ಮನೆಗೆ ಕುಡಿದು ಬಂದ ತನ್ನ ಕೈಯಲ್ಲಿದ್ದ ರಾಗಿ ಮುದ್ದೆ ಲಟ್ಟಿಸುವ ಕೋಲಿನಿಂದ ಒಂದೇ ಒಂದು ಏಟು ಹೊಡೆದಿದ್ದಾಳೆ. ಇಷ್ಟೇ ನೋಡಿ ಪತಿ ಅಲ್ಲೆ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರು (ಜು.05 ) ಪತಿ ಕುಡಿದು ಮನೆಗೆ ಬಂದಾಗ ಪತ್ನಿ ಜಗಳ ತೆಗೆದು ರಂಪಾಟ ಮಾಡಿದ ಹಲವು ಪ್ರಕರಣಗಳು ವರದಿಯಾಗಿದೆ. ಇದೀಗ ಬೆಂಗಳೂರಿನ ಸುದ್ದೆಗುಂಟೆಪಾಳ್ಯದಲ್ಲಿ ನಡೆದ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ. ಪತಿ ಮನೆಗೆ ಕುಡಿದು ಬಂದಿದ್ದಾನೆ. ಪತ್ನಿಯ ಪಿತ್ತ ನೆತ್ತಿಗೇರಿದೆ. ಕೈಯಲ್ಲಿದ್ದ ರಾಗಿ ಮುದ್ದೆ ಕೋಲಿನಿಂದ ಪತಿ ಮೇಲೆ ಆಕ್ರೋಶ ತೀರಿಸಿಕೊಂಡಿದ್ದಾಳೆ. ಆದರೆ ಪತ್ನಿ ಆಕ್ರೋಶ ತಣ್ಣಗಾಗುವಷ್ಟರಲ್ಲಿ ಪತಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೀಗ ಪತ್ನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರ ಇಬ್ಬರು ಮಕ್ಕಳು ಇದೀಗ ಅನಾಥರಾಗಿದ್ದಾರೆ.
ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿ
ಭಾಸ್ಕರ್ ಮನೆಗೆ ಬರುವಾಗ ಕಂಠಪೂರ್ತಿ ಕುಡಿದ್ದಾನೆ. ಕಳೆದ ಕೆಲ ದಿನಗಳಿಂದ ಪತಿ ಭಾಸ್ಕರ್ ಕುಡಿತ ಹೆಚ್ಚಿಸಿದ್ದ. ಮನೆಗೆ ಬರುವಾಗ ಕುಡಿದೇ ಬರುತ್ತಿದ್ದ. ಕುಡಿತದ ಕುರಿತು ಪತ್ನಿ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಆದರೆ ಭಾಸ್ಕರ್ ಮಾತ್ರ ತನ್ನ ಅಭ್ಯಾಸ ಕಡಿಮೆ ಮಾಡಿರಲಿಲ್ಲ. ಹೀಗೆ ರಾತ್ರಿಯಾಗುತ್ತಿದ್ದಂತೆ ಕುಡಿದು ಮನೆಗೆ ಬಂದ ಭಾಸ್ಕರ್ ನೋಡಿದ ಪತ್ನಿ ಶ್ರುತಿಗೆ ಆಕ್ರೋಶ ಹೆಚ್ಚಾಗಿದೆ. ಇತ್ತ ರಾತ್ರಿ ಊಟಕ್ಕೆ ಮುದ್ದೆ ಮಾಡುತ್ತಿದ್ದ ಪತ್ನಿ ಅಡುಗೆ ಮನೆಯಿಂದ ಎದ್ದು ಬಂದಿದ್ದಾಳೆ.
ಭಾಸ್ಕರ್ ಮೇಲೆ ಹಲ್ಲೆ
ಭಾಸ್ಕರ್ ಮತ್ತೆ ಕುಡಿದಿರುವುದನ್ನು ನೋಡಿ ಪತ್ನಿಗೆ ಶ್ರುತಿಗೆ ಪಿತ್ತ ನೆತ್ತಿಗೇರಿದೆ. ಮತ್ತೆ ಯಾಕೆ ಕುಡಿದಿದ್ದೀರಿ ಎಂದು ಪ್ರಶ್ನಿಸಿದ್ದಾಳೆ.ಇತ್ತ ಪತಿ ಹಾಗೂ ಪತ್ನಿ ನಡುವೆ ಸಣ್ಣದಾಗ ವಾಗ್ವಾದ ನಡೆದಿದೆ. ಮುದ್ದೆ ಮಾಡುತ್ತಿದ್ದಲ್ಲಿಂದ ಎದ್ದು ಬಂದ ಪತ್ನಿ ಶ್ರುತಿ ಕೈಯಲ್ಲಿದ್ದ ಮುದ್ದೆ ಕೋಲಿನಿಂದ ಭಾಸ್ಕರ್ ಮೇಲೆ ಹಲ್ಲೆ ಮಾಡಿದ್ದಾಳೆ. ಮೊದಲ ಏಟಿಗೆ ಭಾಸ್ಕರ್‌ಗೆ ತೀವ್ರವಾಗಿ ಗಾಯವಾಗಿದೆ. ಇದರ ಪರಿಣಾಮ ಭಾಸ್ಕರ್‌ಗೆ ಪ್ರತಿರೋಧಿಸಲು ಸಾಧ್ಯವಾಗಿಲ್ಲ. ಒಂದೆಡೆ ಕುಡಿತದ ನಶೆ, ಮತ್ತೊಂದೆಡೆ ಪತ್ನಿ ರಾಗಿ ಮುದ್ದೆ ಕೋಲಿನಿಂದ ಹೊಡೆತ ಹೊಡೆತ ಭಾಸ್ಕರ್ ತಲೆಗೆ ತೀವ್ರಗಾಯ ಮಾಡಿತ್ತು.
ಕುಸಿದು ಬಿದ್ದ ಭಾಸ್ಕರ್ ಬಳಿಕ ಏಳಲೇ ಇಲ್ಲ. ಪತಿ ಭಾಸ್ಕರ್‌ನ್ನು ಎಳೆದುಕೊಂಡು ಬೆಡ್ ಮೇಲೆ ಮಲಗಿಸಿದ ಪತ್ನಿ ಮರುದಿನ ಬೆಳಗ್ಗೆ ಪತಿ ನಿದ್ದೆಯಲ್ಲಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಪೊಲೀಸರು ಭಾಸ್ಕರ್ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ ಬಿದ್ದ ಪೊಲೀಸ್
ಭಾಸ್ಕರ್ ಮೃತದೇಹ ಪತ್ತೆಯಾದ ರೀತಿ, ಇತರ ಮಾಹಿತಿಗಳನ್ನು ಕಲೆಹಾಕಿದ್ದ ಪೊಲೀಸರಿಗೆ ಯಾವುದೇ ಅನುಮಾನ ಮೂಡಿರಲಿಲ್ಲ. ಆದರೂ ಮರಣೋತ್ತರ ಪರೀಕ್ಷೆ ಬಂದ ಬಳಿ ಪ್ರಕರಣದ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ಪೊಲೀಸರು ಮುಂದಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಭಾಸ್ಕರ್ ಸಹಜ ಸಾವಲ್ಲ. ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಅನ್ನೋದು ಪತ್ತೆಯಾಗಿದೆ. ಭಾಸ್ಕರ್ ಕಿವಿ ಹಾಗೂ ಹಣೆಯ ಕೆಳಗೆ ಗಂಭೀರವಾಗಿ ಗಾಯವಾಗಿರುವುದು ಪತ್ತೆಯಾಗಿದೆ.
ಶ್ರುತಿ ವಶಕ್ಕೆ ಪಡೆದು ವಿಚಾರಣೆ
ಮರಣೋತ್ತರ ಪರೀಕ್ಷೆ ವರದಿ ನೋಡಿದ ಪೊಲೀಸರು ನೆರವಾಗಿ ಭಾಸ್ಕರ್ ಮನೆಗೆ ಬಂದಿದ್ದಾರೆ. ಇತ್ತ ಪತ್ನಿ ಶ್ರುತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶ್ರುತಿ ನಡೆದ ಘಟನೆ ಬಹಿರಂಗಪಡಿಸಿದ್ದಾರೆ. ವಾಗ್ವಾದ ನಡೆದ ವೇಳೆ ಹಲ್ಲೆ ಮಾಡಿರುವುದಾಗಿ ಹೇಳಿದ್ದಾರೆ. ಕುಡಿದು ಬಂದ ಗಂಡ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ರಕ್ಷಣೆಗಾಗಿ ರಾಗಿ ಮುದ್ದೆ ಕೋಲು ಬಳಸಿದೆ. ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಆದರೆ ಪೊಲೀಸರಿಗೆ ಮತ್ತಷ್ಟು ಅನುಮಾನಗಳು ವ್ಯಕ್ತವಾಗಿದೆ. ಹೀಗಾಗಿ ಪ್ರಕರಣದ ಹೆಚ್ಚಿನ ವಿಚಾರಣೆಗೆ ಮುಂದಾಗಿದ್ದಾರೆ.
ಅನಾಥವಾದ ಇಬ್ಬರು ಮಕ್ಕಳು
ಪತ್ನಿಯ ಏಟಿಗೆ ಪತಿ ಶವವಾಗಿದ್ದಾನೆ. ಇತ್ತ ಪತ್ನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ಪತಿ ಹಾಗೂ ಪತ್ನಿ ಜಗಳದಲ್ಲಿ ಇಬ್ಬರು ಮಕ್ಕಳು ಇದೀಗ ಕಣ್ಣೀರಿಡುತ್ತಿದ್ದಾರೆ.
