ಬೆಂಗಳೂರು[ನ.8]: ಶಾಲೆಗೆ ಹೋಗುವಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಓದಿನ ಮೇಲೆ ಆಸಕ್ತಿ ಇಲ್ಲದ 13 ವರ್ಷದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆ ನಿವಾಸಿ ರಾಹುಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 

ರಾಹುಲ್‌ನ ತಂದೆ ಕಾರು ಚಾಲಕನಾಗಿದ್ದು, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಶಾಲೆಗೆ ಹೋಗಲು ನಿರಾಕರಿಸುತ್ತಿದ್ದನು ಎನ್ನಲಾಗಿದೆ. ಹೀಗಾಗಿ ಆತನ ಪೋಷಕರು ಸಾಕಷ್ಟು ಬುದ್ದಿ ಹೇಳಿ ಬಲವಂತದಿಂದ ಶಾಲೆಗೆ ಕಳುಹಿಸುತ್ತಿದ್ದರು. ಈ ಮಧ್ಯೆ ತನಗೆ ಓದಿನಲ್ಲಿ ಆಸಕ್ತಿಯಿಲ್ಲ. ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುವ ಮೊದಲು ತಾಯಿ ಪುತ್ರ ರಾಹುಲ್‌ಗೆ ತಿಂಡಿ ತಿಂದು ಶಾಲೆಗೆ ಹೋಗುವಂತೆ ಸೂಚಿಸುತ್ತಿದ್ದರು. ತಂದೆ ಕೂಡ ಎಚ್ಚರಿಕೆ ನೀಡಿದ್ದರು. ನಂತರ ಅಪರಾಹ್ನ 12 ಗಂಟೆ ಸುಮಾರಿಗೆ ತಂದೆ ಮನೆಯ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ರಾಹುಲ್ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆ ಸಮೀಪದ ಸ್ನೇಹಿತರಿಗೆ ಮನೆ ಬಳಿ ಹೋಗಿ ಪುತ್ರ ಶಾಲೆಗೆ ಹೋಗಿದ್ದಾನೋ? ಇಲ್ಲವೇ? ಎಂದು ನೋಡುವಂತೆ ಕೋರಿದ್ದಾರೆ. ಅವರು ಮನೆ ಬಳಿ ಹೋಗಿ ನೋಡಿದಾಗ ಮನೆ ಒಳಗಡೆಯಿಂದ ಬಾಗಿಲು ಹಾಕಲಾಗಿತ್ತು. ಆನಂತರ ಕೆಲ ಹೊತ್ತಿನ ಬಳಿಕ ಮನೆ ಬಳಿ ಬಂದ ಮೃತ ಬಾಲಕನ ತಂದೆ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.