ಪ್ರತಿ ದಿನ ಬೆಂಗಳೂರಲ್ಲಿ ಖರ್ಚಾಗುವ ಹಣ ಎಷ್ಟು? ಇಷ್ಟೊಂದು ಹಣ ಎಲ್ಲಿ ಹೋಗುತ್ತಿದೆ?, ಭಾರತ ಟೆಕ್ ಸಿಟಿ ಬೆಂಗಳೂರಲ್ಲಿ ಪ್ರತಿ ದಿನದ ಖರ್ಚು ವೆಚ್ಚದ ಮಾಹಿತಿ ಹಲವರನ್ನು ಅಚ್ಚರಿಗೊಳಿಸುವುದು ಖಚಿತ

ಬೆಂಗಳೂರು (ಏ.12) ಭಾರತದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವೇತನ ಹೆಚ್ಚು ಜೊತೆಗೆ ಖರ್ಚು ಕೂಡ ಹೆಚ್ಚು. ಅತೀ ಹೆಚ್ಚಿನ ಮಂದಿ ಕೆಲಸ ಮಾಡಲು ಬೆಂಗಳೂರನ್ನೇ ಆಯ್ಕೆ ಮಾಡುತ್ತಾರೆ. ಇತ್ತ ಬೆಂಗಳೂರಲ್ಲಿ ಸಂಚಾರ ದಟ್ಟಣೆ, ಟ್ರಾಫಿಕ್ ಕೂಡ ಹೆಚ್ಚು. ಕರ್ನಾಟಕ ಸರ್ಕಾರ, ಗ್ರೇಟರ್ ಬೆಂಗಳೂರು ಅಥಾರಿಟಿ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಬೆಂಗಳೂರಿನಲ್ಲಿ ಪ್ರತಿ ದಿನ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಈ ಪೈಕಿ ಮೂಲಭೂತ ಸೌಕರ್ಯಗಳಿಗೆ ಖರ್ಚಾಗುವ ಹಣ ಜುಜುಬಿ.ಇನ್ನೆಲ್ಲವೂ ನೀರಿನಂತೆ ಹಲವು ಕಾರಣಗಳಿಂದ ಖರ್ಚಾಗುತ್ತಿದೆ. ಹೀಗೆ ಪ್ರತಿ ದಿನ ಖರ್ಚಾಗುವ ಹಣ ಬರೋಬ್ಬರಿ 100 ಕೋಟಿ ರೂಪಾಯಿ ಎಂದು ಜನಾಗ್ರಹ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಒಂದು ದಿನ 100 ಕೋಟಿ ರೂಪಾಯಿ ಖರ್ಚು

ಬೆಂಗಳೂರಲ್ಲಿ ಒಂದು ದಿನ ಸಾಗಲು 100 ಕೋಟಿ ರೂಪಾಯಿ ಬೇಕು. ಸರ್ಕಾರ ಹಾಗೂ ಸರ್ಕಾರದ ಹಲವು ಸಂಸ್ಥೆಗಳು ಬೆಂಗಳೂರಲ್ಲಿ ಪ್ರತಿ ದಿನ 100 ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ವಿಶೇಷ ಅಂದರೆ ಇದು 2021-22ರ ಲೆಕ್ಕ. ಈಗಿನ ಲೆಕ್ಕ ನೋಡಿದರೆ 200 ಕೋಟಿ ರೂಪಾಯಿ ತಲುಪಿರುತ್ತದೆ. ಸರ್ಕಾರ ಹಾಗೂ ಸರ್ಕಾರದ 13 ಸಂಸ್ಥೆಗಳ 70 ಆರ್ಥಿಕ ದಾಖಲೆಗಳಲ್ಲಿ ಈ ಖರ್ಚು ವೆಚ್ಚ ಬಯಲಾಗಿದೆ.

ಒಂದು ವರ್ಷದಲ್ಲಿ 38,455 ಕೋಟಿ ರೂಪಾಯಿ ಖರ್ಚು

2021-22ರ ಆಯ ವ್ಯಯದ ದಾಖಲೆಗಳಲ್ಲಿ ಈ ಸ್ಫೋಟಕ ಮಾಹಿತಿ ಬಯಲಾಗಿದೆ. ಬೆಂಗಳೂರು ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಸಿಟಿ ಪೊಲೀಸ್, ಮೆಟ್ರೋ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ವ್ಯಯಿಸುವ ವಾರ್ಷಿಕ ವೆಚ್ಚ ಬರೋಬ್ಬರಿ 38,455 ಕೋಟಿ ರೂಪಾಯಿ. ವಿಶೇಷ ಅಂದರೆ ಇದರಲ್ಲಿ ಶೇಕಡಾ 20 ರಷ್ಟು ಮಾತ್ರ ಗ್ರೇಟರ್ ಬೆಂಗಳೂರು ಪಾಲಿಕೆ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಖರ್ಚು ಮಾಡುತ್ತಿದೆ. ಇನ್ನುಳಿದ ಶೇಕಡಾ 80ರಷ್ಟು ಖರ್ಚು ವೆಚ್ಚಗಳು ಇತರ ಸರ್ಕಾರಿ ಸಂಸ್ಥೆಗಳು ಮಾಡುತ್ತಿದೆ.

ಪ್ರತಿ 100 ಕೋಟಿ ಖರ್ಚಾಗರು ಕಿರಿಕಿರಿ ತಪ್ಪಿಲ್ಲ

ಬೆಂಗಳೂರಲ್ಲಿ ಪ್ರತಿ ದಿನ 100 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಗುಂಡಿ ಬಿದ್ದ ರಸ್ತೆ, ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ, ನೀರಿನ ಸಮಸ್ಯೆ, ಕಾಮಗಾರಿ ಸಮಸ್ಯೆ, ಮಾಲಿನ್ಯ ಸಮಸ್ಯೆ ಸೇರಿದಂತೆ ಸಾವಿರ ಸಮಸ್ಯೆಗಳು ಪ್ರತಿ ದಿನ ಬೆಂಗಳೂರಿಗರನ್ನು ಕಾಡುತ್ತಲೇ ಇದೆ. ಹೀಗಾಗಿ ಜನಸಾಮಾನ್ಯರು 100 ಕೋಟಿ ರೂಪಾಯಿ ಖರ್ಚಿನಲ್ಲಿ ಪ್ರಮುಖರ ಜೇಬು ತುಂಬುವ ಹಣವೆಷ್ಟು ಎಂದು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಆದಾಯ ಹಾಗೂ ಖರ್ಚು ಒಂದೇ ರೀತಿ ಆಗುತ್ತಿದೆಯಾ ಅನ್ನೋ ಅನುಮಾನವು ವ್ಯಕ್ತವಾಗುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಹಣ ಖರ್ಚು ಮಾಡುತ್ತಿಲ್ಲ. ಇದೇ ಕಾರಣದಿಂದ ಬೆಂಗಳೂರಿಗರ ಸಮಸ್ಯೆಗೆ ಪರಿಹಾರವೂ ಸಿಗುತ್ತಿಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.