Asianet Suvarna News Asianet Suvarna News

ಬೆಂಗಳೂರು: ನಗರಕ್ಕೆ ಪ್ರತ್ಯೇಕ ಉಗ್ರ ನಿಗ್ರಹ ಪಡೆ..!

ರಾಜಧಾನಿಯಲ್ಲಿ ಆತಂಕಕಾರಿ ಸಂಘಟನೆಗಳು, ಮಾನವ ಕಳ್ಳ ಸಾಗಾಣಿಕೆ ದಂಧೆ, ವಂಚಕ ಕಂಪನಿಗಳು ಹಾಗೂ ಡ್ರಗ್ಸ್‌ ಮಾಫಿಯಾಗೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಅಪರಾಧ ವಿಭಾಗವನ್ನು (ಸಿಸಿಬಿ) ಆಯುಕ್ತರು ಪುನರ್‌ ರಚಿಸಿದ್ದು, ನಗರದಲ್ಲಿ ಬೇರೂರಿರುವ ಉಗ್ರರ ಮೇಲೆ ಕಣ್ಗಾವಲಿಗೆ ಪ್ರತ್ಯೇಕ ‘ಭಯೋತ್ಪಾದಕ ನಿಗ್ರಹ ದಳ’ (ಎಟಿಎಸ್‌)ವನ್ನು ರಚಿಸಲಾಗಿದೆ.

separate anti terrorist force in bangalore
Author
Bangalore, First Published Nov 6, 2019, 7:34 AM IST

ಬೆಂಗಳೂರು(ನ.06): ರಾಜಧಾನಿಯಲ್ಲಿ ಆತಂಕಕಾರಿ ಸಂಘಟನೆಗಳು, ಮಾನವ ಕಳ್ಳ ಸಾಗಾಣಿಕೆ ದಂಧೆ, ವಂಚಕ ಕಂಪನಿಗಳು ಹಾಗೂ ಡ್ರಗ್ಸ್‌ ಮಾಫಿಯಾಗೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಅಪರಾಧ ವಿಭಾಗವನ್ನು (ಸಿಸಿಬಿ) ಆಯುಕ್ತರು ಪುನರ್‌ ರಚಿಸಿದ್ದು, ನಗರದಲ್ಲಿ ಬೇರೂರಿರುವ ಉಗ್ರರ ಮೇಲೆ ಕಣ್ಗಾವಲಿಗೆ ಪ್ರತ್ಯೇಕ ‘ಭಯೋತ್ಪಾದಕ ನಿಗ್ರಹ ದಳ’ (ಎಟಿಎಸ್‌)ವನ್ನು ರಚಿಸಿದ್ದಾರೆ.

ಇದರೊಂದಿಗೆ ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಬೆಂಗಳೂರಿಗೆ ಪ್ರತ್ಯೇಕ ಎಟಿಎಸ್‌ ಪ್ರಾರಂಭಿಸುವ ಯೋಜನೆ ಕೊನೆಗೂ ಕಾರ್ಯರೂಪಕ್ಕಿಳಿದಂತಾಗಿದೆ. ಮಹಿಳಾ ಸುರಕ್ಷತೆ, ಮಾದಕ ವಸ್ತು ಜಾಲ, ಆರ್ಥಿಕ ಅವ್ಯವಹಾರ ಹಾಗೂ ಆಂತರಿಕ ಭದ್ರತೆಗೆ ಅಪಾಯಕಾರಿ ಶಕ್ತಿಗಳ ನಿಯಂತ್ರಣಕ್ಕೆ ಸಿಸಿಬಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ಎಟಿಎಸ್‌ ಸೇರಿದಂತೆ ಹೊಸ ದಳಗಳನ್ನು ರಚಿಸಲಾಗಿದೆ ಎಂದು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರಿಗೆ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ ಸ್ಥಾಪನೆ.

ಇತ್ತೀಚೆಗೆ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆಗಳಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂಬ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವರದಿ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು, ಬೆಂಗಳೂರು ನಗರದಲ್ಲಿ ಮುಂಬೈ ಮತ್ತು ದೆಹಲಿ ಮಾದರಿಯಲ್ಲಿ ಪ್ರತ್ಯೇಕವಾದ ಭಯೋತ್ಪಾದನಾ ನಿಗ್ರಹ ದಳ ರಚಿಸುವುದಾಗಿ ಹೇಳಿದ್ದರು.

ಸಚಿವರ ಸೂಚನೆಯಂತೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಯಲ್ಲಿ ಎಟಿಎಸ್‌ ಅನ್ನು ಸೃಜಿಸಿದ್ದಾರೆ. ಈ ದಳಕ್ಕೆ ಎಸಿಪಿ ಮಟ್ಟದ ಅಧಿಕಾರಿಗೆ ಸಾರಥ್ಯ ವಹಿಸಲಾಗಿದ್ದು, ಜಂಟಿ ಆಯುಕ್ತರು ಹಾಗೂ ಡಿಸಿಪಿ ನೇರ ಉಸ್ತುವಾರಿಯಲ್ಲಿ ಎಟಿಎಸ್‌ ಕಾರ್ಯನಿರ್ವಹಿಸಲಿದೆ.

ಸಿಸಿಬಿ ದಳಗಳಲ್ಲಿ ಪುನರ್‌ ರಚನೆ

ಸಿಸಿಬಿಯಲ್ಲಿ ರೌಡಿ, ಮಾದಕ ವಸ್ತು ಜಾಲ ಹಾಗೂ ವಂಚನೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ ನಿಯಂತ್ರಣ ಮತ್ತು ತನಿಖೆ ಸಲುವಾಗಿ ಐದು ದಳಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ದಳಗಳನ್ನು ವಿಭಜಿಸಿ ಆರು ದಳಗಳನ್ನಾಗಿ ಪುನರ್‌ ರಚಿಸಿದ ಆಯುಕ್ತರು, ಎಟಿಎಸ್‌ ಹಾಗೂ ಮಹಿಳೆ ಸುರಕ್ಷತಾ ದಳಗಳನ್ನು ಹೊಸದಾಗಿ ಸೃಜಿಸಿದ್ದಾರೆ.

ರೌಡಿ ಚಟುವಟಿಕೆಗಳ ನಿಯಂತ್ರಣ ಹಾಗೂ ಸಂಘಟಿತ ಅಪರಾಧ ಕೃತ್ಯಗಳ ತಡೆಗೆ ಸಂಘಟಿತ ಅಪರಾಧ ದಳ (ಓಸಿಡಬ್ಲ್ಯು), ನಗರದಲ್ಲಿ ಬೇರೂರಿರುವ ಮಾದಕ ವಸ್ತು ಮಾಫಿಯಾದ ವಿರುದ್ಧ ಕಾರ್ಯಾಚರಣೆಗೆ ಮಾದಕ ದ್ರವ್ಯ ನಿಗ್ರಹ ದಳ (ಎಎನ್‌ಡಬ್ಲ್ಯು), ಬಹುಮುಖ್ಯ ಅಪರಾಧ ಪ್ರಕರಣಗಳ ತನಿಖೆಗೆ ವಿಶೇಷ ವಿಚಾರಣಾ ದಳ (ಎಸ್‌ಇಡಬ್ಲ್ಯು), ದೊಡ್ಡ ಮಟ್ಟದ ವಂಚನೆ, ಆರ್ಥಿಕ ಅಪರಾಧಗಳು, ನಕಲಿ ಕಂಪನಿಗಳ ವಿರುದ್ಧ ತನಿಖೆಗೆ ಆರ್ಥಿಕ ಅಪರಾಧ ದಳ (ಸಿಓಡಬ್ಲ್ಯು), ಮಹಿಳೆಯರ ವಿರುದ್ಧ ಅಪರಾಧಗಳ ತನಿಖೆ, ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳ ಸಾಗಾಣಿಕೆಯ ವಿರುದ್ಧದ ಕಾರ್ಯಾಚರಣೆಗೆ ಮಹಿಳಾ ಸುರಕ್ಷತಾ ದಳ (ಡಬ್ಲ್ಯುಪಿಡಬ್ಲ್ಯು) ಹಾಗೂ ನಗರದಲ್ಲಿ ಉಗ್ರಗಾಮಿ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹ, ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ದುಷ್ಕೃತ್ಯಗಳ ತನಿಖೆ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ನಿರ್ವಹಣೆಯ ಜವಾಬ್ದಾರಿಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ (ಎಟಿಎಸ್‌)ಕ್ಕೆ ವಹಿಸಲಾಗಿದೆ.

ಚಳಿಗಾಲದಲ್ಲಿ ದೊಡ್ಡ ದಾಳಿ ನಡೆಸಲು ಉಗ್ರರ ಸಂಚು

Follow Us:
Download App:
  • android
  • ios