ಮೋಹನ ಹಂಡ್ರಂಗಿ

ಬೆಂಗಳೂರು [ಅ.09]:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಗುಜರಿ ಬಸ್‌ ಬಳಸಿಕೊಂಡು ಹೈಟೆಕ್‌ ‘ಸ್ತ್ರೀ ಶೌಚಾಲಯ’ ನಿರ್ಮಿಸಲು ಯೋಜನೆ ರೂಪಿಸಿದೆ.

ರಾಜಧಾನಿಯ ಹೃದಯ ಭಾಗದಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುತ್ತಾರೆ. ವಿಶೇಷವಾಗಿ ಮಹಿಳಾ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಈ ಸ್ತ್ರೀ ಶೌಚಾಲಯ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಈಗಾಗಲೇ ನೆರೆಯ ಮಹಾರಾಷ್ಟ್ರದ ಪುಣೆ ಮುನ್ಸಿಪಲ್‌ ಕಾರ್ಪೋರೇಶನ್‌ ಲಭ್ಯ ಗುಜರಿ ಬಸ್‌ ಮಾರ್ಪಡಿಸಿ ‘ಟಿ (ಮಹಿಳೆ) ಟಾಯ್ಲೆಟ್‌’ ಹೆಸರಿನಲ್ಲಿ ಯಶಸ್ವಿಯಾಗಿ ಯೋಜನೆ ಅನುಷ್ಠಾನಗೊಳಿಸಿದೆ. ಇದರಿಂದ ಪ್ರೇರಣೆ ಪಡೆದಿರುವ ಕೆಎಸ್‌ಆರ್‌ಟಿಸಿ, ನಿಗಮದಲ್ಲಿ ಲಭ್ಯವಿರುವ ಗುಜರಿ ಬಸ್‌ ಬಳಸಿಕೊಂಡು ಅತ್ಯಾಧುನಿಕ ಸೌಲಭ್ಯ ಒಳಗೊಂಡ ಸ್ತ್ರೀ ಶೌಚಾಲಯ ರೂಪಿಸಲು ಮುಂದಾಗಿದೆ.

ಏನೇನು ಸೌಲಭ್ಯ?:

ಈ ಬಸ್‌ನಲ್ಲಿ ಹಲವು ಸೌಲಭ್ಯಗಳು ಇರಲಿವೆ. ಶೌಚಾಲಯದಲ್ಲಿ ವಿದೇಶಿ ಶೈಲಿ (ವೆಸ್ಟರ್ನ್‌) ಮತ್ತು ಭಾರತೀಯ ಶೈಲಿಯ ಕಮೋಡ್‌ಗಳು, ಪ್ಲಶ್‌ ಹಾಗೂ ಕೈ ತೊಳೆಯಲು ಶುದ್ಧ ನೀರು, ಸೋಲಾರ್‌ ಲೈಟುಗಳು, ಪ್ಯಾನಿಕ್‌ ಬಟನ್‌, ಸ್ಯಾನಿಟರಿ ನ್ಯಾಪ್‌ಕಿನ್‌ ಡಿಸ್ಪೆನ್ಸರ್‌, ಮಕ್ಕಳಿಗೆ ಎದೆಹಾಲು ಕುಡಿಸುವ ಹಾಗೂ ಮಕ್ಕಳ ಡೈಪರ್‌ ಬದಲಾಯಿಸುವ ಕೊಠಡಿ, ವೈಫೈ ಕನೆಕ್ಷನ್‌ ಸೌಲಭ್ಯಗಳು ಇರಲಿವೆ. ಅಂತೆಯೆ ಕೆಫೆ, ಹೆಲ್ತ್‌ ಸೆಂಟರ್‌ ತೆರೆಯಲು ಅವಕಾಶವಿದೆ. ಈ ಬಸ್‌ನ ಹೊರ ಹಾಗೂ ಒಳಭಾಗವನ್ನು ಜಾಹೀರಾತಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು  ಮಾಹಿತಿ ನೀಡಿದರು.

ಸಿಎಸ್‌ಆರ್‌ ಫಂಡ್‌ ಬಳಕೆ :  ಈ ಯೋಜನೆ ಅನುಷ್ಠಾನಕ್ಕೆ ಅಂದಾಜು .12 ಲಕ್ಷ ಬೇಕಾಗಬಹುದು. ನಿಗಮವು ಈ ಯೋಜನೆಗೆ ಯಾವುದೇ ಹಣ ಭರಿಸುತ್ತಿಲ್ಲ. ನಿಗಮದೊಂದಿಗೆ ವ್ಯವಹಾರ ಇರಿಸಿಕೊಂಡಿರುವ ಖಾಸಗಿ ಕಂಪನಿಗಳ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ಫಂಡ್‌ನಲ್ಲಿ ಅನುದಾನ ಪಡೆದು ಹೈಟೆಕ್‌ ಸೌಲಭ್ಯಗಳ ಸ್ತ್ರೀ ಶೌಚಾಲಯ ನಿರ್ಮಿಸುವ ಚಿಂತನೆಯಿದೆ. ಈ ಸಂಬಂಧ ಕೆಲ ಕಂಪನಿಗಳ ಜತೆ ಚರ್ಚಿಸಲಾಗಿದೆ. ಈ ಪೈಕಿ ಒಂದು ಕಂಪನಿಯು ಯೋಜನೆ ಅನುಷ್ಠಾನಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ತಿಳಿಸಿದರು.

ನಿಗಮದಲ್ಲಿ ಪ್ರತಿ ವರ್ಷ ನೂರಕ್ಕಿಂತ ಹೆಚ್ಚಿನ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತದೆ. ಈ ಪೈಕಿ ಒಂದು ಬಸ್‌ ಯೋಜನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕಸದಿಂದ ರಸ ಮಾಡುವ ಹಾಗೆ ಗುಜರಿ ಬಸ್‌ ಮಾರ್ಪಡಿಸಿ, ಯೋಜನೆ ಸಾಕಾರಗೊಳಿಸುವುದು ನಿಗಮದ ಉದ್ದೇಶವಾಗಿದೆ. ಇದು ಸಂಚಾರಿ ಶೌಚಾಲಯವಲ್ಲ. ನಿಲ್ದಾಣದ ಆವರಣದಲ್ಲಿ ಶಾಶ್ವತವಾಗಿ ನೆಲೆಗೊಳಿಸಲಾಗುತ್ತದೆ. ಬಸ್‌ ನಿಲ್ದಾಣದ ಶೌಚಾಲಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆ ಕಾರ್ಮಿಕ ಪೈಕಿ ಕೆಲವರನ್ನು ಆಯ್ದುಕೊಂಡು ಸೂಕ್ತ ತರಬೇತಿ ಬಳಿಕ ಈ ಹೈಟೆಕ್‌ ಶೌಚಾಲಯ ನಿರ್ವಹಣೆಗೆ ನಿಯೋಜಿಸಲು ನಿರ್ಧರಿಸಿದೆ.