ಬಾಂಗ್ಲಾ ವಲಸಿಗರಿಂದ ಬೆಂಗಳೂರಲ್ಲಿ ನಡೀತಿದೆ ವೇಶ್ಯಾವಾಟಿಕೆ ದಂಧೆ!
ಖೋಟಾ ನೋಟು ಜಾಲದಲ್ಲೂ ಅಕ್ರಮ ವಲಸಿಗರು ಭಾಗಿ| ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದ ಆಘಾತಕಾರಿ ಸಂಗತಿ| ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಮಟ್ಟಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ ಬಾಂಗ್ಲಾ ವಲಸಿಗರು|ಜೈಲಿನಲ್ಲಿ 50ಕ್ಕೂ ಹೆಚ್ಚು ಮಂದಿ ಬಾಂಗ್ಲನ್ನರು|
ಎನ್.ಲಕ್ಷ್ಮಣ್
ಬೆಂಗಳೂರು[ಅ.30]: ಖೋಟಾ ನೋಟು, ವೇಶ್ಯಾವಾಟಿಕೆ, ಮಾದಕ ದ್ರವ್ಯ ಸಾಗಾಟ ಮತ್ತು ಬಾಂಗ್ಲಾ ನುಸುಳುಕೋರರು..!
ಹೌದು, ತುತ್ತಿನ ಚೀಲ ತುಂಬಿಕೊಳ್ಳಲು ಬಂದ ಬಾಂಗ್ಲಾ ಅಕ್ರಮ ವಲಸಿಗರ ಪೈಕಿ ಹಲವರು ಇದೀಗ ಖೋಟಾ ನೋಟಿನಂತಹ ದಂಧೆಯಲ್ಲಿ ತೊಡಗುವ ಮೂಲಕ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಮಟ್ಟಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಇದರ ಜತೆಗೆ ಮಾದಕ ದ್ರವ್ಯ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲೂ ಬಾಂಗ್ಲಾ ನುಸುಳುಕೋರರ ಪಾತ್ರ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಸಾಕ್ಷ್ಯ ಕೊಟ್ಟರೂ ನಿರ್ಲಕ್ಷ್ಯ!
ನಿತ್ಯ ಕೋಟ್ಯಂತರ ರುಪಾಯಿ ನಕಲಿ ನೋಟುಗಳು ಯೋಧರ ಕಣ್ತಪ್ಪಿಸಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆ ಮೂಲಕ (ಬಾಂಗ್ಲಾ-ಭಾರತ ಗಡಿ ಪ್ರದೇಶ) ಭಾರತ ಪ್ರವೇಶಿಸುತ್ತಿವೆ. ಈ ನಕಲಿ ನೋಟುಗಳು ಬಾಂಗ್ಲಾ ನುಸುಳುಕೋರರೊಂದಿಗೆ ಗಡಿದಾಟಿ ದೇಶ ಪ್ರವೇಶಿಸುತ್ತಿವೆ. ಅಲ್ಲದೆ, ಗಡಿ ದಾಟಿಸಲು ಪ್ಯಾಕೆಟ್ ಎಸೆಯುವ ತಂತ್ರ ಬಳಸಲಾಗುತ್ತಿದೆ. ಅಲ್ಲಿಂದ ತರಲಾದ ನಕಲಿ ನೋಟುಗಳನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ಹರಡಲಾಗುತ್ತಿದೆ ಎಂಬ ಆತಂಕಕಾರಿ ಅಂಶ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ತನಿಖೆ ವೇಳೆ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಬೆಂಗಳೂರು ಹೊರಲವಯದ ಮಾದನಾಯಕನಹಳ್ಳಿಯಲ್ಲಿ ಏಳು ಲಕ್ಷ ರುಪಾಯಿ ಖೋಟಾ ನೋಟು ಸಿಕ್ಕಿತ್ತು. ಈ ದಂಧೆಯ ಜಾಲ ಹಿಡಿದು ಹೋದ ರಾಷ್ಟ್ರೀಯ ತನಿಖಾ ದಳಕ್ಕೆ ಬಾಂಗ್ಲಾದೇಶದ ಗಡಿಯಿಂದ ಖೋಟಾ ನೋಟುಗಳನ್ನು ನುಸುಳುಕೋರರು ತಂದು ಸರಬರಾಜು ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.
ಕಡು ಬಡವರೇ ಟಾರ್ಗೆಟ್:
ಖೋಟಾ ನೋಟು ದಂಧೆಗೆ ದಂಧೆಕೋರರು ಗಡಿಭಾಗದ ಅನಕ್ಷರಸ್ಥರು ಹಾಗೂ ಬಾಂಗ್ಲಾ ನುಸುಳುಕೋರರನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಮಾಲ್ಡಾ ಜಿಲ್ಲೆಯ ಪಾರ್ಡೆನ್‌ಪುರ ಕುಗ್ರಾಮ. ಗ್ರಾಮದಲ್ಲಿರುವ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ವಿದ್ಯಾಭ್ಯಾಸ ಇಲ್ಲ. ಇಂತಹವರನ್ನು ಇತ್ತೀಚಿನ ದಿನಗಳಲ್ಲಿ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎನ್‌ಐಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹುಬ್ಬಳ್ಳೀಲೂ ಬಾಂಗ್ಲಾ ವಲಸಿಗರ ಕರಾಳ ಹೆಜ್ಜೆ: ಬೆಚ್ಚಿ ಬಿದ್ದ ಜನತೆ
ಇನ್ನು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಗರದ ಪ್ರದೇಶಗಳಲ್ಲಿ ಬಾಂಗ್ಲಾ ನುಸುಳಕೋರರು ವೇಶ್ಯಾವಾಟಿಕೆಯನ್ನೇ ದೊಡ್ಡ ವೃತ್ತಿಯಾಗಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಅಮಾಯಕ ಹೆಣ್ಣುಮಕ್ಕಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಯೋಧರ ಕಣ್ತಪ್ಪಿಸಿ ನಗರಕ್ಕೆ ಕರೆತರುವ ದಲ್ಲಾಳಿಗಳು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುತ್ತಿದ್ದಾರೆ. ಈ ಮೂಲಕ ಬಾಂಗ್ಲಾ ನುಸುಳುಕೋರರು ತಮ್ಮದೇ ಆದ ವ್ಯವಸ್ಥಿತ ಜಾಲವನ್ನೇ ಸೃಷ್ಟಿಸಿಕೊಂಡು ಕೋಟ್ಯಂತರ ರುಪಾಯಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಯಾಬಾ’ ಎಂಬ ಮಾದಕ ದ್ರವ್ಯ!:
ಬಾಂಗ್ಲಾದೇಶಿಗರು ದೇಶದಲ್ಲಿ ತಮ್ಮದೇ ಆದ ಮಾದಕ ಜಾಲವನ್ನು ಸೃಷ್ಟಿಸಿಕೊಂಡಿದ್ದು, ಈ ದಂಧೆ ಕರ್ನಾಟಕದಲ್ಲಿಯೂ ಸಕ್ರಿಯವಾಗಿದೆ. ‘ಯಾಬಾ’ ಎಂಬ ಹೆಸರಿನ ಮಾದಕ ದ್ರವ್ಯದ ಟ್ಯಾಬ್ಲೆಟ್ ಬಾಂಗ್ಲಾದೇಶದಲ್ಲಿ ಲಭ್ಯವಿದೆ. ಬಾಂಗ್ಲಾದೇಶದ ಈ ಮಾದಕ ದ್ರವ್ಯಕ್ಕೆ ವಿವಿಧ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಬಾಂಗ್ಲಾ ನುಸುಳುಕೋರರು ದೇಶಕ್ಕೆ ತಂದು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದಾರೆ. ಈ ಟ್ಯಾಬ್ಲೆಟ್‌ವೊಂದನ್ನು 300 ರಿಂದ 500 ರು.ಗಳಿಗೆ ಮಾರಾಟ ಮಾಡುತ್ತಾರೆ ಎಂದು ಸಿಸಿಬಿ ಅಧಿಕಾರಿ ಮಾಹಿತಿ ನೀಡಿದರು.
ಜೈಲಿನಲ್ಲಿ 50ಕ್ಕೂ ಹೆಚ್ಚು ಮಂದಿ ಬಾಂಗ್ಲನ್ನರು
ಕರ್ನಾಟಕದ ವಿವಿಧೆಡೆ ಖೋಟಾ ನೋಟು, ವೇಶ್ಯಾವಾಟಿಕೆ, ಮಾದಕ ದ್ರವ್ಯ ಸಾಗಾಟ ಹಾಗೂ ಕಳ್ಳತನ ಸೇರಿದಂತೆ ಸಣ್ಣಪುಟ್ಟಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಸುಮಾರು 50 ಕ್ಕೂ ಹೆಚ್ಚು ಮಂದಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಬಂಧಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಇವರು ಜಾಮೀನಿನ ಹೊರಗಡೆ ಬಂದ ಮೇಲೆ ಪೊಲೀಸರ ಕೈಗೆ ಸಿಗುತ್ತಿಲ್ಲ. ಇಂತಹ ಅಕ್ರಮ ಬಾಂಗ್ಲಾ ವಲಸಿಗರು ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
6-7 ಕೋಟಿ ರು. ಒಡೆಯ!
ದೆಹಲಿ ಪೊಲೀಸರಿಗೆ ಅಪರಾಧ ಪ್ರಕರಣವೊಂದರಲ್ಲಿ ಬೇಕಿದ್ದ ಬಾಂಗ್ಲಾ ನುಸುಳಕೋರನೊಬ್ಬ ಕೆ.ಆರ್.ಪುರದಲ್ಲಿ ಕಳೆದ ಏಳು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ. ನಾಲ್ಕೈದು ತಿಂಗಳ ಹಿಂದೆ ರಾಷ್ಟ್ರೀಯ ತನಿಖಾ ತಂಡ ಆರೋಪಿಯನ್ನು ಹಿಡಿದು ದೆಹಲಿ ಪೊಲೀಸರಿಗೆ ಒಪ್ಪಿಸಿತ್ತು. ಆರೋಪಿ ನಗರದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದು, ನಾಲ್ಕೈದು ಲಾರಿಗಳನ್ನು ಹೊಂದಿದ್ದ. ಆರೋಪಿ ಅಕ್ರಮವಾಗಿ ಆರೇಳು ಕೋಟಿ ರು. ಮೊತ್ತದ ಆಸ್ತಿ ಹೊಂದಿರುವುದಾಗಿ ಬಾಯ್ಬಿಟ್ಟಿದ್ದ. ಆರೋಪಿ ಬಳಿ ಆಧಾರ್ ಕಾರ್ಡ್, ಗುರುತಿನ ಚೀಟಿ ಸೇರಿದಂತೆ ಎಲ್ಲಾ ದಾಖಲೆಗಳು ಪತ್ತೆಯಾಗಿದ್ದವು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಇಂದಿಗೂ ಕೂಡ ತಿಳಿದಿಲ್ಲ. ಆರೋಪಿಯನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ.ಅಶೋಕ್ ಕುಮಾರ್ ಅವರು, ಈಶಾನ್ಯ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಯೋಧರು ಮತ್ತು ಸೇನೆಯ ಗುಪ್ತಚರ ಅಧಿಕಾರಿಗಳು ಬಾಂಗ್ಲಾದೇಶಿಗರ ಅಪರಾಧ ಕೃತ್ಯದ ಬಗ್ಗೆ ಮಾಹಿತಿ ಹೊಂದಿದ್ದಾರೆ. ಸ್ಥಳೀಯ ಪೊಲೀಸರು ಅಲ್ಲಿನ ಯೋಧರು ಮತ್ತು ಗುಪ್ತಚರ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಬೇಕು. ಪೊಲೀಸರು ಬಾಂಗ್ಲಾ ವಲಸಿಗರ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.