ವಿಧಾನಸೌಧಕ್ಕೆ 6 ಲಕ್ಷ ರೂಪಾಯಿ ನಗದು ಸಾಗಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ ಆತ, ಹಣವನ್ನು ತನ್ನ ದೊಡ್ಡಪ್ಪನ ಚಿಕಿತ್ಸೆಗೆಂದು ತಂದಿದ್ದಾಗಿ ಸಮರ್ಥಿಸಿಕೊಂಡಿದ್ದಾನೆ. 

ಬೆಂಗಳೂರು (ಮಾ.25): ವಿಧಾನಸೌಧದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ 6 ಲಕ್ಷ ರೂಪಾಯಿ ನಗದನ್ನು ಒಳಗೆ ಸಾಗಿಸಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಕೆಂಗಲ್ ಗೇಟ್ ಮೂಲಕ ವಿಧಾನಸೌಧ ಪ್ರವೇಶಿಸಲು ಯತ್ನಿಸುತ್ತಿದ್ದ ಯುವಕನ ಬ್ಯಾಗ್ ಅನ್ನು ಪೊಲೀಸರು ತಪಾಸಣೆ ನಡೆಸಿದಾಗ ಈ ಭಾರೀ ಮೊತ್ತದ ಹಣ ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯಲು ಬಂದಿರುವುದಾಗಿ ಹೇಳಿಕೊಂಡ ಯುವಕ, ಬ್ಯಾಗ್‌ನಲ್ಲಿ 6 ಲಕ್ಷ ರೂಪಾಯಿ ಹಣವನ್ನು ಇಟ್ಟುಕೊಂಡಿದ್ದ. ಇಷ್ಟು ದೊಡ್ಡ ಮೊತ್ತದ ಹಣದೊಂದಿಗೆ ಒಳಗೆ ಹೋಗುವಂತಿಲ್ಲ, ವಾಪಸ್ ಹೋಗಿ ಎಂದು ಪೊಲೀಸರು ಸೂಚಿಸಿದರೂ, ಶಾಸಕರನ್ನು ನೋಡಲೇಬೇಕು ಎಂದು ಯುವಕ ಹಠ ಹಿಡಿದಿದ್ದ ಎನ್ನಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಅವರ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಯುವಕನ ಸಮರ್ಥನೆ

ಪೊಲೀಸರ ವಿಚಾರಣೆ ವೇಳೆ ಯುವಕ ವಿಚಿತ್ರ ಹೇಳಿಕೆ ನೀಡಿದ್ದಾನೆ. "ನನ್ನ ದೊಡ್ಡಪ್ಪನಿಗೆ ಹುಷಾರಿಲ್ಲ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಚಿಕಿತ್ಸೆಗಾಗಿ ಈ ಹಣ ತಂದಿದ್ದೆ. ಅದರ ಜೊತೆಗೆ ಶಾಸಕರ ಕೆಲಸವಿದ್ದಿದ್ದರಿಂದ ಇಲ್ಲಿಗೆ ಬಂದೆ" ಎಂದು ಸಮರ್ಥಿಸಿಕೊಂಡಿದ್ದಾನೆ. ಸದ್ಯ ವಿಧಾನಸೌಧ ಪೊಲೀಸರು ಈ ಹಣದ ಮೂಲದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.