ಕೊರೋನಾ :  ತನಿಖಾ ಆಯೋಗ ನೀಡಿದ್ದ ನೋಟಿಸ್‌ಗೆ 99 ಅಧಿಕಾರಿಗಳು ನೀಡಿರುವ ಲಿಖಿತ ಉತ್ತರಗಳನ್ನು ಪರಿಶೀಲಿಸಿ ಸರ್ಕಾರ ಮತ್ತು ತನಿಖಾ ಆಯೋಗಕ್ಕೆ ಸಲ್ಲಿಸಲು ಬಿಬಿಎಂಪಿ ಆರೋಗ್ಯ ವಿಭಾಗ ನಿರ್ಧರಿಸಿದೆ.

ಬೆಂಗಳೂರು : ಕೊರೋನಾ ಅವಧಿಯಲ್ಲಿನ ವೈದ್ಯಕೀಯ ಪರಿಕರಗಳ ಖರೀದಿ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ನ್ಯಾ. ಮೈಕಲ್‌ ಡಿ.ಕುನ್ಹಾ ನೇತೃತ್ವದ ತನಿಖಾ ಆಯೋಗ ನೀಡಿದ್ದ ನೋಟಿಸ್‌ಗೆ 99 ಅಧಿಕಾರಿಗಳು ನೀಡಿರುವ ಲಿಖಿತ ಉತ್ತರಗಳನ್ನು ಪರಿಶೀಲಿಸಿ ಸರ್ಕಾರ ಮತ್ತು ತನಿಖಾ ಆಯೋಗಕ್ಕೆ ಸಲ್ಲಿಸಲು ಬಿಬಿಎಂಪಿ ಆರೋಗ್ಯ ವಿಭಾಗ ನಿರ್ಧರಿಸಿದೆ.

ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಹಲವು ನಿಯಮಗಳು ಉಲ್ಲಂಘನೆಯಾಗಿರುವ ಕುರಿತಂತೆ ತನಿಖಾ ಆಯೋಗ 101 ಅಧಿಕಾರಿಗಳಿಗೆ ನೋಟಿಸ್‌ ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಈವರೆಗೆ 99 ಅಧಿಕಾರಿಗಳಿಂದ ಆರೋಗ್ಯ ವಿಭಾಗಕ್ಕೆ ಉತ್ತರ ಸಲ್ಲಿಕೆಯಾಗಿದ್ದು, ಇನ್ನೂ ಇಬ್ಬರು ಅಧಿಕಾರಿಗಳು ಉತ್ತರ ನೀಡಬೇಕಿದೆ. ಈಗಾಗಲೇ ಸಲ್ಲಿಕೆಯಾಗಿರುವ ಉತ್ತರಗಳನ್ನು ಪರಿಶೀಲಿಸಿ, ಅವುಗಳನ್ನು ಸರ್ಕಾರ ಮತ್ತು ನ್ಯಾ. ಮೈಕಲ್‌ ಡಿ.ಕುನ್ಹಾ ನೇತೃತ್ವದ ತನಿಖಾ ಆಯೋಗಕ್ಕೆ ಸಲ್ಲಿಸಲಿದೆ. ಉತ್ತರ ಪರಿಶೀಲನೆ ವೇಳೆ, ಅಧಿಕಾರಿಗಳು ನೀಡಿರುವ ಉತ್ತರ ಸಮಂಜಸವಲ್ಲ ಎಂದು ತಿಳಿದು ಬಂದರೆ ಅವುಗಳ ಕುರಿತು ಟಿಪ್ಪಣಿಯನ್ನು ಆರೋಗ್ಯ ವಿಭಾಗ ಸರ್ಕಾರ-ತನಿಖಾ ಆಯೋಗಕ್ಕೆ ಸಲ್ಲಿಸಲಿದೆ.

ಸದ್ಯ ಸಲ್ಲಿಕೆಯಾಗಿರುವ ಉತ್ತರಗಳಲ್ಲಿ ಬಹುತೇಕ ಏಕರೂಪವಾಗಿವೆ. ಕೊರೋನಾ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಮತ್ತು ಸಕಾಲದಲ್ಲಿ ಸಮರ್ಪಕವಾಗಿ ಔಷಧ ಸೇರಿದಂತೆ ಇನ್ನಿತರ ಜೀವ ರಕ್ಷಕ ಪರಿಕರಗಳನ್ನು ತುರ್ತಾಗಿ ಖರೀದಿ ಮಾಡಬೇಕಿತ್ತು. ಸಮಯಾವಕಾಶದ ಕೊರತೆಯಿಂದಾಗಿ ಟೆಂಡರ್‌ ಕರೆಯಲು ಸಾಧ್ಯವಾಗಿಲ್ಲ. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾರೂ ಬರುತ್ತಿರಲಿಲ್ಲ. ಹಿರಿಯ ಅಧಿಕಾರಿಗಳು ಜನರ ಜೀವ ಉಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಹೀಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸದೇ ಖರೀದಿ ಮಾಡಲಾಗಿದೆ ಎಂಬ ಉತ್ತರಗಳನ್ನು ನೀಡಲಾಗಿದೆ.

ಅಧಿಕಾರಿಗಳು ಸಲ್ಲಿಸಿರುವ ಉತ್ತರದ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್‌ ಕಿಶೋರ್‌ ಸುರಳ್ಕರ್‌, ಉತ್ತರಗಳನ್ನು ಪರಿಶೀಲಿಸಿದ ನಂತರ ಅವುಗಳನ್ನು ಸರ್ಕಾರ ಮತ್ತು ತನಿಖಾ ಆಯೋಗಕ್ಕೆ ಕಳುಹಿಸಲಾಗುವುದು. ಉತ್ತರಗಳ ಸಾರಾಂಶವನ್ನೂ ಸಲ್ಲಿಸಲಾಗುವುದು.ನಂತರ ತನಿಖಾ ಆಯೋಗ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.