ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ನಮ್ಮ ಮೆಟ್ರೋ ವಿಸ್ತರಿಸುವ ಪ್ರಸ್ತಾವನೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಕರ್ನಾಟಕದ ಐಟಿ ಕಂಪನಿಗಳು ಹೊಸೂರಿಗೆ ಸ್ಥಳಾಂತರಗೊಂಡು, ಕನ್ನಡಿಗರ ತೆರಿಗೆ ಹಣ ನೆರೆ ರಾಜ್ಯದ ಪಾಲಾಗಲಿದೆ ಎಂಬ ಆತಂಕ ಎದುರಾಗಿದೆ. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡುವಂತೆ ಕನ್ನಡಿಗರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು (ಅ.22): ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ರೈಲು ಜಾಲವನ್ನು ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಲಾರಂಭಿಸಿದೆ. ಹೊರನೋಟಕ್ಕೆ ಇದು ಕೇವಲ ಸಾರಿಗೆ ಸಂಪರ್ಕದಂತೆ ಕಂಡರೂ, ಭವಿಷ್ಯದಲ್ಲಿ ಕರ್ನಾಟಕದ ಬೃಹತ್ ಐಟಿ-ಬಿಟಿ ಉದ್ಯಮ ಹಾಗೂ ರಾಜ್ಯದ ಆರ್ಥಿಕತೆಗೆ ಇದು ಕೊಡಲಿ ಪೆಟ್ಟು ನೀಡಲಿದೆ ಎಂಬ ಎಚ್ಚರಿಕೆಯ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಮೂಡಿಸಿವೆ.

ಈ ಕುರಿತು ಚಿಂತಕ ಹಾಗೂ ತಂತ್ರಜ್ಞಾನ ಆಸಕ್ತರಾದ ಲಕ್ಷ್ಮೀಶ ಸಿ.ಎಸ್ ಅವರು ಮಾಡಿರುವ ಎಕ್ಸ್ (ಟ್ವಿಟರ್) ಪೋಸ್ಟ್ ಈಗ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ.

ಹೊಸೂರು ಮೆಟ್ರೋಗೆ ವಿರೋಧವೇಕೆ? ಲಕ್ಷ್ಮೀಶ ಸಿ.ಎಸ್ ಅವರ 3 ಪ್ರಮುಖ ವಾದಗಳು:

ಕನ್ನಡಿಗರ ತೆರಿಗೆ ಹಣ, ತಮಿಳುನಾಡಿಗೆ ಲಾಭ:

ಕರ್ನಾಟಕ ಸರ್ಕಾರ ಮತ್ತು ನಮ್ಮ ಮೆಟ್ರೋ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ 300+ ಕಿಲೋಮೀಟರ್ ಉದ್ದದ ಮೆಟ್ರೋ ಜಾಲವನ್ನು ನಿರ್ಮಿಸುತ್ತಿದೆ. ಆದರೆ, ತಮಿಳುನಾಡು ಸರ್ಕಾರ ಹೊಸೂರಿನಿಂದ ಕರ್ನಾಟಕದ ಗಡಿ ಅತ್ತಿಬೆಲೆಯವರೆಗೆ ಕೇವಲ 11 ಕಿಲೋಮೀಟರ್ ಮೆಟ್ರೋ ಮಾರ್ಗ ನಿರ್ಮಿಸಿ, ಕನ್ನಡಿಗರ ದುಡ್ಡಿನಲ್ಲಿ ನಿರ್ಮಾಣವಾದ ಸಂಪೂರ್ಣ 300+ ಕಿ.ಮೀ ಮೆಟ್ರೋ ಸೌಲಭ್ಯದ ಲಾಭವನ್ನು ಅನಾಯಾಸವಾಗಿ ಪಡೆದುಕೊಳ್ಳಲಿದೆ.

ಬೆಂಗಳೂರಿನ ಐಟಿ ಕಂಪನಿಗಳು ಹೊಸೂರಿಗೆ ಶಿಫ್ಟ್ ಆಗುವ ಆತಂಕ:

ತಮಿಳುನಾಡು ಸರ್ಕಾರ ಈಗಾಗಲೇ ಹೊಸೂರಿನಲ್ಲಿ ಸುಮಾರು 500 ಎಕರೆಗಳ ಬೃಹತ್ ಜಾಗವನ್ನು ಹೊಸ 'ಐಟಿ ಪಾರ್ಕ್'ಗಾಗಿ ಮೀಸಲಿಟ್ಟಿದೆ. ಒಂದು ವೇಳೆ ಹೊಸೂರಿಗೆ ಮೆಟ್ರೋ ಸಂಪರ್ಕ ಸಿಕ್ಕಿದರೆ, ಬೆಂಗಳೂರಿನ ಟ್ರಾಫಿಕ್‌ನಿಂದ ಬೇಸತ್ತಿರುವ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಐಟಿ-ಬಿಟಿ ಕಂಪನಿಗಳನ್ನು ಹೊಸೂರಿನತ್ತ ಸೆಳೆಯಲು ತಮಿಳುನಾಡು ರತ್ನಗಂಬಳಿ ಹಾಸಲಿದೆ. ಇದರಿಂದ ಕರ್ನಾಟಕದ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳು ನೆರೆ ರಾಜ್ಯದ ಪಾಲಾಗಲಿವೆ.

ಕಾವೇರಿ ಕಿರುಕುಳ ನೆನಪಿಸಿದ ಕನ್ನಡಿಗರು:

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರಕ್ಕೆ (Distress Formula) ಒಪ್ಪದೆ ಕರ್ನಾಟಕಕ್ಕೆ ಸದಾ ಕಾನೂನು ಕಂಟಕ ತಂದೊಡ್ಡುವ, ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಾಗಲೂ ಕೋರ್ಟ್‌ಗೆ ಹೋಗಿ ಅಡ್ಡಿಪಡಿಸಿದ ತಮಿಳುನಾಡಿಗೆ ಈಗ ಇದ್ದಕ್ಕಿದ್ದಂತೆ ಕರ್ನಾಟಕದ ಜೊತೆಗೆ ಕೈಜೋಡಿಸಿ ಬೆಳೆಯುವ ಆಸೆ ಬಂದಿದೆ. ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುವ ನೆರೆ ರಾಜ್ಯದ ತಂತ್ರಕ್ಕೆ ನಮ್ಮ ಸರ್ಕಾರಗಳು ಬಲಿಯಾಗಬಾರದು ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯದ ಪ್ರಮುಖ ರಾಜಕೀಯ ನಾಯಕರಿಗೆ ಎಚ್ಚರಿಕೆಯ ಟ್ಯಾಗ್:

ಈ ವಿಚಾರ ಕರ್ನಾಟಕದ ಅಸ್ಮಿತೆ ಹಾಗೂ ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖಿಸಿರುವ ಲಕ್ಷ್ಮೀಶ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಬಿ.ವೈ. ವಿಜಯೇಂದ್ರ ಅವರಿಗೆ ಪೋಸ್ಟ್ ಟ್ಯಾಗ್ ಮಾಡಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.

ಸದ್ಯ ಈ ಟ್ವೀಟ್‌ಗೆ ಕನ್ನಡಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, "ಬೆಂಗಳೂರು ಮೆಟ್ರೋ ಕರ್ನಾಟಕದ ಗಡಿಯಾದ ಅತ್ತಿಬೆಲೆ ಅಥವಾ ಬೊಮ್ಮಸಂದ್ರಕ್ಕೇ ಸೀಮಿತವಾಗಿರಬೇಕು, ತಮಿಳುನಾಡಿಗೆ ವಿಸ್ತರಿಸಬಾರದು" ಎಂಬ ಕೂಗು ಪ್ರಬಲವಾಗುತ್ತಿದೆ.