Yezdi Roadking Teaser ಭಾರತದ ರಸ್ತೆಗಿಳಿಯಲು ಸಜ್ಜಾದ ಐಕಾನಿಕ್ ಯೆಜ್ಡಿ ರೋಡ್‌ಕಿಂಗ್, ಟೀಸರ್ ಲಾಂಚ್!

  • ಭಾರತದಲ್ಲಿ ಮತ್ತೆ ರಸ್ತೆಗಳಿಯುತ್ತಿದೆ ರೋಡ್‌ಕಿಂಗ್ ಯೆಜ್ಡಿ
  • 80-90ರ ದಶಕದಲ್ಲಿ ಭಾರತದಲ್ಲಿ ಮಿಂಚಿದ್ದ ಬೈಕ್
  • ಹೊಸ ರೂಪ, ರೆಟ್ರೋ ಸ್ಟೈಲ್ ಮೂಲಕ ಮುಂದಿನ ತಿಂಗಳು ಬೈಕ್ ಲಾಂಚ್
  • ಯೆಜ್ಡಿ ರೋಡ್‌ಕಿಂಗ್ ಬೈಕ್ ಟೀಸರ್ ಲಾಂಚ್
Classic Legends officially teased Yezdi Roadking bike likely to launch in India in January 2022 ckm

ನವದೆಹಲಿ(ಡಿ.23): ಭಾರತದಲ್ಲಿ ಐಕಾನಿಕ್ ಬೈಕ್‌‌ಗಳು ಮತ್ತೆ ವಿಜೃಂಭಿಸಲು ಆರಂಭಿಸಿದೆ. ಈಗಾಗಲೇ ಜಾವಾ ಮೋಟಾರ್‌ಸೈಕಲ್(Jawa bike) ಭಾರತದ ರಸ್ತೆಗಳಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಇದೀಗ 80ರ ದಶಕದಲ್ಲಿ ಭಾರತದ ರೋಡ್‌ಕಿಂಗ್ ಎಂದೇ ಗುರುತಿಸಿಕೊಂಡಿದ್ದ ಯೆಜ್ಡಿ ರೋಡ್‌ಕಿಂಗ್(Yezdi Roadking) ಹೊಸ ರೂಪದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳು ಅಂದರೆ ಜನವರಿ 2022ರಲ್ಲಿ ನೂತನ ಯೆಜ್ಡಿ ರೋಡ್‌ಕಿಂಗ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಮೊದಲ ಭಾಗವಾಗಿ ಟೀಸರ್(Yezdi Roadking Teaser) ಬಿಡುಗಡೆಯಾಗಿದೆ.

ಕ್ಲಾಸಿಕ್ ಲೆಜೆಂಡ್ ಇದೀಗ ಯೆಜ್ಡಿ ರೋಡ್‌ಕಿಂಗ್ ಟೀಸರ್ ಲಾಂಚ್ ಮಾಡಲಾಗಿದೆ. ಕೇವಲ ಕಮಿಂಗ್ ಸೂನ್ ಅನ್ನೋ ಟೀಸರ್ ಇದೀಗ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಬಿಡುಗಡೆಯಾಗಿದೆ. ಹಾಲಿವುಡ್ ದಿ ಮ್ಯಾಟ್ರಿಕ್ಸ್ ರಿಸರಕ್ಷನ್ ಮೂವಿ ಶೈಲಿಯನ್ನೇ ಬಳಸಿ ಟೀಸರ್ ಬಿಡುಗಡೆ ಮಾಡಲಾಗಿದೆ. ಗತವೈಭವವನ್ನು ಮರುಕಳಿಸುವ ರೀತಿಯಲ್ಲಿ ಟೀಸರ್ ಲಾಂಚ್ ಮಾಡಲಾಗಿದೆ. ಇದೀಗ ಮತ್ತೆ ಯೆಜ್ಡಿ ಬೈಕ್ ಸವಾರಿಗೆ ಗ್ರಾಹಕರು ಕಾಯುತ್ತಿದ್ದಾರೆ.

ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

ಯೆಜ್ಡಿ ರೋಡ್‌ಕಿಂಗ್ ಈಗಾಗಲೇ ರೋಡ್ ಟೆಸ್ಟ್ ವೇಳೆ ಪ್ರತ್ಯಕ್ಷಗೊಂಡಿದೆ. ಹಳೇ ರೆಟ್ರೋ ಸ್ಟೈಲ್‌ನಲ್ಲೇ ನೂತನ ಬೈಕ್ ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ಆದರೆ ಹೊಸ ರೂಪದಲ್ಲಿರಲಿದೆ. ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿರಲಿದೆ. ಆದರೆ ಟೀಸರ್‌ನಲ್ಲಿ ಹೆಚ್ಚಿನ ಮಾಹಿತಿಗಳನ್ನು ಕಂಪನಿ ಬಹಿರಂಗ ಪಡಿಸಿಲ್ಲ. 

ಮೂಲಗಳ ಪ್ರಕಾರ ನೂತನ ಯೆಜ್ಡಿ ರೋಡ್‌ಕಿಂಗ್ ADV ಬೈಕ್ 18 ಇಂಚಿನ ಸ್ಪೋಕ್ ವ್ಹೀಲ್ ಜೊತೆಗೆ ಟ್ಯೂಬ್‌ಲೆಸ್ ಟೈಯರ್ ಹೊಂದಿರಲಿದೆ. ಇದರ ಜೊತೆಗೆ ಅತ್ಯುತ್ತಮ ಸಸ್ಪೆನ್ಶನ್ ನೀಡಲಾಗಿದೆ. ಇದರಿಂದ ಆಫ್ ರೋಡ್‌ ರೈಡಿಂಗ್‌ಗೂ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿದೆ.

ದಶಕಗಳ ಬಳಿಕ ಮತ್ತೆ ಬರುತ್ತಿದೆ ಯಜ್ಡಿ ಬೈಕ್!

ನೂತನ ಬೈಕ್  334cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಬೈಕ್ 30.64bhp ಪವರ್ ಹಾಗೂ 32.74Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದೇ ಎಂಜಿನ್ ಜಾವಾ ಪರೇಕ್ ಬಾಬರ್ ಬೈಕ್‌ನಲ್ಲಿ ಬಳಸಲಾಗಿದೆ. ಇನ್ನು ಯೆಜ್ಡಿ ರೋಡ್‌ಕಿಂಗ್ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಜನವರಿ ತಿಂಗಳ ಆರಂಭದಲ್ಲೇ ಬೈಕ್ ಬಿಡುಗಡೆಯಾಗಲಿದೆ. ಜಾವಾ ಮೋಟಾರ್‌ಬೈಕ್‌ನಲ್ಲಿ ಆದ ಡಿಲಿವರಿ ವಿಳಂಭ ಯೆಜ್ಡಿಯಲ್ಲಿ ಆಗದಂತೆ ನೋಡಿಕೊಳ್ಳಲು ಕ್ಲಾಸಿಕ್ ಲೆಜೆಂಡ್ ನಿರ್ಧರಿಸಿದೆ.

ಯೆಜ್ಡಿ ರೋಡ್‌ಕಿಂಗ್ ಇತಿಹಾಸ:
ಭಾರತದಲ್ಲಿ ಯೆಜ್ಡಿ ರೋಡ್‌ಕಿಂಗ್ ಬೈಕ್‌ಗೆ ಕೇವಲ ಇತಿಹಾಸ ಮಾತ್ರವಲ್ಲ ಹಲವು ಸ್ಮರಣೀಯ ನೆನಪುಗಳಿವೆ. 1978ರಿಂದ 1996ರ ವರೆಗೆ ಯೆಜ್ಡಿ ರೋಡ್‌ಕಿಂಗ್ ಬೈಕ್ ಭಾರತದಲ್ಲಿ ಭಾರಿ ಸದ್ದು ಮಾಡಿತ್ತು. ವಿಶೇಷ ಅಂದರೆ ಮೊದಲು ಯೆಜ್ಡಿ ರೋಡ್ಕಿಂಗ್ ಬೈಕ್ ಉತ್ಪಾದನೆಯಾಗಿದ್ದು ಮೈಸೂರಿನಿಂದ(Mysore). ಹೀಗಾಗಿ ಯೆಜ್ಡಿ ಹಾಗೂ ಕರ್ನಾಟಕಕ್ಕೆ (Karnataka)ಅವಿಭಾನವ ಸಂಬಂಧವಿದೆ. ಭಾರತದಲ್ಲಿ ಯೆಜ್ಡಿ ಬ್ರಾಂಡ್‌ನೇಮ್‌ನಲ್ಲಿ ಬೈಕ್ ಭಾರಿ ಸದ್ದು ಮಾಡಿತ್ತು. ಇಷ್ಟೇ ಅಲ್ಲ ಭಾರತದಲ್ಲಿ ಹಲವು ಬೈಕ್ ರೇಸ್‌ಗಳನ್ನು ಗೆದ್ದ ಇತಿಹಾಸ ಇದೇ ಯೆಜ್ಡಿ ರೋಡ್‌ಕಿಂಗ್ ಬೈಕ್‌ಗೆ ಇದೆ.

ಯೆಜ್ಡಿ ಒಯಿಲ್‌ಕಿಂಗ್, ಯೆಜ್ಡಿ ಸಿಬಿ ಯುನಿಟ್ ಹಾಗೂ ಯೆಜ್ಡಿ ಮೋನಾರ್ಕ್ ಮಾಡೆಲ್ ಭಾರತದ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿತ್ತು.  ಆದರೆ ರಾಜದೂತ್ ಹಾಗೂ ರಾಯಲ್‌ ಎನ್‌ಫೀಲ್ಡ್ ಪೈಪೋಟಿಯಿಂದ ಯೆಜ್ಡಿ ತನ್ನ ಹಳೇ ಖದರ್ ಕಳೆದುಕೊಂಡಿತು. ಭಾರತದ ಮಾರುಕಟ್ಟೆಯಿಂದ ನಿಧಾನವಾಗಿ ಮರೆಯಾಯಿತು. ಬಳಿಕ ಲೈಟ್ ವೈಟ್ ಸ್ಕೂಟರ್ ಹಾಗೂ ಬೈಕ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗತೊಡಗಿತು. ಇದೀಗ ಗತಕಾಲದ ಯೆಜ್ಡಿ ಮತ್ತೆ ಭಾರತದಲ್ಲಿ ಮಿಂಚಲು ರೆಡಿಯಾಗಿದೆ. 
 

Latest Videos
Follow Us:
Download App:
  • android
  • ios