ಎನ್‌ಫೀಲ್ಡ್‌ ಕಂಪನಿ ಜೆ ಸರಣಿಯ ಇಂಜಿನ್‌ ಅನ್ನು 350 ಸಿಸಿ ವಿಭಾಗಕ್ಕೆಂದೇ ಸಿದ್ಧಪಡಿಸಿ ಆಗಾಗ ಮಾರ್ಪಡಿಸುವುದಿದೆ. ಈಗಾಗಲೇ ಬಂದಿರುವ ಕ್ಲಾಸಿಕ್‌ 350 ಮತ್ತು ಮಿಟಿಯೋರ್‌ 350 ಈ ಜೆ ಸೀರೀಸ್‌ ಇಂಜಿನ್ನಿನ ಹಿರಿಯರು.

ರಾಯಲ್‌ ಎನ್‌ಫೀಲ್ಡ್‌ ಬೈಕಿನ ಗತ್ತಿಗೆ ಮರುಳಾದರೂ ಅದರ ಭಾರಕ್ಕೆ, ಎತ್ತರಕ್ಕೆ ಕೊಂಚ ಅಂಜಿ ಹಿಂದೆ ಸರಿದವರು ಬಹಳ ಮಂದಿ ಇದ್ದಾರೆ. ಎನ್‌ಫೀಲ್ಡ್‌ ಬೈಕು ಬೇಕು, ಆದರೆ ಸ್ವಲ್ಪ ಭಾರ ಕಡಿಮೆ ಇದ್ದು ಹೈಟು ಹೆಚ್ಚು ಕಮ್ಮಿ ಹೊಂದಿಕೆಯಾಗುವಂತಿದ್ದರೆ ಎಂದು ಆಸೆ ಪಡುತ್ತಿದ್ದವರ ಗಮನ ಸೆಳೆಯಲೆಂದೇ ಬೇರೆಲ್ಲಕ್ಕಿಂತ ಕಡಿಮೆ ಬೆಲೆಗೆ ರಾಯಲ್‌ ಎನ್‌ಫೀಲ್ಡ್‌ ಹೊರಬಿಟ್ಟಿರುವ ಮಾಸ್‌ ಹೀರೋ ಹೆಸರು ಹಂಟರ್‌ 350. ಈ ಬೈಕಿನ ಆರಂಭಿಕ ಬೆಲೆ ರು.1,49,990.(ಎಕ್ಸ್‌ ಶೋರೂಮ್‌)

ಎನ್‌ಫೀಲ್ಡ್‌ ಕಂಪನಿ ಜೆ ಸರಣಿಯ ಇಂಜಿನ್‌ ಅನ್ನು 350 ಸಿಸಿ ವಿಭಾಗಕ್ಕೆಂದೇ ಸಿದ್ಧಪಡಿಸಿ ಆಗಾಗ ಮಾರ್ಪಡಿಸುವುದಿದೆ. ಈಗಾಗಲೇ ಬಂದಿರುವ ಕ್ಲಾಸಿಕ್‌ 350 ಮತ್ತು ಮಿಟಿಯೋರ್‌ 350 ಈ ಜೆ ಸೀರೀಸ್‌ ಇಂಜಿನ್ನಿನ ಹಿರಿಯರು. ಹಂಟರ್‌ 350 ಅದೇ 350 ಸಿಸಿ ಇಂಜಿನ್ನಿನ ಸುಧಾರಿತ ರೂಪ. ತನ್ನ ಹಿರಿಯರಂತೆ ಇಂಜಿನ್‌ ಹೊಂದಿದ್ದರೂ ಸ್ಟೈಲ್‌ನಲ್ಲಿ, ಸ್ವರೂಪದಲ್ಲಿ, ಶಕ್ತಿಯಲ್ಲಿ ಮಾತ್ರ ಹಂಟರ್‌ ಭಿನ್ನ. ಹಾಗಾಗಿಯೇ ಹಂಟರ್‌ ಸದ್ಯ ಎನ್‌ಫೀಲ್ಡ್‌ ಪ್ರಿಯರ ಮಧ್ಯೆ ಇರುವ ಹಾಟ್‌ ಟಾಪಿಕ್ಕು.

ಈ ಬೈಕಿನ ಭಾರ 181 ಕೆಜಿ. ಉಳಿದಿಬ್ಬರಿಗಿಂತ ಬಹುತೇಕ 14 ಕೆಜಿ ಕಡಿಮೆ ತೂಕ. ಇದರ ಸೀಟಿನ ಎತ್ತರ 790 ಎಂಎಂ. ಹಿರಿಯರಿಗಿಂತ ಕುಳ್ಳ. ಹೈಟು ಜಾಸ್ತಿ ಇದ್ದರೂ ಕಡಿಮೆ ಇದ್ದರೂ ವ್ಯತ್ಯಾಸವೇನೂ ಆಗುವುದಿಲ್ಲ. ಸಮಾಧಾನಕರವಾಗಿ ಕುಳಿತು ಬೈಕು ಓಡಿಸಬಹುದು. ಜಾಸ್ತಿ ಭಾರವಿಲ್ಲದಿದ್ದರಿಂದ ಭಯವೂ ಕಡಿಮೆ. ಆ ಕಾರಣಕ್ಕೇನೇ ಹಂಟರ್‌ ಹೊಸ ರೈಡರ್‌ಗಳ ಪಾಲಿನ ಹಾಟ್‌ ಫೇವರಿಟ್‌.

ಹಿರಿಯರಿಗಿಂತ ಈ ಬೈಕಿನ ವಿನ್ಯಾಸ ಹೊಸ ಕಾಲದ್ದು. ಹಿರಿಯರಿಗೆ ಸಡ್ಡು ಹೊಡೆಯುವ ಕಿರಿಯನಂತೆ ಹೊಸ ಥರದ್ದು. ಉತ್ಸಾಹವೂ ಕೊಂಚ ಜಾಸ್ತಿ. ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ನುಗ್ಗಿಬರಬಹುದು. ಹೈವೇಯಲ್ಲಿ 120 ಕಿಮೀ ವೇಗದವರೆಗೆ ಅಂಥಾ ದೊಡ್ಡ ವೈಬ್ರೇಷನ್‌ ಆಗುವುದಿಲ್ಲ. ಕಡಿಮೆ ವೇಗದಲ್ಲಿ ಹೆಚ್ಚಿನ ಗೇರ್‌ನಲ್ಲಿ ಬೈಕು ಓಡಿಸಿದರೂ ಹಂಟರ್‌ಗೆ ಅಡ್ಡಿಯಿಲ್ಲ. ಕ್ಲಚ್‌ ಸ್ವಲ್ಪ ದೊಡ್ಡಣ್ಣನಂತೆ ಗಟ್ಟಿಇರುವುದರಿಂದ ಟ್ರಾಫಿಕ್ಕಿನಲ್ಲಿ ಸಿಕ್ಕಿಬಿದ್ದರೆ ಗ್ಲೌಸ್‌ ಧರಿಸದವರ ಕ್ಲಚ್‌ ಹಿಡಿದ ಕೈ ರಕ್ತ ಕೆಂಪು.

ಕೈಗೆಟುಕುವ ದರ, ಸಿಟಿ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸುವ ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ ಬೈಕ್ ಲಾಂಚ್!

ಪೆಟ್ರೋಲ್‌ ಟ್ಯಾಂಕ್‌ ಕೆಪಾಸಿಟಿ 13 ಲೀಟರ್‌. ರಾಯಲ್‌ ಎನ್‌ಫೀಲ್ಡ್‌ ಶಾಸೊತ್ರೕಕ್ತವಾಗಿ ಭರವಸೆ ಕೊಟ್ಟಿರುವ ಪ್ರಕಾರ ಹಂಟರ್‌ 36.22 ಮೈಲೇಜ್‌ ನೀಡಲಿದೆ. ಉಳಿದಿದ್ದು ಅವರವರ ರೋಡು, ಬೈಕು ಓಡಿಸುವ ವಿಧಾನ, ಗತ್ತು ಗೈರತ್ತಿನ ಇಚ್ಛೆ. ಸೀಟಿನ ವಿನ್ಯಾಸ ಚೂರು ಇಂಟರ್‌ಸೆಪ್ಟರ್‌ ಹೋಲುವಂತಿದ್ದರೂ ಪೂರ್ತಿ ಇಂಟರ್‌ಸೆಪ್ಟರ್‌ ಥರ ಇಲ್ಲ. ಬೈಕು ಓಡಿಸುವವರಿಗೆ ಸೀಟು ಬೆನ್ನು ನೋಯದಷ್ಟುಸ್ವೀಟು. ಪಿಲಿಯನ್‌ ರೈಡರ್‌ಗಳ ಹವಾ ತಕ್ಕಮಟ್ಟಿಗೆ ಇದ್ದರೆ ತೊಂದರೆ ಇಲ್ಲ. ಹೆವಿ ವೇಟ್‌ ಚಾಂಪಿಯನ್‌ಗಳು ಅವರವರದ ಜಾಗೃತೆಯಲ್ಲಿ ಇರುವುದು ಒಳ್ಳೆಯದು. ಧೈರ್ಯಕ್ಕೆ ಸೀಟ್‌ ರೆಸ್ಟ್‌ ಹಾಕಿಸಬೇಕಾದರೆ ಸ್ವಲ್ಪ ಕಾಯಬೇಕು ಎಂದು ರಾಯಲ್‌ ಎನ್‌ಫೀಲ್ಡ್‌ ಹೇಳಿದೆ.

ಹಂಟರ್‌ 350 ಹೇಳಿಕೇಳಿ ಹೊಸ ಕಾಲದ ಬೈಕು. ರಾಯಲ್‌ ಎನ್‌ಫೀಲ್ಡ್‌ನ ಗಜ ರಾಜ ಗಾಂಭೀರ್ಯ ಬಯಸುವವರಿಗೆ ಅಂಥಾ ಸಮಾಧಾನ ನೀಡುತ್ತದೋ ಇಲ್ಲವೋ. ರಾಯಲ್‌ ಎನ್‌ಫೀಲ್ಡ್‌ ಬ್ರಾಂಡ್‌ ಇರಬೇಕು ಮತ್ತು ಸಪೂರವೂ ಚಂದವೂ ಹಗುರವೂ ಆಗರಬೇಕು ಎಂದುಕೊಳ್ಳುವವರಿಗೆ ಇದೊಂದು ಉತ್ತಮ ಸಹಯಾತ್ರಿಯಾಗುವುದರಲ್ಲಿ ಅನುಮಾನವಿಲ್ಲ.