ಎಲೆಕ್ಟ್ರಿಕ್ ಸ್ಕೂಟರ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಹೀರೋ ಅತಿ ಕಡಿಮೆ ಬೆಲೆಗೆ ನಿಮಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡ್ತಿದೆ. ಅದ್ರ ಬೆಲೆ ಏನು, ವಿಶೇಷ ಏನು? 

ಪೆಟ್ರೋಲ್ (Petrol) ಬೆಲೆ ಏರ್ತಾನೆ ಇದೆ. ಸ್ಕೂಟರ್, ಬೈಕ್ ಹೊಟ್ಟೆ ತುಂಬಿಸೋದು ಕಷ್ಟವಾಗಿದೆ. ಪೆಟ್ರೋಲ್ ಖರ್ಚು ಉಳಿಸೋಕೆ ಭಾರತೀಯರು ಎಲೆಕ್ಟ್ರಿಕ್ ವಾಹನದ ಕಡೆ ಮುಖ ಮಾಡ್ತಿದ್ದಾರೆ. ಭಾರತದಲ್ಲಿ ನಿರಂತರವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಬೇಡಿಕೆ ಹೆಚ್ಚಾಗ್ತಿದ್ದಂತೆ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡ್ತಿವೆ. ದರ ಹಾಗೂ ವೈಶಿಷ್ಟ್ಯದಲ್ಲಿ ಕಾಂಪಿಟೇಷನ್ ಶುರುವಾಗಿದೆ. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ವಾಹನಗಳನ್ನು ಜನರು ಇಷ್ಟಪಡ್ತಿದ್ದಾರೆ. ಹೀರೋ ಜನರ ಅನುಕೂಲಕ್ಕೆ ತಕ್ಕಂತೆ ವಿಡಾ ವಿಎಕ್ಸ್ 2 ಸ್ಕೂಟರ್ ಬಿಡುಗಡೆ ಮಾಡಿದೆ. ಅಗ್ಗದ ಬೆಲೆ ಈ ಸ್ಕೂಟರ್ ಗ್ರಾಹಕರಿಗೆ ಸಿಗ್ತಿದೆ. ನೀವು ವಿಡಾ ವಿಎಕ್ಸ್ 2 ಸ್ಕೂಟರನ್ನು ಕೇವಲ 44,099 ರೂಪಾಯಿಗಳಿಗೆ ಖರೀದಿಸಬಹುದು. ಸ್ಕೂಟರ್ ವಿಶೇಷತೆ ಏನು ಎಂಬ ವಿವರ ಇಲ್ಲಿದೆ.

ಹೀರೋ ವಿಡಾ (Hero Vida) ಬೇಸ್ ಮಾಡೆಲ್ VX2 ಗೋ ರೂಪಾಂತರವನ್ನು BaaS ( Battery as a Service) ಜೊತೆ ನೀವು 44,990 ರೂಪಾಯಿಗೆ ಮನೆಗೆ ತರಬಹುದು. ಬ್ಯಾಟರಿಯೊಂದಿಗೆ ಅದರ ಎಕ್ಸ್ ಶೋರೂಂ ಬೆಲೆ 85,000 ರೂಪಾಯಿ ಆಗಲಿದೆ. ಹೀರೋ ವಿಡಾ VX2 ಪ್ಲಸ್ ರೂಪಾಂತರದ ಬೆಲೆ BaaS ಜೊತೆಗೆ 58,000 ರೂಪಾಯಿಗೆ ನಿಮಗೆ ಸಿಗಲಿದೆ. ಅದೇ ಬ್ಯಾಟರಿಯೊಂದಿಗೆ ಖರೀದಿ ಮಾಡೋದಾದ್ರೆ ನೀವು 1 ಲಕ್ಷ ರೂಪಾಯಿ ಪಾವತಿಸಬೇಕು.

BaaS ಅಂದ್ರೆ ಏನು? : ಎಲೆಕ್ಟ್ರಿಕ್ ವಾಹನ (electric vehicle)ಗಳಲ್ಲಿ ಸೇವೆಯಾಗಿ ಬ್ಯಾಟರಿ ಆಯ್ಕೆ ಇದೆ. ಇದ್ರಲ್ಲಿ ನೀವು ಬ್ಯಾಟರಿ ಇರುವ ವಾಹನ ಖರೀದಿ ಮಾಡ್ಬೇಕಾಗಿಲ್ಲ. ಬರೀ ವಾಹನ ಖರೀದಿ ಮಾಡ್ಬಹುದು. ಬ್ಯಾಟರಿಯನ್ನು ನೀವು ಬಾಡಿಗೆ ರೂಪದಲ್ಲಿ ಪಡೆಯಬಹುದು. ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿಯನ್ನು ಬಾಡಿಗೆಗೆ ನೀಡಲಾಗುತ್ತದೆ. ಚಾರ್ಜ್ ಮಾಡಿದ ಬ್ಯಾಟರಿಯನ್ನು ನೀವು ಬಾಡಿಗೆ ಪಡೆಯಲು ಚಂದಾದಾರಿಕೆ ಪಡೆಯಬೇಕಾಗುತ್ತದೆ.

ಹೀರೋ ವಿಡಾ VX2 ನ ವಿನ್ಯಾಸ ಮತ್ತು ವೈಶಿಷ್ಟ್ಯತೆ : ವಿಡಾ VX2 ನ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಮೊದಲು EICMA ನಲ್ಲಿ ಪರಿಚಯಿಸಲಾದ ವಿಡಾ Z ಪರಿಕಲ್ಪನೆಯನ್ನು ಆಧರಿಸಿವೆ. ಬಜೆಟ್ ಸ್ನೇಹಿ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಡಾ V2 ಗೆ ಹೋಲಿಸಿದರೆ VX2 ಅಗ್ಗದ ಆವೃತ್ತಿಯಾಗಿದೆ.

ಇದು ಅನೇಕ ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಬ್ಯಾಟರಿ ಪ್ಯಾಕ್ ಹಗುರ ಮತ್ತು ಪರಿಣಾಮಕಾರಿಯಾಗಿದೆ. ಇದರ ಬಾಡಿ ವಿನ್ಯಾಸ ಸರಳವಾಗಿದ್ದು, ಆಕರ್ಷಕವಾಗಿದೆ. ಅಲ್ಲದೆ, ಇದರಲ್ಲಿ ಮಿನಿ TFT ಡಿಸ್ಪ್ಲೇ ಸಹ ನೀಡಲಾಗಿದೆ. ಇದು ಸ್ಕೂಟರ್ಗೆ ಸ್ಮಾರ್ಟ್ ಸ್ಪರ್ಶವನ್ನು ನೀಡುತ್ತದೆ.

ಹೀರೋ ವಿಡಾ VX2 ನ Go ರೂಪಾಂತರ 2.2 kWh ತೆಗೆಯಬಹುದಾದ ಬ್ಯಾಟರಿಯೊಂದಿಗೆ ಬರುತ್ತದೆ. ಇದು 92 ಕಿಮೀ ವ್ಯಾಪ್ತಿ ನೀಡುತ್ತದೆ. ಇದು ಐಡಿಸಿ (IDC) ಪ್ರಮಾಣೀಕರಿಸಲ್ಪಟ್ಟಿದೆ. VX2 ಪ್ಲಸ್ 3.4 kWh ನೊಂದಿಗೆ 142 ಕಿಮೀ ಕ್ರಮಿಸಬಲ್ಲದು. ಇದು ಕೂಡ IDC ಪ್ರಮಾಣೀಕೃತವಾಗಿದೆ. ಇದಲ್ಲದೆ, Vida VX2 ನ Go ರೂಪಾಂತರದ ಗರಿಷ್ಠ ವೇಗ ಗಂಟೆಗೆ 70 ಕಿಮೀ ಮತ್ತು VX2 ಪ್ಲಸ್ ರೂಪಾಂತರದ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಗಿದೆ. ಈ ಸ್ಕೂಟರ್ ಬ್ಯಾಟರಿ 62 ನಿಮಿಷದಲ್ಲಿ ಶೇಕಡಾ 80ರಷ್ಟು ಚಾರ್ಜ್ ಆಗುತ್ತೆ ಅಂತ ಕಂಪನಿ ಹೇಳಿದೆ.