Asianet Suvarna News Asianet Suvarna News

ಟೊಮೆಟೋ ಬೆಳೆದು ಬಂಪರ್ ಲಾಭ ಗಳಿಸುವುದು ಹೇಗೆ ?

ಟೊಮೆಟೊ ಬೆಳಯ ನಿರ್ವಹಣೆಗೆ ಈ ತಂತ್ರಜ್ಞಾನ ಅತ್ಯುತ್ತಮವಾಗಿದೆ. ಈ ರೀತಿಯ ತಂತ್ರಜ್ಞಾನದಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ. 

Wire Mesh Is support To Maintain Tomato crop
Author
Bengaluru, First Published Oct 27, 2019, 9:09 AM IST

ಬೆಂಗಳೂರು [ಅ.27]:  ಸಂಕರಣ ಟೊಮೆಟೋ ತಳಿಗಳ ಬೇಸಾಯದಲ್ಲಿ ‘ವೈರ್‌ಮೆಶ್‌’ ತಂತ್ರಜ್ಞಾನ ಅಳವಡಿಕೆ ರೈತರಿಗೆ ಲಾಭದಾಯವಾಗಿದ್ದು, ಬೆಳೆ ಹಾನಿ ಮತ್ತು ದುಬಾರಿ ಖರ್ಚು ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಟೊಮೆಟೋ ಬೆಳೆದ ರೈತರು ಗಿಡ ನೆಲಕ್ಕೆ ಬಾಗಿ ಹಣ್ಣು ಹಾಳಾಗುವುದನ್ನು ನಿಯಂತ್ರಿಸಲು ದಾರ, ಪ್ಲಾಸ್ಟಿಕ್‌ ದಾರ, ತಂತಿ, ಕೋಲುಗಳ ಬಳಕೆ ಮತ್ತು ಗಿಡಗಳನ್ನು ದಾರದಿಂದ ಎತ್ತಿ ಕಟ್ಟಲು ಪ್ರತಿ ಬಾರಿಯೂ ಕೃಷಿ ಕಾರ್ಮಿಕರನ್ನು ಬಳಕೆ ಮಾಡಬೇಕಿತ್ತು. ಇದು ರೈತರಿಗೆ ಶೇ.25ರಿಂದ 30ರಷ್ಟುಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತು.

ರೈತರ ಆರ್ಥಿಕ ನಷ್ಟಕಡಿಮೆ ಮಾಡುವ ಉದ್ದೇಶದಿಂದಲೇ ಜಿ.ಐ.ವೈರ್‌ಮೆಶ್‌ ತಂತ್ರಜ್ಞಾನವನ್ನು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕಾ ವಿಭಾಗ ಅಭಿವೃದ್ಧಿಪಡಿಸಿದೆ. ಇದರಿಂದ ಪ್ರಸ್ತುತ ಅನುಸರಿಸುತ್ತಿರುವ ಪದ್ಧತಿಯಲ್ಲಿ ಬೇಕಾಗುವ ಕಡ್ಡಿಗಳು, ಟೊಮೆಟೋ ದಾರ, ಪ್ಲಾಸ್ಟಿಕ್‌ ದಾರ ಇವ್ಯಾವುದೂ ಸುಧಾರಿತ ವೈರ್‌ಮೆಶ್‌ ತಂತ್ರಜ್ಞಾನ ಪದ್ಧತಿಯಲ್ಲಿ ಬೇಕಾಗುವುದಿಲ್ಲ. ಗಿಡಗಳನ್ನು ಕಟ್ಟಲು ಬೇಕಾಗುವ ಕೃಷಿ ಕಾರ್ಮಿಕರ ಸಂಖ್ಯೆಯಲ್ಲಿ ಶೇ.70ರಷ್ಟನ್ನು ಕಡಿಮೆ ಮಾಡಬಹುದು.

ಸುಧಾರಿತ ಪದ್ಧತಿ ಬಳಕೆಯಿಂದ ಗಿಡಗಳಿಗೆ ಯಾವುದೇ ಗಾಯ, ನಂಜು ಆಗುವುದಿಲ್ಲ. ಗಿಡಗಳು ಸ್ವಾಭಾವಿಕವಾಗಿ ಬೆಳೆದು ಹೆಚ್ಚು ದಿನ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಇದರಿಂದ ಶೇ.20ರಷ್ಟುಇಳುವರಿಯು ಹೆಚ್ಚುತ್ತದೆ. ಜಿಐ ವೈರ್‌ಮೆಶ್‌ ಪದ್ಧತಿಯಲ್ಲಿ ಗಿಡಗಳನ್ನು ಹಬ್ಬಿಸಲು ತಗಲುವ ಸರಾಸರಿ ವೆಚ್ಚ ಎಕರೆಗೆ .18 ಸಾವಿರ ಮಾತ್ರ. ಆದರೆ, ಹಳೆಯ ಪದ್ಧತಿಯಲ್ಲಿ ಎಕರೆಗೆ .20 ಸಾವಿರದಿಂದ 26 ಸಾವಿರ ಖರ್ಚು(ವೆಚ್ಚವನ್ನು 10 ವರ್ಷಕ್ಕೆ ಹೋಲಿಸಿದರೆ) ಮಾಡಬೇಕಿತ್ತು.

10 ವರ್ಷ ಬಾಳಿಕೆ:  ಜಿ.ಐ.ವೈರ್‌ಮೆಶ್‌ ಪದ್ಧತಿಯಲ್ಲಿ ಅಳವಡಿಸಲಾದ ಜಿ.ಐ.ತಂತಿಗಳನ್ನು 10 ವರ್ಷಗಳವರೆಗೆ ಉಪಯೋಗಿಸಬಹುದು. ಅಲ್ಲದೆ ಟೊಮೆಟೋ ಮಾತ್ರವಲ್ಲ ಇತರೆ ತರಕಾರಿಗಳಾದ ಪೋಲ್‌ಬೀನ್ಸ್‌, ಯಾರ್‌್ಡ ಲಾಂಗ್‌ ಬೀನ್ಸ್‌, ಹೀರೆ, ಹಾಗಲ, ತೊಂಡೆ ಸೇರಿದಂತೆ ಮತ್ತಿತರ ಬಳ್ಳಿ ತರಕಾರಿ ಬೇಸಾಯಕ್ಕೂ ಉಪಯೋಗಿಸಬಹುದು. ಈ ಪದ್ಧತಿ ಅಳವಡಿಸುವುದರಿಂದ ಬೇಸಾಯ ಕ್ರಮದಲ್ಲಿ ಔಷಧಿ ಸಿಂಪಡಣೆ ಮತ್ತು ಕಟಾವು ಅತ್ಯಂತ ಸುಲಭ. ಗಿಡ ಮತ್ತು ಫಸಲಿನ ಆರೋಗ್ಯ ಸುಧಾರಣೆ ಜತೆಗೆ ತಾಕು ಆಕರ್ಷಕವಾಗಿ ಕಾಣುತ್ತದೆ.

ತಂತ್ರಜ್ಞಾನ ಅಳವಡಿಕೆ:  ಒಂದು ಎಕರೆಗೆ ಸುಮಾರು 65 ಸಾವಿರ ತಂತಿಗಳು (ತಂತಿಯ ಉದ್ದ 6 ಅಡಿ, ಅಗಲ 4 ಅಡಿ)ಬೇಕು. ಚಪ್ಪಟೆಯಾಗಿರುವ ತಂತಿಗಳನ್ನು ದುಂಡಾದ ರೂಪಕ್ಕೆ ತಂದು, ಟೊಮೆಟೋ ನಾಟಿ ಮಾಡಿದ 20 ದಿನಗಳಾದಾಗ ಪ್ರತಿ ಗಿಡಕ್ಕೆ ಒಂದರಂತೆ ಗಿಡವನ್ನು ಮಧ್ಯದಲ್ಲಿ ಉಳಿಸಿಕೊಂಡು ಜಿಐ ಮೆಶ್‌ಅನ್ನು ಭೂಮಿಗೆ ಚುಚ್ಚಬೇಕು. ಇದಕ್ಕೆ ಎಕರೆಗೆ 25 ಕೂಲಿ ಆಳುಗಳು ಬೇಕಾಗುತ್ತದೆ. ಕೂಲಿ ಆಳುಗಳನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಗಿಡಗಳು ತಂತಿಗಳ ಒಳಗೆ ಬೆಳೆಯುವಂತೆ ವ್ಯವಸ್ಥೆ ಮಾಡಬೇಕು. ಹೊರ ಬಂದ ರೆಂಬೆಗಳನ್ನು ತಂತಿಯ ಒಳಕ್ಕೆ ಸೇರಿಸಬೇಕು. ಬೆಳೆ ಪೂರ್ತಿ ಮುಗಿದ ನಂತರ ತಂತಿಗಳನ್ನು ತೆಗೆದು ಚಪ್ಪಟೆಯಾಗಿ ಜೋಡಿಸಿ ಕಟ್ಟುಗಳನ್ನು ಕಟ್ಟಿತೋಟದಲ್ಲಿ ಸುರಕ್ಷಿತವಾಗಿ ಸಂಗ್ರಹ ಮಾಡಬೇಕು. ಇದರಿಂದ ಮುಂದಿನ ಬೆಳೆಗೆ ಪುನಃ ಬಳಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕೃಷಿ ವಿಶ್ವವಿದ್ಯಾಲಯದ ತೋಟಕಾರಿಕಾ ವಿಭಾಗದ ಡಾ.ಕೆ.ಎನ್‌.ಶ್ರೀನಿವಾಸಪ್ಪ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಜಿ.ಐ.ವೈರ್‌ಮೆಶ್‌ ತಂತ್ರಜ್ಞಾನದ ಕುರಿತು ಹೆಚ್ಚಿನ ಮಾಹಿತಿಗೆ ಡಾ.ಕೆ.ಎನ್‌.ಶ್ರೀನಿವಾಸಪ್ಪ, ತೋಟಗಾರಿಕಾ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ. ಬೆಂಗಳೂರು. ಅವರನ್ನು ಸಂಪರ್ಕಿಸಬಹುದು.

ಟೊಮೆಟೋ ಪ್ರಾತ್ಯಕ್ಷಿಕೆ

ಕೃಷಿ ಮೇಳದಲ್ಲಿ ತೋಟಗಾರಿಕೆ ವಿಭಾಗದಿಂದ ಜಿ.ಐ.ವೈರ್‌ಮೆಶ್‌ ತಂತ್ರಜ್ಞಾನವನ್ನು ಟೊಮೆಟೋ ಬೆಳೆಯಲ್ಲಿ ಅಳವಡಿಸಲಾಗಿದೆ. ಅರ್ಕಾ ರಕ್ಷಕ್‌ ತಳಿಯ ಟೊಮೆಟೋ ಬೆಳೆಯಲಾಗಿದ್ದು, ಈ ತಳಿಯು 140ರಿಂದ 150 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಎಲೆ ಮುದುಡು ರೋಗ, ಅಂಗಮಾರಿ ರೋಗಗಳಿಗೆ ನಿರೋಧಕತೆ ಹೊಂದಿದೆ. ಈ ಬೆಳೆಯಿಂದ 1.75 ಲಕ್ಷ ರು. ಆದಾಯ ಪಡೆಯಬಹುದು ಎಂದು ಕೃಷಿ ವಿವಿಯ ತೋಟಗಾರಿಕೆ ವಿಭಾಗ ಮಾಹಿತಿ ನೀಡಿದೆ.

Follow Us:
Download App:
  • android
  • ios