Asianet Suvarna News

ಜಾಮೀನು ಕೊಡಿಸಲು ನಕಲಿ ಶ್ಯೂರಿಟಿ ದಂಧೆ! ಪಾವಗಡದ ಮಹಿಳೆಯೇ ಕಿಂಗ್‌ಪಿನ್‌

ನಕಲಿ ಶೂರಿಟಿ ನೀಡಿ ನೂರಾರು ಜನರಿಗೆ ಜಾಮೀಣು ಕೊಡಿಸಿದ್ದ ಮಹಿಳೆಯರು ಸೇರಿದಂತೆ ಗ್ಯಾಂಗನ್ನು ಅರೆಸ್ಟ್ ಮಾಡಲಾಗಿದೆ. 

Pavagada Women Is Kingpin For Fake Surety Gang
Author
Bengaluru, First Published Nov 15, 2019, 7:45 AM IST
  • Facebook
  • Twitter
  • Whatsapp

ಬೆಂಗಳೂರು [ನ.15]:  ನಕಲಿ ದಾಖಲೆ ಸೃಷ್ಟಿಸಿ ವಿವಿಧ ಅಪರಾಧ ಪ್ರಕರಣಗಳ ಸುಮಾರು 200 ಆರೋಪಿಗಳ ಜಾಮೀನಿಗೆ ಭದ್ರತಾ ಠೇವಣಿ (ಶ್ಯೂರಿಟಿ) ಕೊಟ್ಟಿದ್ದ ಇಬ್ಬರು ಮಹಿಳೆ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಹೆಸರಘಟ್ಟದ ಮಧುಕುಮಾರ್‌, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಗೊಲ್ಲರಹಟ್ಟಿಗ್ರಾಮದ ರತ್ನಮ್ಮ, ರಮಾದೇವಿ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ನರಸಿಂಹಮೂರ್ತಿ ಬಂಧಿತರು. ಆರೋಪಿಗಳಿಂದ ನಕಲಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಹಲಸೂರು ಗೇಟ್‌ ಠಾಣೆಯ ಎರಡು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜಾಮೀನುಗಳಿಗೆ ಸಲ್ಲಿಕೆಯಾಗಿದ್ದ ಭದ್ರತಾ ಠೇವಣಿಗಳ ಬಗ್ಗೆ ಶಂಕೆ ಮೂಡಿದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಜಾಮೀನುದಾರರ ಜಾಲ ಬೆಳಕಿಗೆ ಬಂದಿತು ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಮೊಬೈಲ್‌ ಕರೆಗಳು ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ವಿಚಾರಣೆ ಬಳಿಕ ಜಾಮೀನು ಪಡೆದು ತಪ್ಪಿಸಿಕೊಂಡಿರುವ ಆರೋಪಿಗಳ ವಿವರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 ಸಾವಿರಕ್ಕಾಗಿ ಜಾಮೀನಿಗೆ ಸಹಿ!

ಅಪರಾಧ ಪ್ರಕರಣಗಳಲ್ಲಿ ಕ್ರಿಮಿನಲ್‌ಗಳಿಗೆ ನಕಲಿ ಜಾಮೀನುದಾರರ ಸೃಷ್ಟಿಸುವ ಜಾಲವೇ ಕಾರ್ಯನಿರ್ವಹಿಸುತ್ತಿದ್ದು, ಈ ಕೃತ್ಯಕ್ಕೆ ಆರೋಪಿಗಳ ಕೆಲ ವಕೀಲರು ಸಹ ನೆರವು ನೀಡುತ್ತಿದ್ದಾರೆ. ಈಗ ಬಂಧಿತರಾಗಿರುವ ನಾಲ್ವರು ಆರೋಪಿಗಳು, ಕೇವಲ 1 ಸಾವಿರದಿಂದ 2 ಸಾವಿರ ಪಡೆದು ಭದ್ರತಾ ಠೇವಣಿಗಳ ದಾಖಲಾತಿಗಳಿಗೆ ಸಹಿ ಹಾಕಿದ್ದಾರೆ. ತಾವು ಯಾರಿಗೆ ಜಾಮೀನು ಕೊಟ್ಟಿದ್ದೇವೆ ಎಂಬ ಮಾಹಿತಿಯೂ ಅವರಿಗೆ ಗೊತ್ತಿಲ್ಲ. ಹೀಗಾಗಿ ಈ ಆರೋಪಿಗಳ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿವಿಧ ಪೊಲೀಸ್‌ ಠಾಣೆಗಳ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಸುಮಾರು 200 ಆರೋಪಿಗಳಿಗೆ ನಕಲಿ ಭೂ ದಾಖಲೆಗಳನ್ನು ತಯಾರಿಸಿದ್ದಾರೆ. ಬಳಿಕ ಆ ದಾಖಲೆಗಳಲ್ಲಿ ತಾವೇ ನಿಜವಾದ ಭೂ ಮಾಲಿಕರೆಂದು ಘೋಷಣಾ ಪತ್ರ ಸಲ್ಲಿಸಿ, ಜಾಮೀನು ನೀಡಿ ಆರೋಪಿಗಳು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷ ತಂಡ ರಚನೆ:

ನಗರದ ವಿವಿಧ ನ್ಯಾಯಾಲಯಗಳಲ್ಲಿ ಜಾಮೀನು ಪಡೆದಿದ್ದ ಬಹಷ್ಟುಮಂದಿ ಆರೋಪಿಗಳು, ಜೈಲಿನಿಂದ ಹೊರ ಬಂದ ನಂತರ ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದರು. ಅಲ್ಲದೆ ಬಹುಪಾಲು ಆರೋಪಿಗಳಿಗೆ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಹಾಗೂ ವಾರೆಂಟ್‌ಗಳನ್ನು ಜಾರಿಯಾಗುತ್ತಿರಲ್ಲಿಲ್ಲ. ಈ ವಿಚಾರ ತಿಳಿದ ಹಿರಿಯ ಅಧಿಕಾರಿಗಳು, ಆ ಆರೋಪಿಗಳ ಜಾಮೀನುದಾರರ ಪತ್ತೆಗೆ ಸೂಚಿಸಿದ್ದರು. ಆಗ ಜಾಮೀನು ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆಗಳು ಸಲ್ಲಿಕೆಯಾಗಿರುವ ಸಂಗತಿ ಬಯಲಾಯಿತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಭಾಸ್ಕರ್‌ ರಾವ್‌ ಅವರು, ನಕಲಿ ದಾಖಲೆ ನೀಡಿ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ ವ್ಯಕ್ತಿಗಳ ಪತ್ತೆಗೆ ಹಾಗೂ ನ್ಯಾಯಾಲಯದ ಸಮನ್ಸ್‌ ಮತ್ತು ವಾರೆಂಟ್‌ ಜಾರಿ ಪ್ರಗತಿಯ ಸುಧಾರಣೆಗೆ ಕ್ರಮ ಕೈಗೊಳ್ಳಲು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಅವರ ಉಸ್ತುವಾರಿಯಲ್ಲಿ ಸಿಸಿಬಿ ಅಧಿಕಾರಿಗಳ ವಿಶೇಷ ತಂಡ ರಚಿಸಿದ್ದರು. ಅದರಂತೆ ನಕಲಿ ಜಾಮೀನುದಾರರ ವಿರುದ್ಧ ಕಾರ್ಯಾಚರಣೆಯನ್ನು ಸಿಸಿಬಿ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಹಲಸೂರು ಗೇಟ್‌ ಠಾಣೆಯ ಅಪರಾಧ ಪ್ರಕರಣಗಳಲ್ಲಿ ನಕಲಿ ಜಾಮೀನು ನೀಡಿದ್ದ ನಾಲ್ವರನ್ನು ಡಿಸಿಪಿ ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ಮಾರ್ಗದರ್ಶನದಲ್ಲಿ ಮಹಿಳಾ ಸುರಕ್ಷತಾ ದಳದ ಎಸಿಪಿ ಬಿ.ಆರ್‌.ವೇಣುಗೋಪಾಲ್‌ ಹಾಗೂ ಇನ್‌ಸ್ಪೆಕ್ಟರ್‌ ಹಜರೇಶ್‌ ನೇತೃತ್ವದ ತಂಡದ ಆರೋಪಿಗಳನ್ನು ಬಂಧಿಸಿದೆ.

 ಆನ್‌ಲೈನ್‌ಲ್ಲಿ ಪಹಣಿ ಮಾಹಿತಿ ಕಳವು!

ಆನ್‌ಲೈನ್‌ನಲ್ಲಿ ರೈತರ ಹೆಸರಿನಲ್ಲಿರುವ ಪಹಣಿಗಳ ಮಾಹಿತಿ ಕದ್ದು ಬಳಿಕ ನಕಲಿ ಭೂ ದಾಖಲೆ ಸೃಷ್ಟಿಸುತ್ತಿದ್ದರು. ಆ ದಾಖಲೆಗಳನ್ನೇ ಅಪರಾಧ ಕೃತ್ಯಗಳ ಆರೋಪಿಗಳಿಗೆ ಜಾಮೀನು ಕೊಡಿಸಲು ಬಳಸುತ್ತಿದ್ದರು. ಇದರಿಂದ ಮೂಲ ಭೂ ಮಾಲಿಕರಿಗೆ ಕೃತ್ಯದ ವಿಷಯ ತಿಳಿಯುತ್ತಿರಲ್ಲಿಲ್ಲ. ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ತಾವೇ ಭೂ ಮಾಲಿಕ ಎಂದೂ ನಕಲಿ ಜಾಲದ ವ್ಯಕ್ತಿಗಳು ಹೇಳಿಕೊಳ್ಳುತ್ತಿದ್ದರು. ಅಲ್ಲದೆ, ನಕಲಿ ಠೇವಣಿದಾರರನ್ನಾಗಿ ಸಹ ಹಣದಾಸೆ ತೋರಿಸಿ ಕೂಲಿ ಕೆಲಸಗಾರರನ್ನೇ ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಸಹ ಪ್ರಕರಣಗಳು:

ಈ ಹಿಂದೆ ಸಹ ನಕಲಿ ಜಾಮೀನುದಾರರ ಪ್ರಕರಣಗಳು ಬಯಲಾಗಿದ್ದವು. ಅದರಲ್ಲಿ ಗೌರಿಬಿದನೂರು, ಮುಳಬಾಗಲು, ಶಿಡ್ಲಘಟ್ಟತಾಲೂಕಿನ ಕೆಲವರು ಬಂಧಿತರಾಗಿದ್ದರು. ಆದಾಗ್ಯೂ ನಕಲಿ ಜಾಮೀನುದಾರರ ಜಾಲ ಮತ್ತೆ ಸಕ್ರಿಯವಾಗಿದೆ. ಇದರಲ್ಲಿ ಒಂದು ಬಾರಿ ಸಿಕ್ಕಿಬಿದ್ದರೆ ಮತ್ತೆ ಅವರನ್ನು ಜಾಲದಲ್ಲಿ ಬಳಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಈ ದಂಧೆ ವ್ಯಾಪ್ತಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಂಧಿತರ ತಂಡಕ್ಕೆ ರತ್ನಮ್ಮ ಲೀಡರ್‌ ಆಗಿದ್ದು, ಕಬ್ಬನ್‌ ಪಾರ್ಕ್ನಲ್ಲಿ ಕುಳಿತು ಕೃತ್ಯಕ್ಕೆ ಸಂಚು ರೂಪಿಸಲಾಗಿದೆ. ಮರಣ ಹೊಂದಿದ್ದವರ ಹೆಸರಲ್ಲಿ ಭೂ ದಾಖಲೆ ಕದ್ದು ಅವರು ಕೃತ್ಯಕ್ಕೆ ಬಳಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇವರ ನೆರವಿನಿಂದ ಜಾಮೀನು ಪಡೆದಿರುವವರ ಜಾಮೀನು ರದ್ದುಪಡಿಸಲು ನ್ಯಾಯಾಲಯಗಳಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

-ಕುಲದೀಪ್‌ ಕುಮಾರ್‌ ಆರ್‌.ಜೈನ್‌, ಡಿಸಿಪಿ, ಸಿಸಿಬಿ.

 ಇತ್ತೀಚೆಗೆ ಅಕ್ರಮ ವಲಸೆ ಆರೋಪದಲ್ಲಿ ಬಂಧಿತರಾಗಿದ್ದ ಕೆಲವು ರೋಹಿಂಗ್ಯ ಜನರು ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಆಗ ಶ್ಯೂರಿಟಿದಾರರ ಮೇಲೆ ಶಂಕೆಗೊಂಡ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರು, ಭದ್ರತಾ ಠೇವಣಿ ಇಟ್ಟವರ ಪೂರ್ವಾಪರ ವಿಚಾರಣೆಗೆ ಎಸಿಪಿ ವೇಣುಗೋಪಾಲ್‌ ತಂಡಕ್ಕೆ ಸೂಚಿಸಿದರು. ಅದರಂತೆ ದಾಖಲೆಗಳನ್ನು ಬೆನ್ನುಹತ್ತಿದ್ದಾಗ ರತ್ನಮ್ಮ ತಂಡ ಸಿಕ್ಕಿಬಿತ್ತು ಎಂದು ಮೂಲಗಳು ಹೇಳಿವೆ.

ಅಣ್ಣನ ಸಾವಿನ ಬಳಿಕ ನಕಲಿ ದಾಖಲೆ ಕಲಿತಳು:

ಏಳು ವರ್ಷಗಳ ಹಿಂದೆ ರತ್ನಮ್ಮಳ ಸೋದರ ಮೃತಪಟ್ಟಿದ್ದ. ಆಗ ನ್ಯಾಯಾಲಯಗಳಿಗೆ ಭೂ ದಾಖಲೆಗಳ ಪರಿವರ್ತನೆ ಸಂಬಂಧ ಓಡಾಡುವಾಗ ಆಕೆಗೆ ಭದ್ರತಾ ಠೇವಣಿ ವಿಚಾರ ಗೊತ್ತಾಗಿದೆ. ಬಳಿಕ ನಕಲಿ ದಾಖಲೆ ಸೃಷ್ಟಿಸಿ ಶ್ಯೂರಿಟಿ ಕೊಡುವುದನ್ನು ಕಾಯಕ ಮಾಡಿಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ನನ್ನೂರಿನ ಸುತ್ತಮುಲಿನ ಹಳ್ಳಿಗಳಲ್ಲಿ ಮರಣ ಹೊಂದಿದ ವ್ಯಕ್ತಿಗಳ ಹೆಸರಿನ ಪಹಣಿ ಮಾಹಿತಿ ಕದ್ದು ಆಕೆ ನಕಲಿ ದಾಖಲೆ ಸೃಷ್ಟಿಸಿದ್ದಳು. ಮೃತ ವ್ಯಕ್ತಿಯ ಹೆಸರಿನ ಭೂ ದಾಖಲೆಗಳನ್ನು ಮತ್ತೊಬ್ಬ ಹೆಸರಿಗೆ ವರ್ಗಾವಣೆಗೆ ಮೂರು ತಿಂಗಳು ಕಾಲಾವಕಾಶವಿರುತ್ತದೆ. ಈ ಸಮಯವನ್ನೇ ರತ್ನಮ್ಮ ಬಳಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios