ಸತ್ತವರ ಮನೆಗೂ ನೋಟಿಸ್‌ ನೀಡ್ತಿವೆ ಬ್ಯಾಂಕ್‌ಗಳು: ಕಂಗಾಲಾದ ರೈತಾಪಿ ವರ್ಗ

ಸಾಲ ಚುಕ್ತಾಕ್ಕೆ ರೈತರಿಗೆ ಪತ್ರ | ಋಣ ಮುಕ್ತ ಪತ್ರ ನೀಡಿದ್ರೂ ‘ಋಣ ಸಮಾಧಾನ’ ಅನಿವಾರ್ಯ | ಎಚ್‌ಡಿಕೆ ಸರ್ಕಾರದಲ್ಲಿಋಣಮುಕ್ತರಾದ್ರೂ ಇನ್ನೂ ಹೋಗಿಲ್ಲ ಸಾಲದ ಹೊರೆ | ರೈತ ಮಹಿಳೆ ಮೃತಪಟ್ಟಿದ್ದರೆ ಶೇ.10 ರಷ್ಟು, ಪುರುಷನಾಗಿದ್ರೆ ಶೇ.5 ರಷ್ಟು ಮಾತ್ರ|

Banks Send Notice to Dead Farmers Family

ಅಪ್ಪಾರಾವ್ ಸೌದಿ

ಬೀದರ್‌[ನ.7]: ಸಾಲದ ಬಾಧೆಗೆ ಕೊರಳೊಡ್ಡಿ ಸತ್ತವರನ್ನೂ ಬಿಡ್ತಿಲ್ಲ ಬ್ಯಾಂಕ್‌ಗಳು. ಸಾಲದಿಂದಾಗಿ ಮನೆಯ ಯಜಮಾನನನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ರೈತ ಕುಟುಂಬಗಳಿಗೆ ನೋಟಿಸ್‌ಗಳಿರಲಿ, ಏಕ ಕಾಲದಲ್ಲಿ ಸಾಲ ಇತ್ಯರ್ಥಗೊಳಿಸುವಿಕೆ ಆಫರ್‌ಗಳನ್ನ ಮುಂದಿಡಲಾಗ್ತಿದ್ದು, ರೈತ ಮಹಿಳೆ ಮರಣ ಹೊಂದಿದ್ರೆ ಶೇ.10 ರಷ್ಟು, ಪುರುಷ ರೈತನಾಗಿದ್ರೆ ಓಟಿಎಸ್ ಮೊತ್ತದಲ್ಲಿ ಶೇ.5 ರಷ್ಟು ರಿಯಾಯ್ತಿ ಎಂದು ಬೊಬ್ಬಿಡುವ ಮೂಲಕ ಸಾವಿಗೂ ಸಾಲದ ನಂಟು ಹಚ್ಚೋ ಕಾರ್ಯ ಜಿಲ್ಲೆಯ ಬ್ಯಾಂಕ್‌ಗಳು ಮಾಡಿವೆ.

ರೈತರಿಗೆ ಅವರ ಕುಟುಂಬಸ್ಥರಿಗೆ ಬ್ಯಾಂಕ್‌ಗಳು ಏಕ ಕಾಲದಲ್ಲಿ ಸಾಲ ಇತ್ಯರ್ಥಗೊಳಿಸುವಿಕೆಯ ಆಫರ್‌ಗಳನ್ನು ಮುಂದಿಟ್ಟಿದ್ದು, ಬರ ಪೀಡೆಯಿಂದ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿರುವ ರೈತರ ನಿದ್ದೆಗೆಡಿಸಿವೆ ಬ್ಯಾಂಕ್‌ಗಳು. ಮಳೆ ಬೆಳೆ ಇಲ್ಲದೆ ಅನ್ನಕ್ಕೂ ಚಿಂತಿಸುವಂಥ ಈ ದುಸ್ಥಿತಿಯಲ್ಲಿ ರೈತರ ಮೇಲೆ ಸಾಲ ವಸೂಲಿಯ ಗಧಾ ಪ್ರಹಾರ ಮಾಡಲಾಗ್ತಿದೆ. ಇದಕ್ಕೆ ತಾಜಾ ಉದಾಹರಣೆ ಜಿಲ್ಲೆಯ ಚೊಂಡಿ ಗ್ರಾಮ. ಕಳೆದ ಒಂದೂವರೆ ವರ್ಷದ ಹಿಂದೆ ರೈತರ ಸಾಲ ಬಾಕಿಗೆ ಸೂಚಿಸಿ ಬ್ಯಾಂಕ್‌ಗಳು ನೋಟೀಸ್‌ ಜಾರಿಗೊಳಿಸಿದ್ದವು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸರ್ಕಾರದ ಮಧ್ಯಸ್ಥಿಕೆ ಸಾಲ ವಸೂಲಾತಿಗೆ ಬ್ರೇಕ್ ಹಾಕಿದ್ದ ವಿಷಯ ಕ್ರಮೇಣ ಮಂಕಾಗುತ್ತಿದ್ದಂತೆ ಇದೀಗ ಬ್ಯಾಂಕ್‌ಗಳು ಮತ್ತೇ ತಲೆ ಎತ್ತಿವೆ. ಸಾಲದ ಸುಳಿಗೆ ರೈತ ಕೊರಳೊಡ್ಡುತ್ತಿರುವ ಘಟನೆಗಳನ್ನೂ ಲೆಕ್ಕಿಸದೇ ನೋಟೀಸ್ ರೂಪದ ಆಫರ್ ಲೆಟರ್‌ಗಳನ್ನು ನೀಡ್ತಿವೆ. ಸತ್ತ ರೈತನ ಮನೆಯಲ್ಲೂ ಡಿಸ್ಕೌಂಟ್‌ ಮಾತೆತ್ತಿ ಆಳುವ ಸರ್ಕಾರಗಳ ತಲೆ ತಗ್ಗಿತುವಂತೆ ಮಾಡಿವೆ. ಜಿಲ್ಲೆಯ ಚೊಂಡಿ ಗ್ರಾಮ. ಈ ಒಂದೇ ಗ್ರಾಮದಲ್ಲಿ 60 ಕ್ಕೂ ಹೆಚ್ಚು ಜನರಿಗೆ ಓಟಿಎಸ್‌ ಸ್ಕೀಮ್ ಒಪ್ಪಂದ ಪತ್ರ ಕಳುಹಿಸಿದೆ. ಜಿಲ್ಲೆಯ ಚೊಂಡಿ ಗ್ರಾಮದ ಕಸ್ತೂರ ಬಾಯಿ ಘಾಳೆಪ್ಪ ಎಂಬ ರೈತ ಮಹಿಳೆಗೆ ಋಣ ಸಮಾಧಾನ ಯೋಜನೆ 2019-20 ಎಂಬ ಹೆಸರಿನ ಪತ್ರ ರವಾನಿಸಿ ಏಕಕಾಲದಲ್ಲಿ ಸಾಲ ಮರುಪಾವತಿಯ ಆಫರ್‌ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ನೀಡಿದ್ದು, ಬರುವ ಡಿಸೆಂಬರ್ 31 ಮುಕ್ತಾಯದ ದಿನ ಎಂದು ತಿಳಿಸಿ ರೈತರಿಂದ ಸಹಿ ಪಡೆಯುತ್ತಿರುವುದು. ರೈತರಲ್ಲಿ ಆತಂಕಮೂಡಿಸಿದೆ.

ರೈತರು ಆತಂಕ ವ್ಯಕ್ತಪಡಿಸಿದ್ದು ಹೀಗೆ: 

ಆಗಿನ ಸರ್ಕಾರ ಮಾಫಿ ಮಾಡ್ತು, ಈಗಿನ ಸರ್ಕಾರ ನೋಟೀಸ್ ಕೊಡ್ತು. ಮಳೆನೂ ಇಲ್ಲ ಬೆಳೆನೂ ಇಲ್ಲ. ಉಳ್ಳಾಕ ಇಲ್ಲಾ, ನಾವೇನ್ ಬಾಕಿ ಸಾಲ ಕಟ್ತೀವಿ. ಹೀಂಗಂದ್ರ ಜೈಲಿಗೆ ಹಾಕ್ತೀವಿ ಅಂತಾರ. ಹಂಗಾಗಿ ಈ ಬರಗಾಲದಾಗ ಕೊರಳಕೊಡೋದಕ್ಕ ದೊಡ್ಡ ಮರ, ಗಿಡಗಳನ್ನು ನೋಡಕೋಬೇಕಾಗ್ಯದ, ಇಲ್ಲಾಂದ್ರ ಹೊಲಕ್ಕ ಹೊಡೆಯೋ ಮದ್ದು ಕುಡೀಯೋದೆ ಬಾಕಿ ಅದಾ. ಆಗಿನ ಸಿಎಂ ಋಣ ಮುಕ್ತ ಅಂದಿದ್ದು ಸುಳ್ಳಾ ಹಂಗಾರ ಎಂದು ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಓಟಿಎಸ್ ಸ್ಕೀಮ್ ರೈತರ ಜೀವ ಹಿಂಡದಿರಲಿ. ಸರ್ಕಾರ ತಕ್ಷಣವೇ ಈ ನಿಟ್ಟಿನಲ್ಲಿ ಬ್ಯಾಂಕ್‌ಗಳಿಗೆ ಎಚ್ಚರಿಸುವ ಕೆಲಸ ಮಾಡಬೇಕು. ರೈತರಲ್ಲಿ ಸಾಲದ ಹೊರೆ ಸಾಕಷ್ಟುಇದೆ. ವಾರಕ್ಕೆ ಮೂರ್ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಷಯಗಳು ಬೆಳಕಿಗೆ ಬರುತ್ತಿವೆ. ಎಚ್.ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ ಋಣಮುಕ್ತ ಎಂದು ರೈತರಿಗೆ ಪ್ರಮಾಣ ಪತ್ರ ಕೊಟ್ಟಿದ್ದರೂ ಏಕೆ ಈ ಓಟಿಎಸ್‌ ಕಿರುಕುಳ. ಬೆಳೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಓಟಿಎಸ್ ಹೆಸರಲ್ಲಿ ಬ್ಯಾಂಕ್‌ಗಳು ಸಹಿ ಮಾಡಿಸಿಕೊಂಡು ಹೋಗುತ್ತಿರುವದು ರೈತರನ್ನು ಕಂಗಾಲಾಗಿಸಿದೆ. ನಮಗೆ ಸಾವು ಒಂದೇ ದಾರೀನಾ? ಸರ್ಕಾರವೇ ಹೇಳಬೇಕು ಎಂದು  ಚೊಂಡಿ ಗ್ರಾಮದ ರೈತ ನಜೀರ್ ಚೊಂಡಿ ಅವರು ಪ್ರಶ್ನಿಸಿದ್ದಾರೆ. 

Latest Videos
Follow Us:
Download App:
  • android
  • ios