ಕೊರೋನಾ ನಿಯಂತ್ರಣಕ್ಕೆ ಎಪ್ರಿಲ್ 1 ರಿಂದ ಕಠಿಣ ಕ್ರಮ; ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ!
ಹೊಸ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕ ಸರ್ಕಾರ ಕಠಿಣ ಕ್ರಮ ಜಾರಿಗೆ ಮುಂದಾಗಿದೆ. ಎಪ್ರಿಲ್ 1 ರಿಂದ ನೂತನ ನಿಯಮ ಜಾರಿಗೊಳ್ಳುತ್ತಿದೆ.
ಬೆಂಗಳೂರು(ಮಾ.25): ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಬಿಬಿಎಂಪಿ ಜೊತೆ ಮಹತ್ವದ ಚರ್ಚೆ ನಡೆಸಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕೆಲ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಲು ನಿರ್ಧರಿಸಿದ್ದಾರೆ.
ದೇಶದಲ್ಲಿ ಅತಿಹೆಚ್ಚು ಕೊರೋನಾ ಕೇಸ್ ಇರೋ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ 1 ಜಿಲ್ಲೆ
ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1,400 ಪ್ರಕರಣಗಳು ದಾಖಲಾಗಿದೆ. ಇದು ಎರಡನೇ ಬಾರಿ ಕೊರೋನಾ ಪ್ರಕರಣಗಳ ಏರಿಕೆಯಲ್ಲಿ ಅತೀ ಹೆಚ್ಚಿನ ಪ್ರಕರಣವಾಗಿದೆ. ಹೀಗಾಗಿ ಬೆಂಗಳೂರಿಗೆ ಆಗಮಿಸುವ ಇತರ ಎಲ್ಲಾ ರಾಜ್ಯದವರಿಗೆ ನೆಗಟೀವ್ RT-PCR ವರದಿ ಕಡ್ಡಾಯವಾಗಿದೆ. ಎಪ್ರಿಲ್ 1 ರಿಂದ ರಿಪೋರ್ಟ್ ಕಡ್ಡಾಯವಾಗಿದೆ.
ಈ ಹಿಂದೆ ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ಚಂಡೀಘಡದಿಂದ ಆಗಮಿಸುವ ಪ್ರಯಾಣಿಕರಿಗೆ ಮಾತ್ರ ನೆಗಟೀವ್ RT-PCR ವರದಿ ಕಡ್ಡಾಯ ಮಾಡಲಾಗಿತ್ತು. ಇದೀಗ ಎಲ್ಲಾ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೂ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.
ಇದರ ಜೊತೆಗೆ ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಗರಿಷ್ಠ 200 ಮಂದಿಗಿಂತ ಹೆಚ್ಚಿನ ಜನ ಸೇರುವಂತಿಲ್ಲ. ಬೆಂಗಳೂರು ಹೊರಗಡೆ ಗರಿಷ್ಠ 500 ಮಂದಿ ಹೆಚ್ಚು ಜನ ಕಾರ್ಯಕ್ರಮಗಳಿಗೆ ಸೇರುವಂತಿಲ್ಲ. ಮಾರುಕಟ್ಟೆ ಸೇರಿದಂತೆ ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳು ಸರ್ಕಾರ ಮುಂದಾಗಿದೆ.