ನಿಂತರೆ ತಳ್ಳಿಕೊಂಡು ಹೋಗದೇ ವಿಧಿಯಿಲ್ಲ. ಯಾಕೆಂದರೆ ಮತ್ತೆ ಓಡಿಸಲಿಕ್ಕೆ ಬೇಕಾದಷ್ಟು ಶಕ್ತಿ ತುಂಬಿಕೊಳ್ಳಲು ಮೂರರಿಂದ ನಾಲ್ಕು ಗಂಟೆ ಚಾರ್ಜ್ ಮಾಡಬೇಕು. ನಮಗೆ ಸಿಕ್ಕ ಐಕ್ಯೂಬ್‌ ವೇಗ ಗಂಟೆಗೆ ಐವತ್ತು ದಾಟಲಿಲ್ಲ. ಅತ್ಯುತ್ತಮ ಶಾಕ್‌ ಅಬ್‌ಸಾರ್ಬರ್‌ ಇದೆ. ಬ್ರೇಕಿಂಗ್‌ ಸಿಸ್ಟಮ್‌ ಬಗ್ಗೆ ಅದೇ ಮಾತು ಹೇಳುವುದಕ್ಕೆ ಸಾಧ್ಯವಿಲ್ಲ. ಮಹಿಳೆಯರಿಗೆ, ಮಕ್ಕಳಿಗೆ ದಿನವೂ ಐವತ್ತು ಕಿಲೋಮೀಟರಿಗಿಂತ ಕಡಿಮೆ ಓಡಾಡುವವರಿಗೆ ಇದು ಸಕತ್‌ ವಾಹನ.

ಇದನ್ನೂ ಓದಿ:

1) Faulty Brake 23,600 ಕ್ಲಾಸಿಕ್ 350 ಬೈಕ್ ಹಿಂಪಡೆದ ರಾಯಲ್ ಎನ್‌ಫೀಲ್ಡ್!

2) Safety Alerts Navigation ಕೇಂದ್ರದಿಂದ ಚಾಲಕರಿಗೆ ಅಪಘಾತ, ಅಪಾಯ ಎಚ್ಚರಿಸುವ ಉಚಿತ ನ್ಯಾವಿಗೇಶನ್ ಆ್ಯಪ್ ಬಿಡುಗಡೆ!

3) Renewable resources ಪುನರ್‌ಬಳಕೆ ಇಂಧನ ಬಳಕೆ ಹೆಚ್ಚಿಸಿದ ಹೋಂಡಾ 2 ವ್ಹೀಲರ್ಸ್ ಇಂಡಿಯಾ

Follow Us:
Download App:
  • android
  • ios