ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಅತೀ ಹೆಚ್ಚು ನರೇಗಾ ಹಾಜರಾತಿ ಅಕ್ರಮ
2024ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ರಾಜ್ಯದ 1,218 ಸಮುದಾಯ ಕಾಮಗಾರಿಗಳಲ್ಲಿ ಲೋಪದೋಷ ಪತ್ತೆಯಾಗಿದ್ದು, ಜಿಲ್ಲಾ ಮಟ್ಟದ ಓಂಬುಡ್ಸ್‌ಮನ್‌ಗಳು ₹2.34 ಲಕ್ಷ ದಂಡ ವಿಧಿಸಿದ್ದಾರೆ. ಎನ್‌ಎಂಎಂಎಸ್ ಹಾಜರಾತಿಯಲ್ಲಿ ಅಕ್ರಮ ನಡೆದಿದ್ದು, ಕಲಬುರಗಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ನರೇಗಾ ಹಾಜರಾತಿಯಲ್ಲಿ ಭಾರಿ ಗೋಲ್‌ಮಾಲ್: ಕಲಬುರಗಿಯಲ್ಲಿ ಅತೀ ಹೆಚ್ಚು ಅಕ್ರಮ
ಜಿಲ್ಲಾ ಮಟ್ಟದಲ್ಲಿ ಓಂಬುಡ್ಸ್‌ಮನ್‌ಗಳ ಪರಿಶೀಲನೆ ವೇಳೆ ಬಹಿರಂಗ | ತಪ್ಪಿತಸ್ಥರಿಗೆ ₹2.34 ಲಕ್ಷ ದಂಡ ವಿಧಿಸಿ ಇಲಾಖೆ ಎಚ್ಚರಿಕೆ
ನರೇಗಾ ಹಾಜರಾತಿ ಗೋಲ್ಮಾಲ್: 1218 ಕೇಸ್ ಪತ್ತೆ
ಸಿದ್ದು ಚಿಕ್ಕಬಳ್ಳೇಕೆರೆ ಕನ್ನಡಪ್ರಭ ವಾರ್ತೆ
ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ರಾಜ್ಯದಲ್ಲಿ 2024ನೇ ಸಾಲಿನಲ್ಲಿ ಕೈಗೊಂಡಿದ್ದ 1,218 ಸಮುದಾಯ ಕಾಮಗಾರಿಯಲ್ಲಿ ಲೋಪದೋಷ ಇರುವು ದನ್ನು ಜಿಲ್ಲಾ ಮಟ್ಟದ ಓಂಬುಡ್ಸ್‌ಮನ್‌ಗಳು ಪತ್ತೆ ಹಚ್ಚಿ 2.34 ಲಕ್ಷ ದಂಡ ವಿಧಿಸಿದ್ದಾರೆ. ನರೇಗಾದಡಿ ನಿರ್ವಹಿಸುವ ಸಮುದಾಯ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುತ್ತಿಲ್ಲ ಎಂದು ಸಾರ್ವಜನಿಕರಿಂದ ಆಯಾ ಜಿಲ್ಲೆಗಳ ಓಂಬುಡ್ಸ್ ಮನ್‌ಗಳಿಗೆ ಸಲ್ಲಿಕೆಯಾದ ದೂರುಗಳನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಎನ್ ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟ ರಿಂಗ್ ಸಿಸ್ಟಂ) ಹಾಜರಾತಿಯಲ್ಲಿ ಅಪರಾತಪರಾ ನಡೆಸಿರುವುದು ದೃಢಪಟ್ಟಿದೆ.
ನಿಯಮಗಳ ಪ್ರಕಾರ, ಸಮುದಾಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿ ದಿನ ಕೂಲಿ ಕಾರ್ಮಿಕರು ಕೆಲಸ ಮಾಡುವಾಗ 4 ಗಂಟೆಯ ಅಂತರದಲ್ಲಿ ದಿನಕ್ಕೆ ಎರಡು ಬಾರಿ ಎನ್‌ಎಂಎಂಎಸ್ ಫೋಟೋ ತೆಗೆದು ಅಪ್ ಲೋಡ್ ಮಾಡಬೇಕು. ಎಷ್ಟು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿ ದ್ದಾರೆ ಎಂದು ಎನ್‌ಎಂಆರ್ ಹಾಜರಾತಿಗೂ ಹಾಗೂ ಎನ್‌ಎಂಎಂಎಸ್ ಫೋಟೋದಲ್ಲಿ ರುವ ಕಾರ್ಮಿಕರ ಸಂಖ್ಯೆಗೂ ತಾಳೆ ಆಗಬೇಕು.
ಆದರೆ ಕಾಮಗಾರಿಯಲ್ಲಿ ಕಡಿಮೆ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸಿದ್ದಾರೆಂದು ಲೆಕ್ಕತೋರಿಸಲಾಗಿದೆ ಎಂದು ಸಾರ್ವಜನಿಕರಿಂದ ಆಯಾ ಜಿಲ್ಲೆಗಳ ಓಂಬುಡ್ಸ್‌ಮನ್‌ಗಳಿಗೆ ಬಹಳಷ್ಟು ದೂರು ಸಲ್ಲಿಕೆಯಾಗಿವೆ. ಈ ದೂರುಗಳ ಪರಿಶೀಲನೆ ನಡೆಸಿದಾಗ ರಾಜ್ಯದಲ್ಲಿ 1218 ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿರುವುದು ಬಹಿರಂಗವಾಗಿದೆ.
ಕಲಬುರಗಿಯಲ್ಲೇ 1000 ಪ್ರಕರಣ:
ನರೇಗಾದಡಿ ಕೈಗೊಳ್ಳುವ ಸಮುದಾಯ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆಯಲ್ಲಿ ಮೋಸ ತಪ್ಪಿಸಲು ಕೇಂದ್ರ ಸರ್ಕಾರ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸುವುದನ್ನು ಕಡ್ಡಾಯ ಮಾಡಿದೆ. ಎನ್‌ಎಂಎಂಎಸ್ ಹಾಜರಾತಿಯ ಲೋಪ ಕಲಬುರಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಕಂಡು ಬಂದಿದೆ. ಕಲಬುರಗಿಯಲ್ಲಿ ಬರೋಬ್ಬರಿ ಸಾವಿರ ಪ್ರಕರಣ ದಾಖಲಾಗಿದ್ದು, ₹28 ಸಾವಿರ ದಂಡ ವಿಧಿಸಲಾಗಿದೆ. ಈ ಪೈಕಿ 6 ಸಾವಿರ ವಸೂಲಿ ಮಾಡಲಾಗಿದೆ. ಹಾಜರಾತಿ ದೋಷಕ್ಕೆ ಸಂಬಂಧಿಸಿ ಅಧಿಕಾರಿಗಳು, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕೆಲ ಪ್ರಕರಣಗಳಲ್ಲಿ ತಪ್ಪು ಮರುಕಳಿಸದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನುಳಿದಂತೆ ಬೆಳಗಾವಿಯಲ್ಲಿ 44 ಪ್ರಕರಣ, ವಿಜಯಪುರ-42, ಬೆಂಗಳೂರು ಗ್ರಾಮಾಂತರ -30, ಬಾಗಲಕೋಟೆ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ 18 ಪ್ರಕರಣ ಪತ್ತೆ ಹಚ್ಚಲಾಗಿದೆ. ಹಾಸನ, ಕೊಡಗು, ದಕ್ಷಿಣ ಕನ್ನಡ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಉತ್ತರಕನ್ನಡ, ಶಿವಮೊಗ್ಗ, ತುಮಕೂರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ಬೆರಳೆಣಿಕೆಯ ಪ್ರಕರಣ ನಡೆದಿವೆ.
ಕಾಮಗಾರಿಯಲ್ಲಿ ಲೋಪ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ತಡೆಯಲು ವರ್ಷಕ್ಕೆ 2 ಬಾರಿ ಗ್ರಾಪಂ ಗಳ ಸೋಷಿಯಲ್ ಆಡಿಟ್ ನಡೆಸಲಾಗುತ್ತಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪಿಡಿಒ, ಇಒ, ಸಿಇಒ ಸೇರಿ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ: ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ