ಹಬ್ಬದ ಸೀಸನ್ ಪ್ರಯುಕ್ತ ಬಿಎಸ್ಎ ಮೋಟಾರ್ಸೈಕಲ್ಸ್ ಭಾರತದಲ್ಲಿ ಗೋಲ್ಡ್ ಸ್ಟಾರ್ 650 ಬೈಕ್ನ 'ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್' ಮತ್ತು 'ಬರ್ಮಿಂಗ್ಹ್ಯಾಮ್ ಬ್ಲೂ' ಎಂಬ ಎರಡು ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. 652ಸಿಸಿ ಶಕ್ತಿಶಾಲಿ ಎಂಜಿನ್ ಹೊಂದಿರುವ ಈ ಬೈಕ್ಗಳು ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಬೆಂಗಳೂರು: ಹಬ್ಬದ ಸೀಸನ್ ಸಂಭ್ರಮವನ್ನು ಹೆಚ್ಚಿಸಲು ಬಿಎಸ್ಎ ಮೋಟಾರ್ಸೈಕಲ್ಸ್ ಭಾರತದಲ್ಲಿ ತನ್ನ ಪ್ರಸಿದ್ಧ ಗೋಲ್ಡ್ ಸ್ಟಾರ್ 650 ಬೈಕ್ನ ಎರಡು ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಎಂಸಿಎನ್ನ ಬೆಸ್ಟ್ ರೆಟ್ರೊ ಬೈಕ್ ಪ್ರಶಸ್ತಿ ವಿಜೇತ ಈ ಬೈಕ್ ಇದೀಗ 'ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಡಿಷನ್' ಮತ್ತು ಬರ್ಮಿಂಗ್ಹ್ಯಾಮ್ ಬ್ಲೂ ಎಡಿಷನ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಬಿಎಸ್ಎ ಬ್ರ್ಯಾಂಡ್ನ ಐತಿಹಾಸಿಕ ಮೈಲಿಗಲ್ಲುಗಳನ್ನು ಆಚರಿಸುವ ಉದ್ದೇಶದಿಂದ ಈ ಎರಡು ಹೊಸ ಎಡಿಷನ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಲುಕ್ ಹೊಂದಿರುವ ಈ ಬೈಕ್ಗಳು ಬಿಎಸ್ಎ ಮರುಹುಟ್ಟಿನ ಪ್ರಮುಖ ಆಕರ್ಷಣೆಯಾಗಿವೆ.
ಇದರಲ್ಲಿ 'ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಡಿಷನ್' ಬ್ರಿಟನ್ನ ಐತಿಹಾಸಿಕ ಬ್ರೂಕ್ಲ್ಯಾಂಡ್ಸ್ ರೇಸ್ ಟ್ರ್ಯಾಕ್ನಿಂದ ಸ್ಫೂರ್ತಿ ಪಡೆದಿದೆ. 1937ರಲ್ಲಿ ವಾಲ್ ಹ್ಯಾಂಡ್ಲಿ ಎಂಬ ರೇಸರ್ ಇದೇ ಟ್ರ್ಯಾಕ್ನಲ್ಲಿ ತೋರಿದ ಅದ್ಭುತ ಸಾಧನೆಗಾಗಿ 'ಗೋಲ್ಡ್ ಸ್ಟಾರ್' ಬ್ಯಾಡ್ಜ್ ಪಡೆದಿದ್ದರು. ಆ ಐತಿಹಾಸಿಕ ಕ್ಷಣದ ನೆನಪಿಗಾಗಿ ಈ ಆವೃತ್ತಿಯನ್ನು ಹೊರತರಲಾಗಿದೆ. ಈ ಬೈಕ್ ಆಕರ್ಷಕವಾದ ಕಪ್ಪು ಬಣ್ಣ, ಕ್ರೋಮ್ ಫಿನಿಶ್ ಹೊಂದಿರುವ ಟ್ಯಾಂಕ್ ಮತ್ತು ಫೆಂಡರ್ಗಳ ಮೇಲೆ ಚಿನ್ನದ ಬಣ್ಣದ ಗೆರೆಗಳು ಹಾಗೂ ಪ್ರೀಮಿಯಂ ಕ್ವಿಲ್ಟೆಡ್ ಸೀಟ್ ಅನ್ನು ಹೊಂದಿದ್ದು ಅತ್ಯಂತ ಗಾಂಭೀರ್ಯದಿಂದ ಕೂಡಿದೆ.
ಮತ್ತೊಂದೆಡೆ, 'ಬರ್ಮಿಂಗ್ಹ್ಯಾಮ್ ಬ್ಲೂ' ಆವೃತ್ತಿಯು ಬಿಎಸ್ಎ ಬ್ರ್ಯಾಂಡ್ ಹುಟ್ಟಿದ 'ಬರ್ಮಿಂಗ್ಹ್ಯಾಮ್' ನಗರಕ್ಕೆ ಗೌರವ ಸಲ್ಲಿಸುತ್ತದೆ. ಬಿಎಸ್ಎ ಹುಟ್ಟಿನಿಂದ ಹಿಡಿದು ಜಗತ್ತಿನಾದ್ಯಂತ ಅದು ಬೆಳೆದ ಪರಿಯ ಹಿಂದೆ ಈ ನಗರದ ಪಾತ್ರ ದೊಡ್ಡದಿದೆ. ಈ ಬೈಕ್ ಗಾಢವಾದ ನೀಲಿ ಬಣ್ಣದ ಪೇಂಟ್, ವಿಶೇಷವಾದ ಬೆಳ್ಳಿಯ ಸೈಡ್-ಪ್ಯಾನಲ್ ಬ್ಯಾಡ್ಜ್ ಹಾಗೂ ವಿಶಿಷ್ಟವಾದ ಎಂಜಿನ್ ಫಿನಿಶ್ ಅನ್ನು ಹೊಂದಿದೆ. ಇದು ಗೋಲ್ಡ್ ಸ್ಟಾರ್ನ ಹಳೆಯ ಕ್ಲಾಸಿಕ್ ಡಿಎನ್ಎಯನ್ನು ಉಳಿಸಿಕೊಂಡು, ಇಂದಿನ ಯುವಜನತೆಗೆ ಒಪ್ಪುವಂತಹ ಸಮಕಾಲೀನ ಸ್ಪರ್ಶವನ್ನು ನೀಡಿದೆ.
ಈ ಎರಡೂ ಹೊಸ ಬೈಕ್ಗಳ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ಇವುಗಳು ಶಕ್ತಿಶಾಲಿ 652ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 45ಎಚ್ಪಿ ಪವರ್ ಹಾಗೂ 55ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.
ದೊಡ್ಡ ಸಿಂಗಲ್ ಸಿಲಿಂಡರ್ ನೀಡುವ ವಿಶಿಷ್ಟ ಅನುಭವವನ್ನು ಗ್ರಾಹಕರು ಇದರಲ್ಲಿ ಪಡೆಯಲಿದ್ದಾರೆ. ಸುರಕ್ಷತೆ ಹಾಗೂ ಅತ್ಯುತ್ತಮ ನಿಯಂತ್ರಣಕ್ಕಾಗಿ ಬ್ರೆಂಬೊ ಬ್ರೇಕ್ಗಳು, ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಕ್ಲಾಸಿಕ್ ಲುಕ್ ನೀಡುವ ವೈರ್-ಸ್ಪೋಕ್ ವೀಲ್ಗಳನ್ನು ಈ ಬೈಕ್ನಲ್ಲಿ ಅಳವಡಿಸಲಾಗಿದೆ.
ಈ ಹೊಸ ಬಿಡುಗಡೆಯ ಬಗ್ಗೆ ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, "ಒಂದು ಆಧುನಿಕ ರೆಟ್ರೊ-ರೋಡ್ಸ್ಟರ್ ಬೈಕ್ ಹೇಗಿರಬೇಕು ಎಂಬುದಕ್ಕೆ ಗೋಲ್ಡ್ ಸ್ಟಾರ್ ಅತ್ಯುತ್ತಮ ಉದಾಹರಣೆ. ಇದರ ಅಪ್ಪಟ ಬ್ರಿಟಿಷ್ ವಿನ್ಯಾಸದಿಂದ ಹಿಡಿದು ಎಂಜಿನ್ ನೀಡುವ ಅನುಭವದವರೆಗೆ ಪ್ರತಿಯೊಂದು ಅಂಶವೂ ಗೋಲ್ಡ್ ಸ್ಟಾರ್ನ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಆವೃತ್ತಿಯು ಗೋಲ್ಡ್ ಸ್ಟಾರ್ ಹೆಸರು ಬಂದ ಐತಿಹಾಸಿಕ ಕ್ಷಣವನ್ನು ಗೌರವಿಸಿದರೆ, ಬರ್ಮಿಂಗ್ಹ್ಯಾಮ್ ಬ್ಲೂ ಆವೃತ್ತಿಯು ಇಂದಿನ ರೈಡರ್ಗಳಿಗೆ ತಕ್ಕಂತೆ ಆಧುನಿಕ ರೂಪವನ್ನು ನೀಡುತ್ತಿದೆ. ಇವೆರಡೂ ಸೇರಿ ಬಿಎಸ್ಎಯ ವಿಶಿಷ್ಟ ಇತಿಹಾಸವನ್ನು ಸಾರುತ್ತವೆ,” ಎಂದು ತಿಳಿಸಿದರು.
ಬೆಲೆ ಎಷ್ಟು?
ದೇಶಾದ್ಯಂತ ಇರುವ ಬಿಎಸ್ಎ ಡೀಲರ್ಶಿಪ್ಗಳಲ್ಲಿ ಈ ಎರಡು ಬಣ್ಣದ ಬೈಕ್ಗಳು ಲಭ್ಯವಿದ್ದು, ಬೆಲೆಗಳ ವಿವರ ಈ ಕೆಳಗಿನಂತಿದೆ:
- ಬರ್ಮಿಂಗ್ಹ್ಯಾಮ್ ಬ್ಲೂ: 3,55,950 ರೂ.
- ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಡಿಷನ್: 3,64,950 ರೂ.
ಗ್ರಾಹಕರ ತೃಪ್ತಿ ಹಾಗೂ ಸುಗಮ ನಿರ್ವಹಣೆಗಾಗಿ ಬಿಎಸ್ಎ ಮೋಟಾರ್ಸೈಕಲ್ಸ್ ಉದ್ಯಮದಲ್ಲೇ ಮೊದಲ ಬಾರಿಗೆ 'ಓನರ್ಶಿಪ್ ಅಶ್ಯೂರೆನ್ಸ್ ಪ್ರೋಗ್ರಾಂ' ಅನ್ನು ಪರಿಚಯಿಸಿದೆ. ಇದು ಈ ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿದೆ:
- 4 ವರ್ಷ ಅಥವಾ 50,000 ಕಿ.ಮೀ ವರೆಗೆ ಸ್ಟ್ಯಾಂಡರ್ಡ್ ವಾರಂಟಿ.
- ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ.
- 8 ವರ್ಷಗಳವರೆಗೆ ರೋಡ್ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
- ದೇಶಾದ್ಯಂತ ಅನ್ವಯವಾಗುವಂತೆ 5 ವರ್ಷಗಳವರೆಗೆ ವಾರ್ಷಿಕ ನಿರ್ವಹಣಾ ಗುತ್ತಿಗೆ ಸೌಲಭ್ಯ.
ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಸೇಲ್ಸ್ ಮತ್ತು ಸರ್ವಿಸ್ ಕೇಂದ್ರಗಳಲ್ಲಿ ಸಮಗ್ರ ಮಾಲೀಕತ್ವದ ಪ್ರಯೋಜನಗಳು ಸಿಗಲಿವೆ.


