ಬೆಂಗಳೂರು[ನ.12]: ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 14 ನಗರ ಸ್ಥಳೀಯ ಸಂಸ್ಥೆಗಳ 409 ವಾರ್ಡ್‌ಗಳಿಗೆ ಇಂದು[ಮಂಗಳವಾರ] ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 5 ಗಂಟೆಯವರಿಗೆ ಮತದಾನ ನಡೆಯಲಿದೆ.  

ಮತದಾನಕ್ಕೆ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಎರಡು ಮಹಾನಗರ ಪಾಲಿಕೆಯ 105, 6 ನಗರಸಭೆಗಳ 194, 3 ಪುರಸಭೆಗಳ 69, 3 ಪಟ್ಟಣ ಪಂಚಾಯಿತಿಯ 50 ಸೇರಿದಂತೆ 418 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಇನ್ನುಳಿದ 409 ವಾರ್ಡ್‌ಗಳಲ್ಲಿ 1587 ಅಭ್ಯರ್ಥಿಗಳು ಸೋಮವಾರ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮತದಾನ ನಡೆಯುವ ಸ್ಥಳದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕನಕಪುರ ನಗರಸಭೆ ಕಾಂಗ್ರೆಸ್, ಬೀರೂರು ಪುರಸಭೆ ಬಿಜೆಪಿ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. 409 ವಾರ್ಡ್‌ಗಳ ವ್ಯಾಪ್ತಿಯಲ್ಲಿ 1380 ಮತಗಟ್ಟೆಗಳನ್ನುಸ್ಥಾಪಿಸಲಾಗಿದೆ. 13, 04614 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 

ಮತದಾರರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಚುನಾವಣಾ ಕಾರ್ಯಕ್ಕಾಗಿ 6900 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬಳಕೆ ಮಾಡಲಾಗುತ್ತಿದೆ. ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆಗಳಿರುವುದರಿಂದ ಮತದಾರರಿಗೆ ಗೊಂದಲ ತಪ್ಪಿಸಲು ಇವಿಎಂಗಳಲ್ಲಿ ಎಲ್ಲಾಅಭ್ಯರ್ಥಿಗಳ ಹೆಸರಿನ ಮುಂದೆ ಇತ್ತೀಚಿನ ಭಾವಚಿತ್ರ ಅಳವಡಿಸಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೋಟಾಗೆ ಅವಕಾಶ ನೀಡಲಾಗಿದೆ. 

ಉಪ ಚುನಾವಣೆ: ಮೊದಲ ದಿನ 7 ನಾಮಪತ್ರ 

ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ತೆರವಾಗಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕಾರ್ಯ ಸೋಮವಾರದಿಂದ ಆರಂಭಗೊಂಡಿದ್ದು, ಮೊದಲ ದಿನ ಏಳು ನಾಮಪತ್ರಗಳು ಸಲ್ಲಿಕೆಯಾಗಿವೆ. ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗುವ ಮುನ್ನ 29 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳು ಸೇರಿ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

ಅಥಣಿ ಕ್ಷೇತ್ರದಿಂದ 6, ಕಾಗವಾಡ 5 ,ಗೋಕಾಕ್ 2, ಯಲ್ಲಾಪುರ 4, ರಾಣೆಬೆನ್ನೂರು 1,ವಿಜಯನಗರ 3, ಚಿಕ್ಕಬಳ್ಳಾಪುರ 1, ಕೆ.ಆರ್.ಪುರ 4, ಯಶವಂತಪುರ 4, ಶಿವಾಜಿನಗರ 2, ಕೃಷ್ಣರಾಜಪೇಟೆ 1 ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದಿಂದ 2  ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಸಲು ನ.18 ರಂದು ಕಡೆಯ ದಿನ. ನ.21 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.5ರಂದು ಮತದಾನ, ಡಿ.9 ರಂದು ಮತ ಎಣಿಕೆ ನಡೆಯಲಿದೆ.