ಬೀದರ್[ನ.9]: ಗುರುನಾನಕ ದೇವ್ 550 ನೇ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿಯ ಗುರುದ್ವಾರ ಪರಿಸರದಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣತೊಡಗಿದೆ. ಜಯಂತಿ ಹಿನ್ನೆಲೆಯಲ್ಲಿ ಇದೇ ನವೆಂಬರ್ 5 ರಿಂದ ವಿವಿಧ ಕಾರ್ಯಕ್ರಮಗಳು ನಡೆದಿದ್ದು ನ. 10, 11 ಮತ್ತು 12 ರಂದು ಅದ್ಧೂರಿಯಾಗಿ ಕಾರ್ಯಕ್ರಮಗಳು ನಡೆಯಲಿವೆ. 

ಈ ಸಂಭ್ರಮದ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಗಣ್ಯಾತಿ ಗಣ್ಯರು, ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಹಲವಾರು ಸೌಲಭ್ಯಗಳನ್ನು ಗುರುದ್ವಾರಾ ಪರಿಸರದಲ್ಲಿ ಹಾಗೂ ನಗರದ ಇತರೆ ಭಾಗದಲ್ಲಿ ಗುರುದ್ವಾರಾ ಪ್ರಬಂಧಕ ಸಮಿತಿ ವತಿಯಿಂದ ಹ್ಮುಕೊಳ್ಳಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುರುದ್ವಾರದ ಪರಿಸರದಲ್ಲಂತೂ ಆಕರ್ಷಕವಾದ ಪೆಂಡಾಲಗಳನ್ನು ನಿರ್ಮಿಸಲಾಗಿದೆ. ಇದೇ ನ. 5 ರಿಂದ ಪ್ರಾರಂಭವಾದ ಪ್ರಭಾತ ಫೇರಿ ಕಾರ್ಯಕ್ರಮ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರದಂದು ಮುಕ್ತಾಯಗೊಳ್ಳಲಿದೆ. ನಂತರ ಭಾನುವಾರದಿಂದ ಮೂರು ದಿನಗಳ ಕಾಲ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಪ್ರಬಂಧಕ ಸಮಿತಿಯವರು ಗುರುನಾನಕ ದೇವ್ ಅವರ 550 ನೇ ಜಯಂತಿಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಅನುಸಾರವಾಗಿ ಹಲವಾರು ಮುಂಜಾಗೃತಾ ಕ್ರಮಗಳನ್ನು ನಗರದಲ್ಲಿ ಕೈಗೊಂಡಿದ್ದಾರೆ. 

ಭಕ್ತಾದಿಗಳ ಅನುಕೂಲಕ್ಕಾಗಿ ವಸತಿ ಸೌಲಭ್ಯ ಮತ್ತು ಲಂಗರ್ ವ್ಯವಸ್ಥೆ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಮುಖ ಕಾರ್ಯಕ್ರಮಗಳ ಮೊದಲ ದಿನವಾದ ಭಾನುವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಪಶುಸಂಗೋಪನೆ, ಅಲ್ಪಸಂಖ್ಯಾತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ರಹೀಮ ಖಾನ್, ಬಂಡೆಪ್ಪ ಖಾಶೆಂಪೂರ, ಬಿ. ನಾರಾಯಣರಾವ್, ಎಂಎಲ್ ಸಿಗಳಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ, ಚಂದ್ರಶೇಖರ ಪಾಟೀಲ್, ಶರಣಪ್ಪ ಮಟ್ಟೂರ್, ಅರವಿಂದಕುಮಾರ ಅರಳಿ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷೆ ಲಕ್ಷ್ಮಣ ಬುಳ್ಳ, ಜಿಲ್ಲಾಧಿಕಾರಿ ಡಾ. ಎಚ್ ಆರ್ ಮಹಾದೇವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ನಗರಸಭೆ ಆಯುಕ್ತರಾದ ಬಿ.ಬಸಪ್ಪ ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.(ಸಾಂದರ್ಭಿಕ ಚಿತ್ರ)