ಬೆಂಗಳೂರು (ನ.12): ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಪ್ರೇಯಸಿಗೆ ಇರಿದು, ಟೆಕ್ಕಿಯೊಬ್ಬ ತಾನು ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಜ್ಯೋತಿನಗರದಲ್ಲಿ ವಾಸವಿದ್ದ ದೆಹಲಿ ಮೂಲದ ಪಾಲಗಾವ್ ಥೆನ್ನಿಂಗ್ (28) ಹಾಗೂ ಈಕೆಯ ಪ್ರಿಯಕರ ಜಾರ್ಖಂಡ್ ಮೂಲದ ಹನ್ಸ್‌ರಾಜ್ (32) ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಯುವತಿ ಥೆನ್ನಿಂಗ್ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದು, ಹನ್ಸ್ ರಾಜ್ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಜ್ಯೋತಿನಗರದಲ್ಲಿ ಅಪಾರ್ಟ್‌ಮೆಂಟ್ ವೊಂದರಲ್ಲಿ ಪ್ರತ್ಯೇಕ ಪ್ಲ್ಯಾಟ್‌ಗಳಲ್ಲಿ ನೆಲೆಸಿದ್ದರು. ಹನ್ಸ್ ರಾಜ್ ಸೋಮವಾರ ಬೆಳಗ್ಗೆ 11.30ರಲ್ಲಿ ಯುವತಿ ಪ್ಲ್ಯಾಟ್‌ಗೆ ಹೋಗಿದ್ದ ವೇಳೆ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಆಕ್ರೋಶದಲ್ಲಿ ಯುವತಿ ಕುತ್ತಿಗೆಗೆ ಚೂರಿಯಿಂದ ಇರಿದು, ಬಳಿಕ ತಾನು ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.