ಬೆಂಗಳೂರು, (ಏ.4): ಗಂಡನ ಸಾವನ್ನು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಕ್ಕೆ ಗಂಡನ ಮನೆಯವರೇ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರಿನ ಬಾಣಸವಾಡಿಯ ರೌಡಿಶೀಟರ್ ಶಿವು ಎಂಬಾತನ ಪತ್ನಿ ಪ್ರೇಮಾವತಿ ಸಂತ್ರಸ್ತ ಮಹಿಳೆ. ಶಿವು ರೌಡಿಶೀಟರ್​ ಆಗಿದ್ದು,  ಕಳೆದ 2 ತಿಂಗಳ ಹಿಂದೆ ಶಿವು ಸಾವಿಗೀಡಾಗಿದ್ದ. 

ಆದರೆ ಪತಿಯ ಸಾವಿನ ಹಿಂದೆ ಕುಟುಂಬಸ್ಥರ ಕೈವಾಡ ಇರಬಹುದೆಂದು ಶಂಕಿಸಿದ್ದ ಪತ್ನಿ, ಶಿವು ಕುಟುಂಬಸ್ಥರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಪ್ರೀತಿ ವಿಚಾರವಾಗಿ ಗೆಳೆಯನನ್ನೇ ಕೊಂದ ಸೋದರರು

ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಕ್ಕೆ ಕೋಪಗೊಂಡ ಶಿವು ಮನೆಯವರು, ಬಾಣಸವಾಡಿಯ ಎಂಪೈರ್​ ಹೊಟೇಲ್ ಬಳಿ ಶಿವು ಪತ್ನಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. 

ಗುರುವಾರ  ತಡರಾತ್ರಿ 11.30 ರ ವೇಳೆಗೆ ಆತನ ಕುಟುಂಬಸ್ಥರು ಶಿವು ಪತ್ನಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ. ಕೊನೆಗೆ ಸ್ಥಳೀಯರು ಆಕೆಯನ್ನು ಕಾಪಾಡಿದ್ದು, ಈ ಬಗ್ಗೆ ಶಿವು ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.